ಮಹಿಳೆಯರಿಗೆ ಅವಮಾನ ಮಾಡಿದ ಕನ್ನೇರಿ ಸ್ವಾಮಿ; ಸಮರ್ಥನೆ ಮಾಡಿಕೊಂಡ ಜಗದೀಶ್ ಶೆಟ್ಟರ್!

Date:

ಮಠಗಳು ಭಾರತೀಯ ಸಮಾಜದಲ್ಲಿ ನೈತಿಕತೆ, ಅಧ್ಯಾತ್ಮ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿದ್ದಾರೆ. ಜನರು ಮಠಾಧೀಶರನ್ನು ಕೇವಲ ಧಾರ್ಮಿಕ ನಾಯಕರಾಗಿ ಮಾತ್ರವಲ್ಲ, ಮಾರ್ಗದರ್ಶಕರಾಗಿಯೂ ಕಾಣುತ್ತಾರೆ. ಇಂತಹ ನಾಡಿನಲ್ಲಿ ಮಠದ ಸ್ವಾಮಿಗಳ ಮಾತುಗಳು ಸಮಾಜದ ನಡವಳಿಕೆಗೆ ಮಾದರಿಯಾಗಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸ್ವಾಮಿಗಳ ವಿವಾದಾತ್ಮಕ ಹೇಳಿಕೆಗಳು ಮಠದ ಪಾವಿತ್ರ್ಯ ಮತ್ತು ಸಾಮಾಜಿಕ ನಂಬಿಕೆಗೆ ಧಕ್ಕೆ ತರುತ್ತಿವೆ.

ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕಾಡಸಿದ್ದೇಶ್ವರ ಸ್ವಾಮೀಜಿಯವರು ಮಹಿಳೆಯರನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿರುವುದು ಇದಕ್ಕೆ ಉದಾಹರಣೆ. ಮುಖ್ಯಮಂತ್ರಿ ಕೃಪಾ ಪೋಷಿತ ಲಿಂಗಾಯತ ಮಠಾಧೀಶರ ಒಕ್ಕೂಟ ಎಂಬ ನಾಟಕ ಮಂಡಳಿಯ ಕಲಾವಿದರು ಕರ್ನಾಟಕದಲ್ಲಿ ಒಂದು ತಿಂಗಳ ಕಾಲ ಬಸವ ಸಂಸ್ಕೃತಿ ಉತ್ಸವ ಎಂದು ತಿರುಗಾಡಿದ್ದಾರೆ. ಅವರನ್ನು ಮುಂದೆ ಕೂರಿಸಿಕೊಂಡು ಆ ಸಮಾರಂಭದಲ್ಲಿ ಸ್ವಾಮೀಜಿ ಎನಿಸಿಕೊಂಡಿದ್ದ ಕಾಡಸಿದ್ದೇಶ್ವರರು, ಅವಾಚ್ಯ ಶಬ್ಧಗಳನ್ನು ಬಳಸಿರುವುದಲ್ಲದೆ, ʼಅವರನ್ನು ಹಿಡಿದು ಮೆಟ್ಟಲ್ಲಿ ಹೊಡೆಯಬೇಕುʼ ಎಂಬಂತಹ ಶಬ್ದಗಳನ್ನು ಬಳಸಿರುವುದು ಕೇವಲ ಅಸಂವೇದನಶೀಲವಾಗಿರುವುದಲ್ಲದೆ, ಮಹಿಳಾ ಗೌರವ ಮತ್ತು ಸಾಮಾಜಿಕ ಸಂವೇದನೆಗೆ ನೇರ ಹಾನಿ ಮಾಡುವಂತಿವೆ. ಸಮಾಜದ ನೈತಿಕ ನಾಯಕನಿಂದ ಇಂತಹ ಮಾತುಗಳು ಬರಬೇಕೇ ಎಂಬುದನ್ನು ಒಮ್ಮೆ ಅವರೇ ಪ್ರಶ್ನೆ ಮಾಡಿಕೊಳ್ಳಲಿ.

