ಪರಿಚಯ ಪ್ರಕಾಶನದ ವತಿಯಿಂದ ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆದ ‘ಅಕ್ಷರ ಹೊಸ ಕಾವ್ಯ-ವಸಂತ ಕವಿಗೋಷ್ಠಿ’ಯನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಮತ್ತು ರಂಗಕರ್ಮಿ ಡಾ. ಸುಜಾತ ಅಕ್ಕಿ, ‘ಕನ್ನಡದ ಕವಿಗಳು ರಾಜರು, ಮಾರ್ಗಕಾರರು, ಕಲಿಗಳೂ ಹೌದು ಎಂದು ವ್ಯಾಖ್ಯಾನಿಸಿದರು.
ಕವಿಗಳು ಕಾವ್ಯದ ಮೂಲಕ ಜನರ ನೋವುಗಳನ್ನು ಅಭಿವ್ಯಕ್ತಿಸುವುದಲ್ಲದೆ, ಸಮಾಜಕ್ಕೆ ಸಂದೇಶವನ್ನು ಕೂಡ ನೀಡುತ್ತಾರೆ. ಸಮಾಜದ ಸಮಸ್ಯೆಗಳಿಗೆ ದನಿಯಾಗುವ ಚಿಕಿತ್ಸಕರೂ ಹೌದು. ಪ್ರತಿಯೊಬ್ಬ ವ್ಯಕ್ತಿಯಲ್ಲು ಕವಿತ್ವದ ಗುಣವಿದೆ. ಆದ್ದರಿಂದಲೇ, ಯಾವುದೇ ವಿಷಯ ಕುರಿತು ಕಾವ್ಯವನ್ನು ರಚಿಸುವ ಶಕ್ತಿ ಕನ್ನಡಿಗರಲ್ಲಿ ಹಾಸುಹೊಕ್ಕಾಗಿದೆ. ಜನಪದ ಸಾಹಿತ್ಯದ ರಚನೆಯ ಹಿಂದೆ ಕೂಡ ಅನಕ್ಷರಸ್ಥ ಸೃಜನಶೀಲ ತಾಯಿಯ ಮನಸ್ಸು ಕೆಲಸ ಮಾಡಿದೆ. ಹನ್ನೆರಡನೆಯ ಶತಮಾನದಲ್ಲಿ ಭಕ್ತಿರಸದ ಜೊತೆಗೆ ನವರಸಗಳನ್ನು ಸೇರಿಸಿ ಸಾಹಿತ್ಯ ರಚನೆ ಮಾಡಿರುವ ನಿದರ್ಶನ ಕನಿಷ್ಠ ಸಾಹಿತ್ಯ ಚರಿತ್ರೆಯಲ್ಲಿದೆ ಎಂದರು.
ಕಾವ್ಯಕ್ಕೆ ಒಂದು ವಿಶಿಷ್ಠವಾದ ಶಕ್ತಿಯಿದೆ. ಇದನ್ನು ಸಾಕ್ಷೀಕರಿಸುವ ಹಲವು ಘಟನೆಗಳು ಸಾಹಿತ್ಯ ಚರಿತ್ರೆಯಲ್ಲಿವೆ. ಕನ್ನಡ ನೆಲದಲ್ಲಿ ಹುಟ್ಟಿದ ವಚನ ಸಾಹಿತ್ಯವು ರಾಜಸತ್ತೆಯ ವಿರುದ್ಧ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಿ, ಸಮಾಜದಲ್ಲಿ ಸಮಾನತೆ ಸಾಧಿಸಿದ್ದು ಅದರ ವೈಶಿಷ್ಟ್ಯವಾಗಿದೆ. ಹಾಗೆಯೇ, ಫಿನ್ ಲೆಂಡಿನಲ್ಲಿ ಸಹ ಕಾವ್ಯದ ಮೂಲಕ ರಷ್ಯಾದ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆದ ದೇಶವಾಗಿದೆ. ಅಂತಹ ವಿಶಿಷ್ಟ ಶಕ್ತಿ ಕಾವ್ಯಕ್ಕಿದೆ ಎಂದು ವಿಶ್ಲೇಷಿಸಿದರು.
ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮಾತನಾಡಿ, ಕವಿ ಯಾವಾಗಲು ಪ್ರಾದೇಶಿಕ ಮತ್ತು ಕಾಲದ ಗಡಿಯನ್ನು ಮೀರಿದ ಕವಿತೆಗಳನ್ನು ರಚಿಸಬೇಕು. ಆಗ ಕವಿತೆಯ ಅಂತಃರಂಗದಲ್ಲಿ ಸಾರ್ವತ್ರಿಕ ಸತ್ಯ ಹುದುಗಲು ಸಾಧ್ಯವಾಗುತ್ತದೆ. ಮಂಡ್ಯದ ತಲ್ಲಣಗಳೇ ಇಡೀ ಇಂಡಿಯಾದ, ಜಗತ್ತಿನ ತಲ್ಲಣಗಳಾಗಿಯೂ ಇಂದು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಅಕ್ಷರ ಹೊಸ ಕಾವ್ಯ ಕವಿಗೋಷ್ಠಿಯು ಸಮಗ್ರ ಮಂಡ್ಯದ ತಲ್ಲಣಗಳನ್ನು ಸಮರ್ಥವಾಗಿ ಬಿಂಬಿಸಿದೆ. ಆ ಮೂಲಕ ಭ್ರಷ್ಟಾಚಾರ, ಕೋಮುವಾದ, ಮಕ್ಕಳ ಮತ್ತು ಸ್ತ್ರೀಯರ ಮೇಲಿನ ಶೋಷಣೆ, ಭ್ರೂಣ ಹತ್ಯೆ ಹಾಗೂ ರೈತರ ತಲ್ಲಣಗಳಿಗೆ ಕವಿಗಳು ಗಟ್ಟಿಯಾದ ದನಿಯಾಗಿ ತಮ್ಮ ಜೀವಪರತೆಯನ್ನು ಮೆರೆದಿದ್ದಾರೆ ಎಂದರು.

