ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪ್ರಧಾನ ನ್ಯಾಯಾಲಯಕ್ಕೆ ಅಪರಿಚಿತರಿಂದ ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದು, ಇಡೀ ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ನ್ಯಾಯಾಲಯದ ಅಧಿಕೃತ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿರುವ ಕಿಡಿಗೇಡಿಗಳು, “ನ್ಯಾಯಾಧೀಶರ ಕೊಠಡಿಯಲ್ಲಿ RDX ಮತ್ತು IED ಸ್ಫೋಟಕಗಳನ್ನು ಇರಿಸಲಾಗಿದೆ” ಎಂದು ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲದೆ, ಮಧ್ಯಾಹ್ನದೊಳಗೆ ನ್ಯಾಯಾಲಯದ ಆವರಣವನ್ನು ಸಂಪೂರ್ಣವಾಗಿ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದರು.
ಇದರಿಂದ ಎಚ್ಚೆತ್ತ ಅಧಿಕಾರಿಗಳು ತಕ್ಷಣವೇ ನ್ಯಾಯಾಲಯದ ಕಲಾಪಗಳನ್ನು ತಾತ್ಕಾಲಿಕವಾಗಿ ಮುಂದೂಡಿ, ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸ್ ಬಾಂಬ್ ಪತ್ತೆ ದಳ ಮತ್ತು ಶ್ವಾನ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ನ್ಯಾಯಾಲಯದ ಒಳಾಂಗಣ, ಹೊರಾಂಗಣ ಹಾಗೂ ಪಾರ್ಕಿಂಗ್ ಪ್ರದೇಶ ಸೇರಿದಂತೆ ಪ್ರತಿಯೊಂದು ಮೂಲೆಯನ್ನೂ ತೀವ್ರವಾಗಿ ತಪಾಸಣೆ ನಡೆಸಲಾಯಿತು.
ಸುದೀರ್ಘ ಪರಿಶೀಲನೆಯ ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ ಸಿಬ್ಬಂದಿ ಮತ್ತು ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಬೆದರಿಕೆ ಇಮೇಲ್‌ನಲ್ಲಿ ಕೆಲವು ವಿಚಿತ್ರ ಅಂಶಗಳು ಕಂಡುಬಂದಿದ್ದು, ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಮತ್ತಿಘಟ್ಟ ಜಲಪಾತದಲ್ಲಿ ದುರಂತ; ಪ್ರವಾಸಕ್ಕೆ ಬಂದ ಮಣಿಪಾಲ್ ಬಿ.ಟೆಕ್ ವಿದ್ಯಾರ್ಥಿ ನೀರುಪಾಲು
ಡಿಎಂಕೆ ನಾಯಕರು ಮತ್ತು ಪ್ರಮುಖ ರಾಜಕೀಯ ತಂತ್ರಗಾರರ ಹೆಸರುಗಳನ್ನು ಬಳಸಲಾಗಿದ್ದು, ‘ಪಾಕ್ ಐಎಸ್‌ಐ ಸೆಲ್ – ಕೊಯಮತ್ತೂರು ಎಲ್‌ಟಿಟಿಇ’ ಎಂಬ ಪದಗಳನ್ನು ಬಳಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಲು ಈ ರೀತಿ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಹಿಂದೆಯೂ ಇದೇ ಮಾದರಿಯಲ್ಲಿ ಕಾರವಾರ ಮತ್ತು ಭಟ್ಕಳ ತಹಶೀಲ್ದಾರ್ ಕಚೇರಿಗಳಿಗೂ ಇಮೇಲ್ ಬೆದರಿಕೆಗಳು ಬಂದಿದ್ದವು. ಈ ಬಾರಿಯೂ ಕಿಡಿಗೇಡಿಗಳು ತಮ್ಮ ಗುರುತು ಮರೆಮಾಚಲು VPN (Virtual Private Network) ಬಳಸಿ ಇಮೇಲ್ ಕಳುಹಿಸಿರುವ ಸಾಧ್ಯತೆಯಿದೆ ಎಂದು ಸೈಬರ್ ಕ್ರೈಂ ವಿಭಾಗ ಶಂಕಿಸಿದೆ.
ಸದ್ಯ ಸೈಬರ್ ಪೊಲೀಸರು ಇಮೇಲ್ ಮೂಲದ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ.