ಧಾರ್ಮಿಕ ವೇದಿಕೆಗಳಿಂದ ಇಂತಹ ಅಸಂಸ್ಕೃತ ಮಾತುಗಳು ಹೊರಬರುವುದು ಕೇವಲ ವ್ಯಕ್ತಿಯ ವೈಯಕ್ತಿಕ ತಪ್ಪಲ್ಲ; ಅದು ಆತನ ಆಶ್ರಯದಲ್ಲಿರುವ ಧಾರ್ಮಿಕ ವಲಯದ ಮನೋಭಾವವನ್ನೂ ಬಿಚ್ಚಿಡುತ್ತದೆ. ಮಠಾಧೀಶರು ಸಮಾಜಕ್ಕೆ ನೈತಿಕ ದಾರಿದೀಪರಾಗಬೇಕಾದರೆ, ಅವರ ಪದಗಳು ಶಾಂತಿ, ಗೌರವ ಮತ್ತು ಸಮಾನತೆಯ ಸಂದೇಶ ನೀಡಬೇಕಾಗಿದೆ. ಇಲ್ಲದಿದ್ದರೆ ಮಠಗಳ ಮೇಲೆ ಜನರ ನಂಬಿಕೆ ಕುಸಿಯುವುದರೊಂದಿಗೆ ಧಾರ್ಮಿಕ ಪ್ರಭಾವವೂ ದುರ್ಬಲಗೊಳ್ಳುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ರೀತಿಯ ಪ್ರಕರಣಗಳು ಬೆಳಕಿಗೆ ಬಂದಾಗ ಜನಪ್ರತಿನಿಧಿಗಳು ಸಮಾಜದ ನೈತಿಕ ಶಕ್ತಿಯ ಪರವಾಗಿ ನಿಲ್ಲಬೇಕು. ಆದರೆ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಅವರ ಇತ್ತೀಚಿನ ಹೇಳಿಕೆ ಮತ್ತೊಮ್ಮೆ ಧರ್ಮ ಮತ್ತು ರಾಜಕೀಯದ ನಂಟಿನ ನೈತಿಕ ಪ್ರಶ್ನೆಗಳನ್ನು ಎತ್ತಿದೆ. ಮಹಿಳೆಯರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಪರವಾಗಿ ನಿಂತು, “ಇದು ಸರ್ಕಾರದ ಹಿಂದೂ ಧರ್ಮವನ್ನು ಒಡೆಯುವ ಕುತಂತ್ರ” ಎಂದು ಆರೋಪಿಸಿರುವುದು, ಧಾರ್ಮಿಕ ನಿಷ್ಠೆಗೂ ಮೀರಿದ ರಾಜಕೀಯದ ನಕಲಿ ಧರ್ಮಭಕ್ತಿಯ ನಾಟಕವೆಂದು ಹೇಳಬಹುದು.

ಮಹಿಳಾ ಸಮಾಜಕ್ಕೆ ಅವಮಾನ ಮಾಡಿದ ವ್ಯಕ್ತಿಯ ಪರ ನಿಲ್ಲುವುದು ಯಾವ ಧರ್ಮದಲ್ಲಿಯೂ ಸಹ ಮಾನ್ಯವಾಗಿಲ್ಲ. ಇದು ಧರ್ಮದ ನೈತಿಕ ಬೋಧನೆಗೆ ವಿರುದ್ಧವಾಗಿ ರಾಜಕೀಯ ಲಾಭಕ್ಕಾಗಿ ಮಾಡಿದ ಅಂಧ ಬೆಂಬಲ ಮಾತ್ರ. ಇಂತಹ ನಿಲುವುಗಳು ಜನರ ವಿಶ್ವಾಸಕ್ಕೆ ಧಕ್ಕೆಯುಂಟುಮಾಡುತ್ತವೆ ಹಾಗೂ ಮಹಿಳೆಯರ ಗೌರವವನ್ನು ತೂಗು ಹಾಕುವ ನೈತಿಕ ಕುಸಿತದ ಸಂಕೇತವಾಗಿವೆ.