ಪ್ರತಿಯೊಬ್ಬ ವ್ಯಕ್ತಿಗೂ ಸಾಹಿತ್ಯ ಕೃತಿಗಳ ಓದು ಬಹಳ ಮುಖ್ಯ. ಓದುವ ಹವ್ಯಾಸ ನಮ್ಮನ್ನು ಅರಿವಿನೆಡೆಗೆ, ವಿಕಾಸದೆಡೆಗೆ ಕರೆದೊಯ್ಯುತ್ತದೆ. ಆದ್ದರಿಂದ, ಯುವ ಕವಿಗಳು ಕನ್ನಡದ ಹಿರಿಯ ಕವಿಗಳ ಮಹತ್ವದ ಕೃತಿಗಳ ಅಧ್ಯಯನ ಮಾಡುವ ಅಗತ್ಯವಿದೆ. ತಮ್ಮ ಕಾವ್ಯ ಕೃಷಿಯ ದೃಷ್ಟಿ ಸೂಕ್ಷ್ಮವಾಗಲು, ಹೊಳಪು ಹೆಚ್ಚಲು, ಸ್ಪಷ್ಟ ಚಿಂತನೆ ರೂಪುಗೊಳ್ಳಲು ಕನ್ನಡ ಕಾವ್ಯದ ವಿಸ್ತೃತ ಓದಿಗೆ ಇಂದಿನ ಯುವ ಕವಿಗಳು ಮುಂದಾಗಬೇಕು ಎಂದು ಕರೆ ನೀಡಿದರು.
ಕವಿಗೋಷ್ಠಿಯಲ್ಲಿ ಬಿ.ಟಿ. ವಿಶ್ವನಾಥ್, ಶುಭಶ್ರೀ ಪ್ರಸಾದ್, ಭವಾನಿ ಲೋಕೇಶ್, ಗಣಂಗೂರು ನಂಜೇಗೌಡ, ನಂದಾದೀಪ, ಕೆ.ಪಿ. ರತಿಕುಮಾರಿ, ಡೇವಿಡ್ ಪ್ರತಿಭಾಂಜಲಿ, ಚಂದ್ರು ಮಂಡ್ಯ, ಆಶಾ ನಿಯಂಬಡಿ ಸದ್ದಾಂ ಹುಸೇನ್, ಎನ್. ಧನಂಜಯ ,ಸುಪ್ರಿಯ ಶಿವಣ್ಣ, ಸಿದ್ದು ಹಾದನೂರು, ಪ್ರಶಾಂತ್ ಬೆಳತೂರು, ಲೋಕೇಶ್ ಕಲ್ಕುಣಿಕೆ, ಅಪ್ಪಾಜಿ ಕೆ. ಶೆಟ್ಟಳ್ಳಿ, ಕೆ.ಕೆ. ವರದರಾಜು, ಪುಷ್ಪಲತಾ ಸ್ವರ್ಣಸಂದ್ರ, ಸುಧಾಮಣಿ ಜಯಪ್ಪ, ಬಸಪ್ಪ ಸಾಸಲಮರಿ ಕ್ಯಾಂಪ್, ಅರವಿಂದ ಪ್ರಭು, ಟಿ. ಸತೀಶ್ ಜವರೇಗೌಡ ಮತ್ತಿತರರು ಸೇರಿದಂತೆ 34 ಮಂದಿ ಕವನ ವಾಚನ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು| ಇಮ್ಮಾವು ಗೇಣಿದಾರರಿಗೆ ಪರಿಹಾರ ಕಲ್ಪಿಸುವಂತೆ ರೈತ ಸಂಘದಿಂದ ಅನಿರ್ಧಿಷ್ಟಾವಧಿ ಧರಣಿ
ಕವಿಗೋಷ್ಠಿಯಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ. ವಿನಯಕುಮಾರ್, ಸಂಸ್ಕೃತಿ ಚಿಂತಕ ಪ್ರೊ. ಪ್ರಸನ್ನಕುಮಾರ್ ಕೆರಗೋಡು, ಕನ್ನಡ ಪರಿಚಾರಕ ಕೆ.ಟಿ. ಹನುಮಂತು, ಚಿತ್ರಕೂಟ ಸಂಸ್ಥೆಯ ಮುಖ್ಯಸ್ಥ ಎಚ್.ಎಸ್. ಧನುಷ್ ಗೌಡ, ಪರಿಚಯ ಪ್ರಕಾಶನದ ಸ್ಥಾಪಕ ಎಂ.ಎನ್. ಶಿವಕುಮಾರ್ ಆರಾಧ್ಯ ಇದ್ದರು.





