ಮೀನುಗಾರಿಕೆಗೆ ತೆರಳಿದ್ದ ಯುವಕನೊಬ್ಬ ತೀಕ್ಷ್ಣ ಮೂಗಿನ ʼಕಾಂಡೆʼ ಮೀನು ಚುಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಾರವಾರದ ಮಾಜಾಳಿ ದಂಡೆಭಾಗದಲ್ಲಿ ನಡೆದಿದೆ.
ಮೃತನನ್ನು ಮಾಜಾಳಿ ದಂಡೇಭಾಗದ ನಿವಾಸಿ ಅಕ್ಷಯ್ ಅನಿಲ್ ಮಾಜಾಳಿಕರ್ (24) ಎಂದು ಗುರುತಿಸಲಾಗಿದೆ. ಅಕ್ಷಯ ಸ್ಥಳೀಯ ಮಟ್ಟದಲ್ಲಿ ಪ್ರತಿಭಾವಂತ ಕ್ರಿಕೆಟ್ ಕ್ರೀಡಾಪಟುವಾಗಿದ್ದು, ಯುವ ಸಮುದಾಯದಲ್ಲಿ ಜನಪ್ರಿಯನಾಗಿದ್ದನು.
ಕಳೆದ ಮಂಗಳವಾರ (ಅ.14) ಅಕ್ಷಯ್ ಸಹಮೀನುಗಾರರೊಂದಿಗೆ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಅಚಾನಕ್ ನೀರಿನಿಂದ ನೆಗೆದ ಸುಮಾರು 8 ರಿಂದ 10 ಇಂಚು ಉದ್ದದ “ಕಾಂಡೆ” ಎಂಬ ತೀಕ್ಷ್ಣ ಮೂಗಿನ ಮೀನು ನೇರವಾಗಿ ಅವರ ಹೊಟ್ಟೆಗೆ ಚುಚ್ಚಿದೆ. ಘಟನೆಯಿಂದ ಅಕ್ಷಯ್ ಗಂಭೀರವಾಗಿ ಗಾಯಗೊಂಡಿದ್ದು, ಮೀನಿನ ಮೂಗಿನ ತಿವಿತದಿಂದ ಕರುಳಿನ ಭಾಗಕ್ಕೂ ಗಾಯವಾಗಿದೆ ಎಂದು ತಿಳಿದುಬಂದಿದೆ.

ಕೂಡಲೇ ಅವರನ್ನು ಕಾರವಾರದ ಕೆಐಎಂಎಸ್ (KIMS) ಆಸ್ಪತ್ರೆಗೆ ದಾಖಲಿಸಲಾಯಿತ್ತು. ವೈದ್ಯರು ಹೊಲಿಗೆ ಹಾಕಿ ಚಿಕಿತ್ಸೆ ನೀಡಿ ಅಕ್ಷಯ್ ಅವರನ್ನು ಆಸ್ಪತ್ರೆಯಲ್ಲೇ ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಅ.16) ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕುಮಟಾ | ಪೊಲೀಸರ ಮಿಂಚಿನ ಕಾರ್ಯಾಚರಣೆ: 48 ಗಂಟೆಗಳಲ್ಲಿ ಅಂತರಾಜ್ಯ ಕಳ್ಳರ ಬಂಧನ
ಅಕ್ಷಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಸ್ಪತ್ರೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಿಲ್ಲ ಎಂದು ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ವೈದ್ಯಾಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಯುವಕನ ಸಾವಿನಿಂದ ಮಾಜಾಳಿ ಪ್ರದೇಶದ ಮೀನುಗಾರ ಸಮುದಾಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನೆ ಕುರಿತು ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.