WhatsApp Image 2025 10 24 at 3.35.00 PM

ಇನ್ನೊಂದೆಡೆ, ಬೆಳಗಾವಿ ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತರು ಸರಿಯಾದ ಬೆಲೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ರೈತರ ಬದುಕಿನ ಹೋರಾಟ ಕಡೆಗಣಿಸಿ, ಸ್ವಾಮೀಜಿಯ ವಿವಾದದ ರಕ್ಷಣೆಗೆ ರಾಜಕೀಯ ಶಕ್ತಿ ಬಳಸುವುದು ಅಸಹ್ಯಕರ ರಾಜಕೀಯಕ್ಕೆ ನಿದರ್ಶನವಾಗಿದೆ. ಜನರ ನಂಬಿಕೆಗೆ ಬದಲು ಸಂಘಟನೆಯೊಂದರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಕೋಮು ಶಕ್ತಿಗಳ ಮೆರವಣಿಗೆಗೆ ಬೆಂಬಲ ಕೊಡುವ ಜನಪ್ರತಿನಿಧಿಗಳು, ಜನತೆಯ ಆಶಯಗಳಿಗೆ ವಿರೋಧವಾಗಿ ನಡೆಯುತ್ತಿರುವುದು ಕ್ಷೇತ್ರದ ಜನತೆಗೆ ಮಾಡುವ ಅವಮಾನವಾಗಿದೆ.

ಮಠಗಳು ಸಮಾಜದ ತಪ್ಪುಗಳನ್ನು ತಿದ್ದಬೇಕು, ಜನಪ್ರತಿನಿಧಿಗಳು ಸಮಾಜಸೇವೆ ಮಾಡಬೇಕು ಆದರೆ ಇವೆರಡೂ ಸತ್ಯದಿಂದ ದೂರವಾಗುತ್ತಿರುವ ಈ ಕಾಲದಲ್ಲಿ, ಧರ್ಮವೂ ರಾಜಕೀಯದ ಉಪಕರಣವಾಗುತ್ತಿದೆ. ಸಮಾಜದ ಪ್ರಗತಿಯ ಬದಲಿಗೆ ದ್ವೇಷದ ಬೀಜ ಬಿತ್ತುವವರು ಧರ್ಮಗುರುಗಳೆಂದು ಕರೆಯಲ್ಪಡುವುದೇ ದೊಡ್ಡ ದೌರ್ಭಾಗ್ಯದ ಸಂಗತಿಯಾಗಿದೆ.

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮನೆಂತೊಲಿವನಯ್ಯ||

ಅಂದರೆ, ಮಾತನಾಡಿದರೆ ಒಪ್ಪುವಂತಿರಬೇಕು ಎಂದು ಬಸವಣ್ಣನವರೆ ಹೆಳಿದ್ದಾರೆ. ಹಾಗೂ ಅನುಭವವಿಲ್ಲದ ಮಾತುಗಳು ವ್ಯರ್ಥ ಎಂದು ಬಸವಣ್ಣನವರು ಹೇಳುತ್ತಾರೆ. ಅನುಭವದಿಂದ ಕೂಡಿದ ಮಾತುಗಳಷ್ಟೇ ಪರಿಣಾಮಕಾರಿಯಾಗಬಲ್ಲವು ಎಂದು ಅವರು ಪ್ರತಿಪಾದಿಸುತ್ತಾರೆ.

ಕನ್ನೇರಿ ಮಠದ ಸ್ವಾಮಿಗಳಿಗಾಗಲಿ ಸಂಸದ ಜಗದೀಶ್ ಶೆಟ್ಟರ್ ಅವರಿಗಾಗಲಿ ಇದ್ಯಾವುದರ ಅರಿವೇ ಇಲ್ಲ ಎಂದು ಎನ್ನಿಸುತ್ತಿದೆ.

