ಕಾರವಾರ: ನಗರದ ಸೌಂದರ್ಯಕ್ಕೆ ಮುಳುವಾಗಿದ್ದ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದ ರಸ್ತೆ ಅತಿಕ್ರಮಣಗಳ ವಿರುದ್ಧ ಕಾರವಾರ ನಗರಸಭೆ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ‘ಯುದ್ಧ’ ಸಾರಿದ್ದಾರೆ.
‘ಆಪರೇಷನ್ ಕ್ಲೀನ್ ಕಾರವಾರ’ ಹೆಸರಿನಡಿ ಅನಿರೀಕ್ಷಿತ ದಾಳಿ ನಡೆಸಿದ ತಂಡ, ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿದ್ದ ಗೂಡಂಗಡಿಗಳನ್ನು ತೆರವುಗೊಳಿಸಿ ಜನಸಾಮಾನ್ಯರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ನಗರದ ಹೃದಯಭಾಗದಂತಿರುವ ಎಂ.ಜಿ. ರಸ್ತೆ ಹಾಗೂ ಪಿಕಳೆ ರಸ್ತೆಗಳಲ್ಲಿ ಈ ಕಾರ್ಯಾಚರಣೆ ತೀವ್ರವಾಗಿ ನಡೆಯಿತು.
ಈ ಪ್ರದೇಶಗಳಲ್ಲಿ ಫುಟ್‌ಪಾತ್ ಹಾಗೂ ಪಾರ್ಕಿಂಗ್ ಸ್ಥಳಗಳನ್ನು ಅಕ್ರಮವಾಗಿ ಬಳಸಿಕೊಂಡು ವ್ಯಾಪಾರ ನಡೆಸಲಾಗುತ್ತಿತ್ತು. ಇದರಿಂದಾಗಿ ಪಾದಚಾರಿಗಳು ರಸ್ತೆಯಲ್ಲೇ ನಡೆಯುವಂತಾಗಿ, ವಾಹನ ಸವಾರರು ಸಂಚಾರ ದಟ್ಟಣೆಯಿಂದ ಹೈರಾಣಾಗಿದ್ದರು. ಸಾರ್ವಜನಿಕರಿಂದ ಕೇಳಿಬಂದ ಸಾಲು ಸಾಲು ದೂರುಗಳಿಗೆ ಸ್ಪಂದಿಸಿದ ನಗರಸಭೆ, ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಕಾರ್ಯಾಚರಣೆಯ ವೇಳೆ ಅತಿಕ್ರಮಣಕಾರರಿಗೆ ಯಾವುದೇ ಅವಕಾಶ ನೀಡದ ಅಧಿಕಾರಿಗಳು, ಜೆಸಿಬಿ ಯಂತ್ರಗಳ ಮೂಲಕ ರಸ್ತೆ ಬದಿಯ ಗೂಡಂಗಡಿಗಳನ್ನು ನೆಲಸಮಗೊಳಿಸಿದರು. ರಸ್ತೆ ಆಕ್ರಮಿಸಿ ಇರಿಸಲಾಗಿದ್ದ ಫ್ರಿಡ್ಜ್‌ಗಳು ಹಾಗೂ ಇತರೆ ವ್ಯಾಪಾರೀ ಸಾಮಗ್ರಿಗಳನ್ನು ವಶಪಡಿಸಿಕೊಂಡು ನಗರಸಭೆಯ ವಾಹನಗಳಲ್ಲಿ ಸಾಗಿಸಲಾಯಿತು.
ಈ ಸುದ್ದಿ ಓದಿದ್ದೀರಾ ? ಕಾರವಾರ | ನೌಕಾಬಲಕ್ಕೆ ಆನೆಬಲ: ಕಲ್ವರಿ ಸಬ್‌ಮೆರಿನ್ ನಿರ್ವಹಣಾ ಕೇಂದ್ರ ಲೋಕಾರ್ಪಣೆ
ವ್ಯಾಪಾರಿಗಳಿಂದ ಎದುರಾಗಬಹುದಾದ ಪ್ರತಿರೋಧ ಅಥವಾ ಗಲಾಟೆಯನ್ನು ತಪ್ಪಿಸಲು ಅಧಿಕಾರಿಗಳು ಸೂರ್ಯ ಹುಟ್ಟುವ ಮೊದಲೇ ಕಾರ್ಯಾಚರಣೆ ಆರಂಭಿಸಿದ್ದರು. ಬಿಗಿ ಬಂದೋಬಸ್ತ್ ನಡುವೆ ನಡೆದ ಈ ದಿಢೀರ್ ಕ್ರಮದಿಂದಾಗಿ ಅತಿಕ್ರಮಣಕಾರರು ಕಂಗಾಲಾದರು.
ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ನಗರಸಭೆ ಸಿಬ್ಬಂದಿ ಯಶಸ್ವಿಯಾಗಿ ಕಾರ್ಯಾಚರಣೆ ಮುಗಿಸಿ, ರಸ್ತೆಗಳನ್ನು ಅತಿಕ್ರಮಣ ಮುಕ್ತಗೊಳಿಸಿದರು.





