ಕಾರವಾರ: ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ರಾಜ್ಯದ ನ್ಯಾಯಾಲಯಗಳಲ್ಲಿ ಬಾಕಿ ಇರುವ 21 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಮಧ್ಯಸ್ಥಿಕೆ ಮತ್ತು ರಾಜಿ ವಿಧಾನಗಳು ಪರಿಣಾಮಕಾರಿ ಮಾರ್ಗ ಎಂದು ಹೇಳಿದರು.
ಭಾನುವಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ನಿರ್ಮಿತವಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಎ.ಡಿ.ಆರ್ (ಏಲ್ಟರ್ನೇಟಿವ್ ಡಿಸ್ಪ್ಯೂಟ್ ರೆಸಲ್ಯೂಷನ್) ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ರಾಜ್ಯದ ಜಿಲ್ಲಾ ನ್ಯಾಯಲಯಗಳಲ್ಲಿ 21 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇದ್ದು, ನಮ್ಮಲ್ಲಿರುವ ಸೀಮಿತ ಸಂಪನ್ಮೂಲಗಳನ್ನು ಗಮನಿಸಿದರೆ, ಈ ಬಾಕಿಯನ್ನು ಪರಿಹರಿಸಲು ನಾವು ವಿಭಿನ್ನವಾಗಿ ಕೆಲಸ ಮಾಡಬೇಕು ಅಥವಾ ಬೇರೆ ಬೇರೆ ಕೆಲಸಗಳನ್ನು ಮಾಡಬೇಕು. ಈ ನಿಟ್ಟಿನಲ್ಲಿ ಮಧ್ಯಸ್ಥಿಕೆ ಮತ್ತು ರಾಜಿ ವಿಧಾನಗಳಿಂದ ಹೆಚ್ಚಿನ ವಿವಾದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಿದೆ ಎಂದರು.
ಇತರೇ ತೀರ್ಪು ಪ್ರಕ್ರಿಯೆಯಲ್ಲಿ, ಒಬ್ಬ ವ್ಯಕ್ತಿ ಅಥವಾ ದಾವೆದಾರರು ಮೇಲುಗೈ ಸಾಧಿಸುತ್ತಾರೆ ಆದರೆ ಮಧ್ಯಸ್ಥಿಕೆಯಲ್ಲಿ, ವ್ಯಕ್ತಿ ಮೇಲುಗೈ ಸಾಧಿಸುವುದಿಲ್ಲ ಬದಲಾಗಿ ಪರಿಣಾಮಕಾರಿಯಾಗಿ, ವಿವಾದಗಳು ಬಗೆಹರಿಯಲಿವೆ ಮತ್ತು ಇದು ವ್ಯಕ್ತಿಗಳಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಬೆಳೆಸುತ್ತದೆ ಹಾಗೂ ನ್ಯಾಯಯುತ ಪರಿಹಾರವನ್ನು ಒದಗಿಸಲಿದೆ ಎಂದರು.