ಈ ಕುರಿತು ಈ ದಿನ.ಕಾಮ್ ಜತೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗಿಯಾಗಿದ್ದ ಬೆಳಗಾವಿಯ ರಾಮದುರ್ಗ ತಾಲೂಕಿನ ನಾಗನೂರು ಗ್ರಾಮದ ಬಸವಣ್ಣನವರ ಲಿಂಗಾಯತ ಮಠದ ಬಸವಗೀತಾ ಅವರು ಮಾತನಾಡಿ, ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳ ಇತ್ತೀಚಿನ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಕಾಡಸಿದ್ದೇಶ್ವರ ಸ್ವಾಮಿಗಳು ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿದ್ದಾರೆ. ಆ ಕಾರಣದಿಂದಲೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸರ್ಕಾರವು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದೆ. ಬಸವ ಸಂಸ್ಕೃತಿ ಅಭಿಯಾನವು ಬಸವ ತತ್ವಗಳ ಪ್ರಚಾರ ಮಾಡುತ್ತಿದೆ. ಆದರೆ ಅದನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಲಿಂಗಾಯತ ಮಠಾಧೀಶರನ್ನು ಕುಗ್ಗಿಸಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಬಸವಗೀತಾ ಆರೋಪಿಸಿದರು.

“ಕಾಡಸಿದ್ದೇಶ್ವರ ಮಠದ ಸ್ವಾಮಿಗಳು ಲಿಂಗಾಯತರಾಗಿಯೇ ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಅವರ ಆ ನಂಟು ಸ್ಪಷ್ಟವಾಗಿದ್ದು, ಅವರು ಆರ್‌ಎಸ್‌ಎಸ್ ಕೈಗೊಂಬೆಯಾಗಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದರು.

“ʼವಚನ ದರ್ಶನʼ ಪುಸ್ತಕ ಬಿಡುಗಡೆಯಾಗುವ ವೇಳೆ ನಾವು ವಿರೋಧ ವ್ಯಕ್ತಪಡಿಸಿದ್ದೆವು. ಆ ಸಮಯದಲ್ಲಿ ನಮ್ಮ ಮೇಲೆ ಬೆದರಿಕೆ ಹೇರಲಾಗಿತ್ತು. ರಾಜ್ಯದಲ್ಲಿ ಒಂದು ಗುಂಪು ಇದೆ, ಅದು ಬಸವಣ್ಣನವರ ವಿಚಾರಗಳು ಜನರಿಗೆ ತಲುಪಬಾರದು, ಜನರಿಗೆ ಅರ್ಥವಾಗಬಾರದು ಎಂಬುದನ್ನು ಬಯಸುತ್ತಿದೆ. ಎಲ್ಲಿಯೇ ಹೋದರೂ ಬಸವಣ್ಣನವರು ಇಲ್ಲ, ಅನುಭವ ಮಂಟಪ ಇಲ್ಲ, ಎಂದು ಹೇಳುವ ಮೂಲಕ ಬಸವಣ್ಣನವರ ಅಸ್ತಿತ್ವವನ್ನೇ ಕುಗ್ಗಿಸುವ ಪ್ರಯತ್ನದಲ್ಲಿ ಈ ಗುಂಪು ತೊಡಗಿದೆ. ಬಸವಣ್ಣನವರು 12ನೇ ಶತಮಾನದಲ್ಲಿ ಜಾತಿ ಮತ್ತು ವರ್ಣಾಶ್ರಮ ಪದ್ಧತಿಯನ್ನು ಧ್ವಂಸಮಾಡಿ ಸಮಾನತೆಯನ್ನು ಸ್ಥಾಪಿಸಿದರು. ನಮ್ಮ ಲಿಂಗಾಯತ ಮಠಾಧೀಶರು ಅದೇ ಮಾರ್ಗದಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಆದರೆ ಕೆಲವರು ಕನ್ನೇರಿ ಮಠದ ಸ್ವಾಮಿಗಳನ್ನು ಮುಂದೆ ಇಟ್ಟು, ಸಮಾಜದಲ್ಲಿ ಜಾತಿ ವ್ಯವಸ್ಥೆ ಉಳಿಯಬೇಕೆಂಬ ದುರುದ್ದೇಶದಿಂದ ಈ ರೀತಿಯ ಚಟುವಟಿಕೆ ನಡೆಸುತ್ತಿದ್ದಾರೆ” ಎಂದು ಟೀಕಿಸಿದರು.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಕುರುಡು ದ್ವೇಷದ ಈ ಅಂಧಕಾರಕ್ಕೆ ಅಂತ್ಯವೆಂದು?

