ಕಾರ್ಕಳದ ಮಾಜಿ ಶಾಸಕ ದಿ. ಹೆಬ್ರಿ ಗೋಪಾಲ ಭಂಡಾರಿ ಅವರ ಹಿರಿಯ ಪುತ್ರ 48 ವರ್ಷದ ಸುದೀಪ್ ಭಂಡಾರಿ ಅವರು ಬ್ರಹ್ಮಾವರದ ಬಾರ್ಕೂರಿನಲ್ಲಿ ಕಳೆದ ಅ.14ರ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಹಲವು ಸಂಶಯ ಮೂಡಿದ್ದು ಸಮಗ್ರ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡಿದೆ.
ಈ ಕುರಿತ ತನಿಖೆಯನ್ನು ಶೀಘ್ರ ನಡೆಸುವಂತೆ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷರಾದ ಹೆಬ್ರಿಯ ಮುಖಂಡ ನೀರೆ ಕೃಷ್ಣ ಶೆಟ್ಟಿ ಈ ಮನವಿ ಸಲ್ಲಿಸಿದ್ದಾರೆ.
ಹೆಬ್ರಿ ಗೋಪಾಲ ಭಂಡಾರಿ ಅವರ ಪುತ್ರನ ಸಾವು ಗೋಪಾಲ ಭಂಡಾರಿಯವರ ಅಭಿಮಾನಿಗಳಿಗೆ ಅತ್ಯಂತ ನೋವು ತಂದಿದೆ. ಅವರ ಕುಟುಂಬ, ಆತ್ಮೀಯರು ಹಾಗೂ ಸಂಬಂಧಿಗಳಿಗೆ ಅಘಾತವಾಗಿದೆ. ಸುದೀಪ್ ಭಂಡಾರಿ ಅವರ ಮೊಬೈಲ್‌ನ ಎಲ್ಲಾ ಸಂಪರ್ಕಗಳ ವಿವಿಧ ಮೂಲಗಳ ಸಮಗ್ರ ತನಿಖೆ ನಡೆಸಬೇಕು. ಆತ್ಮಹತ್ಯೆಗೆ ಕಾರಣ ಮತ್ತು ಕಾರಣರಾದವರನ್ನು ಪತ್ತೆ ಮಾಡಿ ಹೆಬ್ರಿ ಗೋಪಾಲ ಭಂಡಾರಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡುವಂತೆ ನೀರೆ ಕೃಷ್ಣ ಶೆಟ್ಟಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.