ಉದ್ಘಾಟಿಸಲಾದ ಎ.ಡಿ.ಆರ್ ಕಟ್ಟಡದ ಬಗ್ಗೆ ವಿವರಿಸಿದ ಅವರು, ಮಧ್ಯಸ್ಥಿಕೆ ಕೊಠಡಿಗಳು, ಸಮಾಲೋಚನೆ ಕೊಠಡಿಗಳು, ರಾಜೀ ಸಭಾಂಗಣಗಳು, ಕುಟುಂಬ ಮತ್ತು ವಾಣಿಜ್ಯ ವಿವಾದ ಪರಿಹಾರಕ್ಕೆ ಅಗತ್ಯವಾದ ವ್ಯವಸ್ಥೆಗಳು ಇಲ್ಲಿ ಕಲ್ಪಿಸಲಾಗಿದ್ದು, ಮಹಿಳೆಯರು, ಹಿರಿಯ ನಾಗರಿಕರು, ವಿಕಲಚೇತನರು ಮತ್ತು ದುರ್ಬಲ ವರ್ಗದ ಜನರಿಗೆ ಅನುಕೂಲಕರವಾಗಿ ವಿನ್ಯಾಸಗೊಂಡಿದೆ ಎಂದು ಹೇಳಿದರು. ತರಬೇತಿ ಪಡೆದ ಮಧ್ಯವರ್ತಿಗಳು ಮತ್ತು ಕಾನೂನು ನೆರವು ಸಲಹೆಗಾರರಿಗೆ ಇದು ಪರಿಣಾಮಕಾರಿ ಕಾರ್ಯಪದ್ಧತಿಯನ್ನು ಒದಗಿಸುತ್ತದೆ ಎಂದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ನ್ಯಾಯಮೂರ್ತಿ ಅನು ಶಿವರಾಮನ್ ಮಾತನಾಡಿ, ನ್ಯಾಯವನ್ನು ನ್ಯಾಯಾಲಯದ ಚೌಕಟ್ಟಿಗೆ ಸೀಮಿತಗೊಳಿಸದೇ ಸಾಮಾನ್ಯ ಜನರ ಬದುಕಿನೊಳಗೆ ತಲುಪಿಸುವುದು ಸಂಸ್ಥೆಯ ಉದ್ದೇಶ ಎಂದು ತಿಳಿಸಿದರು. “ಉತ್ತರ ಕನ್ನಡದ ಜಿಲ್ಲಾಡಳಿತ ಮತ್ತು ಜನತೆ ನಡುವಿನ ಸೇತುವೆಯಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೆಲಸ ಮಾಡುತ್ತಿದೆ. ಈ ಕಟ್ಟಡದಲ್ಲಿ ಮಧ್ಯಸ್ಥಿಕೆ ಹಾಗೂ ಸಮಾಲೋಚನೆಗಳ ಮೂಲಕ ಹೆಚ್ಚಿನ ಪ್ರಕರಣಗಳನ್ನು ವೇಗವಾಗಿ ಪರಿಹರಿಸಲು ಸಾಧ್ಯ,” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಬೆಳಗಾವಿಯಲ್ಲಿ ಡಿಸೆಂಬರ್ 23ರಂದು ‘ನಮ್ಮ ನಡೆ ಮಾದಿಗರ ಕೇರಿಯ ಕಡೆಗೆ’ ಜನಾಂದೋಲನ ಸಮಾವೇಶ
ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಯಾದ ಪ್ರದೀಪ ಸಿಂಗ್ ಯರೂರ್ ಮಾತನಾಡಿ, ಮಧ್ಯಸ್ಥಿಕೆ ಭಾರತದ ಮೂಲ ಸಂಸ್ಕೃತಿಯಲ್ಲೇ ಅಡಗಿರುವ ವಿವಾದ ಪರಿಹಾರ ವಿಧಾನ ಎಂದು ಸ್ಮರಿಸಿದರು. “ಪಂಚಾಯತ್ ವ್ಯವಸ್ಥೆಯ ಮೂಲಕ ಗ್ರಾಮದ ಹಿರಿಯರು ವಿವಾದಗಳನ್ನು ಬಗೆಹರಿಸುತ್ತಿದ್ದ ಪರಂಪರೆ ಇಂದಿಗೂ ಜೀವಂತವಾಗಿದೆ. ಜನರಲ್ಲಿ ನ್ಯಾಯಾಲಯವೇ ಒಂದೇ ಪರಿಹಾರ ಎಂಬ ಕಲ್ಪನೆ ಬದಲಾಗಬೇಕು. ಶಾಂತಿಯ ಮಾರ್ಗದಲ್ಲಿ ಪ್ರತಿಯೊಂದು ವಿವಾದಕ್ಕೂ ಪರಿಹಾರ ಕಂಡುಕೊಳ್ಳಬಹುದು,” ಎಂದು ಅಭಿಪ್ರಾಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಜಿ ಪಂಡಿತ್, ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ.ಎಲ್, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್ ಭರತ್ ಕುಮಾರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂತೋಷ್ ವಿ ಭಾಗವತ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ ಶೆಟ್ಟಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ದಿಲೀಷ್ ಶಶಿ, ಎಸ್ಪಿ ದೀಪನ್ ಎಂ.ಎನ್ ಮೊದಲಾದವರು ಉಪಸ್ಥಿತರಿದ್ದರು.





