ಕಾರವಾರ: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET)–2025 ಡಿಸೆಂಬರ್ 7 ರಂದು ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಪರೀಕ್ಷಾ ಕೇಂದ್ರ ಸ್ಥಳದಲ್ಲಿ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗಿದೆ.
ಪತ್ರಿಕೆ–1 ಪರೀಕ್ಷೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದ್ದು, 1,089 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಪತ್ರಿಕೆ–2 ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ನಡೆಯಲಿದ್ದು, 2,498 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ದಿನದಂದು ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಪತ್ರಿಕೆ–1ಕ್ಕೆ ಬೆಳಿಗ್ಗೆ 7 ಗಂಟೆಗೆ ಹಾಗೂ ಪತ್ರಿಕೆ–2ಕ್ಕೆ ಮಧ್ಯಾಹ್ನ 12.15 ಗಂಟೆಗೆ ಅಭ್ಯರ್ಥಿಗಳು ಹಾಜರಿರಬೇಕಿದೆ. ಪರೀಕ್ಷೆ ಆರಂಭಕ್ಕೂ ಅರ್ಧ ಗಂಟೆ ಮೊದಲು ತಮ್ಮ ತಮ್ಮ ಆಸನಗಳಲ್ಲಿ ಆಸೀನರಾಗುವುದು ಕಡ್ಡಾಯ. ನಿರ್ದಿಷ್ಟ ಸಮಯದ ನಂತರ ಆಗಮಿಸುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಉಪವಿಭಾಗಾಧಿಕಾರಿ ಕಾವ್ಯ ರಾಣಿ ವರ್ಗಾವಣೆ, ಹುಣಸೂರು ಉಪವಿಭಾಗಕ್ಕೆ ನೇಮಕ
ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್, ಕ್ಯಾಲ್ಕುಲೇಟರ್, ವಾಚ್, ಮೈಕ್ರೋಫೋನ್, ಬ್ಲೂಟೂತ್ ಸೇರಿದ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