“ಯತ್ನಾಳರು ಲಿಂಗಾಯತ ಧರ್ಮದಲ್ಲಿ ಹುಟ್ಟಿದ್ದಾರೆ. ಆದರೆ ಅವರಿಗೆ ಅಧ್ಯಯನದ ಕೊರತೆ ಇದೆ. ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಅವರು ಬಸವಣ್ಣನವರು ಧರ್ಮ ಸ್ಥಾಪಿಸಿಲ್ಲ ಎನ್ನುವುದಕ್ಕೆ ಪುರಾವೆ ನೀಡಬೇಕು. ನೀಡಲು ಸಾಧ್ಯವಿಲ್ಲದಿದ್ದರೆ ಕ್ಷಮೆ ಕೇಳಿ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು” ಎಂದು ಸವಾಲು ಹಾಕಿದರು.

“ಲಿಂಗಾಯತರು ಮುಗ್ದರು ಎನ್ನುವುದು ಸತ್ಯ, ಆದರೂ ನಮ್ಮ ಸಮುದಾಯದ ನಾಯಕರು ಎಲ್ಲೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕನ್ನೇರಿ ಮಠದ ಸ್ವಾಮಿಗಳು 50–60 ಜನ ಮಾತ್ರ ನನ್ನ ವಿರುದ್ಧ ಹೋರಾಟದಲ್ಲಿದ್ದಾರೆ ಎಂದು ಹೇಳುತ್ತಾರೆ. ಆದರೆ ಬಸವ ತತ್ವವನ್ನು ಅರಿತವರು ಅವರ ವಿರುದ್ಧ ನಿಂತಿದ್ದಾರೆ. ಅವರು ಕ್ಷಮೆ ಕೇಳದಿದ್ದರೆ ಕಾಲವೇ ಅವರಿಗೆ ಉತ್ತರ ನೀಡುತ್ತದೆ” ಎಂದರು.

ಕಾಡಸಿದ್ದೇಶ್ವರ ಸ್ವಾಮಿಗಳು ಸಮಾಜದ ನೈತಿಕ ದೀಪವಾಗಬೇಕಿದೆ ಹಾಗೂ ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವುದು, ಅಧಿಕಾರದ ಹೆಸರಿನಲ್ಲಿ ಅಸಮರ್ಪಕ ಬೆಂಬಲ ನೀಡುವುದನ್ನು ಸಂಸದ ಜಗದೀಶ್ ಶೆಟ್ಟರ್ ಅವರು ನಿಲ್ಲಿಸಬೇಕಿದೆ.‌ ಧರ್ಮದ ಹೆಸರಿನಲ್ಲಿ ಅವಾಚ್ಯ ಶಬ್ಧ ಬಳಸುವವರನ್ನು ಸಮರ್ಥಿಸಿಕೊಂಡು, ರಾಜಕೀಯ ಲಾಭ ಬಯಸುವ ಸಂಸದ ಜಗದೀಶ್ ಶೆಟ್ಟರ್ ಅವರನ್ನು ಜನರು ಖಂಡಿಸಬೇಕು. ನೈತಿಕತೆ ಇಲ್ಲದ ಕಾಡಶಿದ್ದೇಶ್ವರ ಸ್ವಾಮಿಗಳ ಧರ್ಮವೂ ನಕಲಿ, ಜನಪರತೆಯಿಲ್ಲದ ಸಂಸದ ಶೆಟ್ಟರ್ ಅವರ ರಾಜಕೀಯಕ್ಕೂ ಅರ್ಥವಿಲ್ಲ. ಧರ್ಮದ ಹೆಸರಿನಲ್ಲಿ ಅವಹೇಳನ ಮಾಡುವವರಿಗೂ, ಅದನ್ನು ಮೌನವಾಗಿ ಸಹಿಸುವ ರಾಜಕೀಯಕ್ಕೂ ಜನರ ತೀರ್ಪು ಶಾಶ್ವತ ಪಾಠವಾಗಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...