ಕಾರವಾರ: ಗೋವಾ-ಕರ್ನಾಟಕ ಗಡಿಭಾಗದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಸೋಮವಾರ ತಡರಾತ್ರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ದಾಖಲೆರಹಿತ ಬರೋಬ್ಬರಿ ಒಂದು ಕೋಟಿ ರೂ. ನಗದು ಪತ್ತೆಯಾಗಿದೆ. ಗೋವಾದಿಂದ ತಮಿಳುನಾಡಿಗೆ ಸಾಗಿಸಲಾಗುತ್ತಿದ್ದ ಈ ಬೃಹತ್ ಮೊತ್ತವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಹಿನ್ನೆಲೆ: ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳಾದ ಪಿ.ಎಸ್.ಐ ಪರಶುರಾಮ ಮಿರ್ಜಿಗಿ ತಂಡವು ರಾತ್ರಿ ವೇಳೆ ಎಂದಿನಂತೆ ಖಾಸಗಿ ಬಸ್ಸುಗಳ ತಪಾಸಣೆ ನಡೆಸುತ್ತಿತ್ತು. ಈ ವೇಳೆ, ತಮಿಳುನಾಡು ಕಡೆಗೆ ಹೊರಟಿದ್ದ ಬಸ್ಸೊಂದರ ಪ್ರಯಾಣಿಕರ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ತಪಾಸಣೆ ನಡೆಸುವಾಗ, ಬೆಂಗಳೂರು ಮೂಲದ ಕಲ್ಪೇಶ್ ಕುಮಾರ್ ಮತ್ತು ರಾಜಸ್ಥಾನ ಮೂಲದ ಬಮರ ರಾಮ್ ಎಂಬ ಇಬ್ಬರು ಪ್ರಯಾಣಿಕರಿಗೆ ಸೇರಿದ ಬ್ಯಾಗ್‌ನಲ್ಲಿ ಐನೂರು ರೂ. ಮುಖಬೆಲೆಯ ನೋಟುಗಳ ಬೃಹತ್ ಬಂಡಲ್‌ಗಳು ಪತ್ತೆಯಾಗಿವೆ. ಕೂಡಲೇ ಅವರಿಗೆ, ಹಣದ ಮೂಲ ಮತ್ತು ದಾಖಲೆಗಳನ್ನು ಕೇಳಿದಾಗ ಅವರು ಯಾವುದೇ ಸೂಕ್ತ ಮಾಹಿತಿ ಅಥವಾ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆ, ಈ ಹಣವನ್ನು ಗೋವಾದಿಂದ ತಮಿಳುನಾಡಿನ ಹೊಸೂರಿಗೆ ವ್ಯಾಪಾರ ವ್ಯವಹಾರಕ್ಕಾಗಿ ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಈ ಹಣದ ಮೂಲಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪೊಲೀಸರಿಗೆ ನೀಡದ ಕಾರಣ, ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚಿತ್ತಾಕುಲ ಪೊಲೀಸರು ಹಣವನ್ನು ವಶಪಡಿಸಿಕೊಂಡು, ಕಲ್ಪೇಶ್ ಕುಮಾರ್ ಮತ್ತು ಬಮರ ರಾಮ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಹಣವು ಇತರ ಯಾವುದೇ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದೆಯೇ ಎಂಬ ನಿಟ್ಟಿನಲ್ಲಿ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಘಟನೆಯ ನಂತರ, ಮಾಜಾಳಿ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಅಂಕೋಲಾ | ಪುರಸಭೆ ಸದಸ್ಯರಿಂದ ಸಾಮೂಹಿಕ ರಾಜೀನಾಮೆ! ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಕೆ.
ಉತ್ತರಕನ್ನಡ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್. ಐ.ಪಿ.ಎಸ್ ಹಾಗೂ ಕೃಷ್ಣಮೂರ್ತಿ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಜಗದೀಶ ಎಂ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಎಸ್ ವಿ ಗಿರೀಶ್, ಡಿ.ವೈ.ಎಸ್.ಪಿ. ಕಾರವಾರ ಉಪ ವಿಭಾಗ, ಸಿಪಿಐ ಪ್ರಭಾಕರ ಧರ್ಮಟ್ಠಿ ಮಾರ್ಗದರ್ಶನದಲ್ಲಿ ಚಿತ್ತಾಕುಲ ಠಾಣೆಯ ಪಿ.ಎಸ್.ಐ ಪರಶುರಾಮ ನೇತೃತ್ವದಲ್ಲಿ ಚೆಕ್‌ಪೊಸ್ಟ್ ಸಿಬ್ಬಂದಿ ಥಾಮಸ್ ,ಗಣೇಶ ,ಗೌತಮ ರಾಜ್,ಪ್ರದೀಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು





