ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ ಭಾನುವಾರ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಭಾರತೀಯ ನೌಕಾಪಡೆಯ ಅತ್ಯಾಧುನಿಕ ‘ಐ.ಎನ್.ಎಸ್. ವಾಗ್ಶೀರ್’ (INS Vagsheer) ಜಲಾಂತರ್ಗಾಮಿಯಲ್ಲಿ ಯಶಸ್ವಿ ಪಯಣ ಬೆಳೆಸುವ ಮೂಲಕ ಹೊಸ ಇತಿಹಾಸ ಬರೆದರು.
ನೌಕಾಪಡೆಯ ಪರಾಕ್ರಮವನ್ನು ಹತ್ತಿರದಿಂದ ವೀಕ್ಷಿಸಿದ ರಾಷ್ಟ್ರಪತಿಗಳು, ಐ.ಎನ್.ಎಸ್. ವಾಗ್ಶೀರ್ ಸಬ್‌ಮೇರಿನ್‌ನಲ್ಲಿ ಸಮುದ್ರದ ಆಳಕ್ಕೆ ಇಳಿದು ಪ್ರಯಾಣಿಸಿದರು. ಈ ಮೂಲಕ ಸಬ್‌ಮೇರಿನ್‌ನಲ್ಲಿ ಪ್ರಯಾಣಿಸಿದ ದೇಶದ ಎರಡನೇ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ಅವರು ಪಾತ್ರರಾದರು.
ಈ ಸಾಹಸಮಯ ಪಯಣದ ವೇಳೆ ನೌಕಾಪಡೆಯ ಮುಖ್ಯಸ್ಥ (Chief of the Naval Staff) ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಹಾಗೂ ಕರ್ನಾಟಕ ನೌಕಾ ವಲಯದ ಫ್ಲಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಅವರು ರಾಷ್ಟ್ರಪತಿಗಳ ಜೊತೆಗಿದ್ದು, ಜಲಾಂತರ್ಗಾಮಿಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.
ಭಾರತೀಯ ನೌಕಾಪಡೆಯ ಸಾಮರ್ಥ್ಯ ಮತ್ತು ಸನ್ನದ್ಧತೆಯನ್ನು ಶ್ಲಾಘಿಸಿದ ರಾಷ್ಟ್ರಪತಿಗಳು, ನೌಕಾಪಡೆಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಅವರ ಸೇವೆಯನ್ನು ಕೊಂಡಾಡಿದರು.
ಈ ಸುದ್ದಿ ಓದಿದ್ದೀರಾ? ದಾಂಡೇಲಿ | ಕಾಳಿ ಹುಲಿ ರಕ್ಷಿತಾರಣ್ಯದ ಭದ್ರತೆಗೆ ‘ಅವನಿ-ತಾರ’ ಶ್ವಾನ ಬಲ: ಅರಣ್ಯ ಕಳ್ಳರ ಪತ್ತೆಗೆ ಹದ್ದಿನ ಕಣ್ಣು
ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿಯವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತೆ ಜಯಂತಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್ ಸಿಂಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಉಪಸ್ಥಿತರಿದ್ದರು.
ನೌಕಾಪಡೆಯ ಪರವಾಗಿ ಫೀಲ್ಡ್ ಆಫೀಸರ್ ಕಮಾಂಡೆಂಟ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮತ್ತು ಹಿರಿಯ ಅಧಿಕಾರಿಗಳು ಗೌರವ ಸಲ್ಲಿಸಿದರು





