ಕಾರವಾರ: ನಗರದ ಬಿಲ್ಟ್ ವೃತ್ತದ ಬಳಿ ಗುರುವಾರ ಮಧ್ಯಾಹ್ನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ನೌಕಾನೆಲೆಯ ಸಿಬ್ಬಂದಿಯ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ನೌಕಾನೆಲೆಯ ಸಿಬ್ಬಂದಿ ಗುಣಾಜಿತ್ ಅವರು ತಮ್ಮ ಪುತ್ರನೊಂದಿಗೆ ಕಾರವಾರದಿಂದ ನೌಕಾನೆಲೆಯ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಸವಣೂರಿನಿಂದ ಕಾರವಾರಕ್ಕೆ ಬರುತ್ತಿದ್ದ ಸಾರಿಗೆ ಬಸ್ ಬಿಲ್ಟ್ ವೃತ್ತದ ತಿರುವಿನಲ್ಲಿ ಬರುತ್ತಿದ್ದಂತೆ ಕಾರು ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ತಕ್ಷಣವೇ ಕಾರಿನಲ್ಲಿದ್ದ ಏರ್ ಬ್ಯಾಗ್‌ಗಳು ತೆರೆದುಕೊಂಡಿವೆ. ಇದರಿಂದಾಗಿ ಚಾಲಕ ಹಾಗೂ ಅವರ ಪುತ್ರನಿಗೆ ಹೆಚ್ಚಿನ ಅಪಾಯ ಸಂಭವಿಸದೆ ಪಾರಾಗಿದ್ದಾರೆ.
ಅಪಘಾತದ ನಂತರ ಕಾರಿನಿಂದ ಆಯಿಲ್ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಆತಂಕಕ್ಕೊಳಗಾಗಿ, ತಕ್ಷಣವೇ ಕಾರಿನಲ್ಲಿದ್ದವರನ್ನು ಕೆಳಗಿಳಿಯುವಂತೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಕೊಲೆ ಯತ್ನ ಹಾಗೂ ಕೊಲೆ ಪ್ರಕರಣ: ಆರು ಆರೋಪಿಗಳಿಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
ಕೂಡಲೇ ಗುಣಾಜಿತ್ ಹಾಗೂ ಅವರ ಪುತ್ರ ಕಾರಿನಿಂದ ಹೊರಬಂದಿದ್ದು, ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಾರವಾರ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.





