ಕಾರವಾರ: ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣವಾದ ಟ್ಯಾಗೋರ್ ಕಡಲತೀರದಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಅತ್ಯಂತ ದಾರುಣ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಡೀ ನಗರವೇ ಬೆಚ್ಚಿಬೀಳುವಂತಾಗಿದೆ. ಹಳೆ ಮೀನು ಮಾರುಕಟ್ಟೆ ಹಾಗೂ ನಗರಸಭೆ ಉದ್ಯಾನದ ನಡುವಿನ ನಿರ್ಜನ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, ಸ್ಥಳೀಯರಲ್ಲಿ ತೀವ್ರ ಭೀತಿ ಮೂಡಿಸಿದೆ.
ಬೆಳಗಿನ ಜಾವ ಕಡಲತೀರದ ಕಡೆಗೆ ಹೋದ ಸ್ಥಳೀಯರು ಅನುಮಾನಾಸ್ಪದವಾಗಿ ಬಿದ್ದಿದ್ದ ಶವವನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕಾರವಾರ ನಗರ ಠಾಣೆಯ ಪೊಲೀಸರು ಮಹಜರು ನಡೆಸಿದ್ದು, ಮೃತ ಮಹಿಳೆ ಹೊರರಾಜ್ಯದವಳೆಂದು ಶಂಕಿಸಲಾಗಿದೆ. ಸದ್ಯಕ್ಕೆ ಮಹಿಳೆಯ ಗುರುತು ಪತ್ತೆಯಾಗಿಲ್ಲ ಎಂದು ಮಾಹಿತಿ ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ. ಮಹಿಳೆಯ ದೇಹದ ಮೇಲೆ ತೀವ್ರ ಸ್ವರೂಪದ ಗಾಯದ ಗುರುತುಗಳು ಪತ್ತೆಯಾಗಿದ್ದು, ದುಷ್ಕರ್ಮಿಗಳು ಆಕೆಯನ್ನು ಕಟ್ಟಿ ಹಾಕಿ ಅತ್ಯಾಚಾರ ನಡೆಸಿ, ಬಳಿಕ ಬರ್ಬರವಾಗಿ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳದ ಭೀಕರತೆಯನ್ನು ಗಮನಿಸಿದರೆ ಇದು ವ್ಯವಸ್ಥಿತವಾಗಿ ನಡೆದ ಹತ್ಯೆಯಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ (ಕಿಮ್ಸ್) ರವಾನಿಸಲಾಗಿದೆ. ವೈದ್ಯಕೀಯ ವರದಿ ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ಹಾಗೂ ಹತ್ಯೆಯ ಹಿಂದಿನ ಅಸಲಿ ಸತ್ಯ ಹೊರಬರಲಿದೆ. ಜಿಲ್ಲಾ ಪೊಲೀಸ್ ತಂಡವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಹುಬ್ಬಳ್ಳಿ ‘ಮರ್ಯಾದಾ ಹತ್ಯೆ’ ಪ್ರಕರಣ; ಆರೋಪಿಗಳ ಮರಣ ದಂಡನೆಗೆ ಭೀಮಘರ್ಜನೆ ಆಗ್ರಹ
ವಿಶೇಷವೆಂದರೆ, ಕರಾವಳಿ ಉತ್ಸವ ನಡೆಯುವ ವೇದಿಕೆಯ ಕೆಲವೇ ಮೀಟರ್‌ಗಳ ಅಂತರದಲ್ಲಿ ಈ ಕೃತ್ಯ ನಡೆದಿದ್ದು, ಭದ್ರತೆ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ. ಮೃತ ಮಹಿಳೆ ಹೊರರಾಜ್ಯದವಳೆಂಬ ಶಂಕೆ ಇರುವುದರಿಂದ ಆಕೆಯ ಮೂಲ ವಿಳಾಸ ಪತ್ತೆ ಹಚ್ಚಬೇಕಾಗಿದೆ.
ಅತ್ಯಾಚಾರ ನಡೆದಿದೆಯೇ ಅಥವಾ ಇಲ್ಲವೇ ಎಂಬ ಗೊಂದಲಕ್ಕೆ ವೈದ್ಯಕೀಯ ಮರಣೋತ್ತರ ಪರೀಕ್ಷಾ ವರದಿಯೇ ಅಂತಿಮ ಉತ್ತರ ಸಿಗಲಿದೆ. ಸದ್ಯ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.





