ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಖಾಲಿ ಮನೆಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮನೋತೋಷ್ ಕಾಯಲ್ (39), ಪಶ್ಚಿಮ ಬಂಗಾಳ ಮೂಲದವನೆಂದು ಗುರುತಿಸಲಾಗಿದೆ. ಈತ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗಂಜಿಮಠದ ಮಳಲಿ ಕ್ರಾಸ್, ಪೊಗರು ಗ್ರಾಮದಲ್ಲಿ ವಾಸವಾಗಿದ್ದನು ಎನ್ನಲಾಗಿದೆ.
ಆರೋಪಿಯು ಬೆಳಿಗ್ಗೆ ಸಮಯದಲ್ಲಿ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ, ಬಹು ದಿನಗಳಿಂದ ಬೀಗ ಹಾಕಿದ್ದ ಖಾಲಿ ಮನೆಗಳನ್ನು ಗುರುತಿಸಿ ಬೀಗ ಒಡೆದು ಕಳ್ಳತನ ನಡೆಸುತ್ತಿದ್ದನು. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಮನೆಯಲ್ಲಿದ್ದ ಬ್ಯಾಟರಿಯನ್ನು ಕದ್ದುಕೊಂಡು ಹೋಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಅವರ ಮಾರ್ಗದರ್ಶನದಲ್ಲಿ, ಕಾರ್ಕಳ ಸಿಪಿಐ ಮಂಜಪ್ಪ ಅವರ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಎಂ.ಎಸ್. ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದು, ಮಾನ್ಯ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.





