ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಅನುದಾನ ಘೋಷಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಘೋಷಿಸಿದ್ದಾರೆ. ಇಂದು ಕಾರವಾರದ ಸದಾಶಿವಗಡದ ಕಾಳಿ ಸಂಗಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸತೀಶ್ ಸೈಲ್, ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯ ಬಹಳಷ್ಟಿದೆ.
ಕಳೆದ ಮೂರು ವರ್ಷಗಳಿಂದ ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಾ ಬಂದಿದ್ದರೂ, ಇದುವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಅಥವಾ ಘೋಷಣೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಚಿಕಿತ್ಸೆಗಾಗಿ ನಮ್ಮ ಕ್ಷೇತ್ರದ ಜನ ಗೋವಾಕ್ಕೆ ಹೋಗಬೇಕು. ನಾನೇ ನನ್ನ ವೈಯಕ್ತಿಕ ಚಿಕಿತ್ಸೆಗಾಗಿ ದೆಹಲಿಗೆ ಹೋಗುವ ಪರಿಸ್ಥಿತಿ ಇದೆ. ಹೀಗಾಗಿ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅತ್ಯಂತ ಅವಶ್ಯಕವಾಗಿದೆ. ನಾನು ಈ ಆಸ್ಪತ್ರೆಯನ್ನು ಮಾಡಿಯೇ ಸಿದ್ಧ ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞರ ಕೊರತೆ; ಹೆರಿಗೆಗೆ ಖಾಸಗಿಯೇ ಏಕೈಕ ಆಯ್ಕೆ
ಮಾರ್ಚ್‌ನಲ್ಲಿ ಬರುವ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗಲೇಬೇಕು. ಒಂದು ವೇಳೆ ಘೋಷಣೆ ಆಗದೇ ಇದ್ದರೆ ನಾನು ಪಕ್ಷ ಬಿಟ್ಟು ಹೋಗುವುದಿಲ್ಲ. ಬದಲಾಗಿ, ರಾಜೀನಾಮೆ ನೀಡಿ ಮನೆಯಲ್ಲಿ ಇರುತ್ತೇನೆ, ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಬಜೆಟ್‌ನಲ್ಲಿ ಅನುದಾನ ಘೋಷಣೆ ಆಗದಿದ್ದರೆ, ಬಜೆಟ್ ಆದ ಮಾರನೇ ದಿನವೇ ನಾನು ರಾಜಕೀಯದಿಂದ ದೂರ ಇರುತ್ತೇನೆ,” ಎಂದು ಸೈಲ್ ಸ್ಪಷ್ಟಪಡಿಸಿದರು. ಅಲ್ಲದೆ, “ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ, ಯಾವುದೇ ಕೆಲಸವನ್ನು ಮಾಡುವುದಿಲ್ಲ. ಈ ಕ್ಷೇತ್ರದ ಜನರಿಗೆ ಸೂಕ್ತನಾಗಿಲ್ಲ (I am not fit for people) ಎಂದು ತಿಳಿದುಕೊಳ್ಳುತ್ತೇನೆ,” ಎಂದು ಹೇಳಿದ್ದಾರೆ.
ಸತೀಶ್ ಸೈಲ್ ಅವರ ಈ ಎಚ್ಚರಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳು ಕಾರವಾರದ ಬೇಡಿಕೆಗೆ ಯಾವ ರೀತಿ ಸ್ಪಂದಿಸುತ್ತಾರೆ ಮತ್ತು ಮುಂದಿನ ಬಜೆಟ್‌ನಲ್ಲಿ ಆಸ್ಪತ್ರೆಗೆ ಅನುದಾನ ಘೋಷಣೆಯಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.





