ಕಾರವಾರ: ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನವು ಕರಾವಳಿ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು.
ಶನಿವಾರ ನಡೆದ ಈ ಅದ್ಧೂರಿ ಪ್ರದರ್ಶನದಲ್ಲಿ ವಿವಿಧ ತಳಿಯ ನಾಯಿಗಳು ತಮ್ಮ ಬುದ್ಧಿವಂತಿಕೆ ಮತ್ತು ಸಾಹಸ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದ ನೂರಾರು ಜನರನ್ನು ಮಂತ್ರಮುಗ್ಧಗೊಳಿಸಿದವು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಶೈನಿ, ಮಾರ್ವೆಲ್ ಮತ್ತು ಅಖಿರ ಶ್ವಾನಗಳು ಶಿಸ್ತಿನ ಆದೇಶಗಳನ್ನು ಪಾಲಿಸಿ ಗಮನ ಸೆಳೆದರೆ, ಕೈಗಾದ ಕೈಗಾರಿಕಾ ಭದ್ರತಾ ಪಡೆಯ ಐರಾ, ಅಭಯ್ ಮತ್ತು ಭೈರವ ಶ್ವಾನಗಳು ನಡೆಸಿಕೊಟ್ಟ ಸಾಹಸ ಚಟುವಟಿಕೆಗಳು ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿದವು.
ಈ ಶ್ವಾನಗಳ ದಕ್ಷತೆಯನ್ನು ಮೆಚ್ಚಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು 10,000 ರೂಪಾಯಿಗಳ ನಗದು ಬಹುಮಾನ ನೀಡಿ ಅಭಿನಂದಿಸಿದರು. ಬೆಂಗಳೂರಿನಿಂದ ಆಗಮಿಸಿದ್ದ ಕುಮಾರ್ ಅವರ ಎರಡು ಶ್ವಾನಗಳು ಸಹ ತಮ್ಮ ವಿಶಿಷ್ಟ ಬುದ್ಧಿವಂತಿಕೆಯ ಆಟಗಳ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದವು.
ಒಟ್ಟು 25 ತಳಿಗಳ 118 ಶ್ವಾನಗಳು ಪ್ರದರ್ಶನಕ್ಕೆ ನೋಂದಣಿಯಾಗಿದ್ದವು. ಇದರಲ್ಲಿ ಸ್ಪರ್ಧಾ ವಿಭಾಗದಲ್ಲಿ 21 ತಳಿಗಳ 52 ನಾಯಿಗಳು ಹಾಗೂ ಮರಿಗಳ ವಿಭಾಗದಲ್ಲಿ 11 ಶ್ವಾನಗಳು ಭಾಗವಹಿಸಿದ್ದವು. ತೀವ್ರ ಪೈಪೋಟಿಯ ನಡುವೆ ಸುನೀಲ್ ಉಡಾಡಿ ಅವರ ಜರ್ಮನ್ ಶೆಫರ್ಡ್ ಶ್ವಾನ ಪ್ರಥಮ ಸ್ಥಾನ ಗಳಿಸಿ 25,000 ರೂಪಾಯಿ ಬಹುಮಾನ ಪಡೆಯಿತು.
ವೆಂಕಪ್ಪ ನವಲಗಿ ಮುಧೋಳ ಅವರ ಮುಧೋಳ ತಳಿ ಶ್ವಾನ ದ್ವಿತೀಯ (15,000 ರೂ.) ಹಾಗೂ ಸುಹಾಸ್ ದಾವಣಗೆರೆ ಅವರ ಬೀಗಲ್ ತಳಿ ಶ್ವಾನ ತೃತೀಯ (10,000 ರೂ.) ಬಹುಮಾನವನ್ನು ತನ್ನದಾಗಿಸಿಕೊಂಡವು. ಪ್ರದರ್ಶನದ ನಡುವೆ ಪಶು ವೈದ್ಯರು ಶ್ವಾನಗಳ ಆರೋಗ್ಯಕರ ಪೋಷಣೆ ಮತ್ತು ಕಾಲಕಾಲಕ್ಕೆ ನೀಡಬೇಕಾದ ಲಸಿಕೆಗಳ ಬಗ್ಗೆ ಮಾಲೀಕರಿಗೆ ಉಪಯುಕ್ತ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ ? ದಾಂಡೇಲಿ | ಕಾಳಿ ಹುಲಿ ರಕ್ಷಿತಾರಣ್ಯದ ಭದ್ರತೆಗೆ ‘ಅವನಿ-ತಾರ’ ಶ್ವಾನ ಬಲ: ಅರಣ್ಯ ಕಳ್ಳರ ಪತ್ತೆಗೆ ಹದ್ದಿನ ಕಣ್ಣು
ಇದೇ ಸಂದರ್ಭದಲ್ಲಿ ದೇಶಿ ತಳಿಯ ನಾಯಿ ಮರಿಗಳನ್ನು ಉಚಿತವಾಗಿ ದತ್ತು ನೀಡುವ ಸೌಲಭ್ಯವನ್ನೂ ಕಲ್ಪಿಸಲಾಗಿತ್ತು. ಲ್ಯಾಬ್ರಾಡರ್, ಗೋಲ್ಡನ್ ರಿಟ್ರಿವರ್, ವೇನಸ್ ಕಾರ್ಗಿ, ರಾಜ ಪಾಳ್ಯಮ್ ಸೇರಿದಂತೆ ಹತ್ತಾರು ತಳಿಗಳ ಸಂಗಮ ಮೈದಾನದಲ್ಲಿ ಕಂಡುಬಂತು.
ಈ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಸಿಇಓ ಡಾ. ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಮೋಹನ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.





