ಕಾರವಾರ: ಜಿಲ್ಲಾ ಕಾರಾಗೃಹದಲ್ಲಿ (District Jail) ಮಾದಕ ವಸ್ತುಗಳ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ಹಿನ್ನೆಲೆಯಲ್ಲಿ, ಇಬ್ಬರು ರೌಡಿಗಳು ಜೈಲರ್ ಸೇರಿದಂತೆ ಮೂವರು ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಜೈಲರ್ ಮತ್ತು ಇತರೆ ಸಿಬ್ಬಂದಿಗಳು ತೀವ್ರ ಗಾಯಗಳೊಂದಿಗೆ ಕಾರವಾರದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ವಿವರ: ಮಂಗಳೂರು ಮೂಲದ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಎಂಬ ಆರೋಪಿಗಳು ಹಲ್ಲೆ ನಡೆಸಿದವರಾಗಿದ್ದಾರೆ. ಈ ರೌಡಿಗಳು ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು, ಮಂಗಳೂರು ಜೈಲಿನಲ್ಲಿ ಸಂಖ್ಯೆ ಹೆಚ್ಚಾದ ಕಾರಣ ಇವರನ್ನು ಕೆಲ ದಿನಗಳ ಹಿಂದೆ ಕಾರವಾರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು.
ಕಳೆದ ಕೆಲವು ದಿನಗಳಿಂದ ಜೈಲು ಆಡಳಿತವು ಮಾದಕ ಪದಾರ್ಥಗಳ ಪೂರೈಕೆಗೆ ಸಂಪೂರ್ಣ ನಿರ್ಬಂಧ ಹೇರಿತ್ತು. ಇದರಿಂದಾಗಿ ಕುಪಿತಗೊಂಡಿದ್ದ ಆರೋಪಿಗಳು, ಮಾದಕ ವಸ್ತುಗಳನ್ನು ನೀಡುವಂತೆ ಪದೇ ಪದೇ ಜೈಲರ್ ಅವರ ಮೇಲೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಆದರೆ, ಜೈಲರ್ ಮತ್ತು ಸಿಬ್ಬಂದಿ ವರ್ಗ ಇದಕ್ಕೆ ಸತತವಾಗಿ ನಿರಾಕರಿಸಿದ್ದರು. ತಮ್ಮ ಬೇಡಿಕೆ ಈಡೇರದ ಕಾರಣ ರೊಚ್ಚಿಗೆದ್ದ ಆರೋಪಿಗಳು, ಏಕಾಏಕಿ ಜೈಲರ್ ಹಾಗೂ ಕರ್ತವ್ಯ ನಿರತ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಬೆಳಗಾವಿಯಲ್ಲಿ ಡಿಸೆಂಬರ್ 23ರಂದು ‘ನಮ್ಮ ನಡೆ ಮಾದಿಗರ ಕೇರಿಯ ಕಡೆಗೆ’ ಜನಾಂದೋಲನ ಸಮಾವೇಶ
ಘಟನೆಯಲ್ಲಿ ಗಾಯಗೊಂಡ ಎಲ್ಲ ಸಿಬ್ಬಂದಿಯನ್ನು ತಕ್ಷಣವೇ ಕಾರವಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ರೌಡಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.





