ಪುಣ್ಯಗಳ ಪರ್ವತವನ್ನೇ ಹೊತ್ತುಕೊಂಡು, ಅದನ್ನು ಬಯಸುವ ದಾಸರಿಗೆ ನೀಡಲು ಸಿದ್ಧವಾಗಿರುವ ಪವಿತ್ರ ರಮಝಾನ್ ಮಾಸ ನಮ್ಮ ಮನೆಬಾಗಿಲಿಗೆ ಆಗಮಿಸುತ್ತಿದ್ದು, ಅದನ್ನು ಸಂಭ್ರಮ ಹಾಗೂ ಆತ್ಮಸಿದ್ಧತೆಯೊಂದಿಗೆ ಸ್ವಾಗತಿಸಲು ನಾವು ಸಿದ್ಧರಾಗಿರಬೇಕು ಎಂದು ತೋನ್ಸೆಯ ಅಬುಲೈಸ್ ಮಸ್ಜಿದ್‌ನ ಖತೀಬ್ ಹಾಗೂ ಇಮಾಮ್ ಮೌಲಾನ ಅಬ್ದುಲ್ ಘನಿ ಜಾಮಾಯಿ ಹೇಳಿದರು.
ಅವರು ಕಾಪು ಜಾಮಿಯಾ ಮಸ್ಜಿದ್ ಜದೀದ್ ಕಲಾನ್, ಕೊಂಬಗುಡ್ಡೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕಾಪು ಘಟಕ ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ (ಎಸ್‌ಐಒ) ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಮಝಾನ್ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾತನ್ನು ಮುಂದುವರಿಸಿದ ಅವರು, ನಮ್ಮ ಎಲ್ಲಾ ಆರಾಧನೆಗಳು ಅಲ್ಲಾಹನಿಗಾಗಿ ಮಾತ್ರ ಇರಬೇಕು. ಹೃದಯವನ್ನು ಸದಾ ಶುದ್ಧವಾಗಿಟ್ಟುಕೊಂಡು, ಸಂಬಂಧಿಕರೊಂದಿಗೆ ಸೌಹಾರ್ದದಿಂದ ವರ್ತಿಸಬೇಕು. ನಮ್ಮಿಂದಾಗಿರುವ ತಪ್ಪುಗಳನ್ನು ಅವಲೋಕನ ಮಾಡಿ, ಅಲ್ಲಾಹನ ಮುಂದೆ ಮನಸ್ಸಿನಾಳದಿಂದ ಕ್ಷಮೆಯಾಚಿಸಬೇಕು. ರಮಝಾನ್ ಮಾಸದಲ್ಲಿ ಗರಿಷ್ಠ ಸಮಯವನ್ನು ಕುರ್‌ಆನ್ ಅಧ್ಯಯನಕ್ಕೆ ಮೀಸಲಿಡಬೇಕು. ಇದರಿಂದ ಅಲ್ಲಾಹನ ಸಂಪ್ರೀತಿ ಲಭಿಸುತ್ತದೆ. ಈ ಗುಣಗಳನ್ನು ಮೈಗೂಡಿಸಿಕೊಳ್ಳಲು ರಮಝಾನ್ ಅತ್ಯಂತ ಸೂಕ್ತ ಕಾಲವಾಗಿದ್ದು, ಹೀಗೆ ನಡೆದುಕೊಂಡರೆ ರಮಝಾನ್ ಮಾಸದ ಮಹಾಪುಣ್ಯಗಳನ್ನು ಪಡೆಯಬಹುದು ಎಂದು ತಿಳಿಸಿದರು.

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಎಸ್‌ಐಒ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ನಿಹಾಲ್ ಕಿದಿಯೂರ್ ಮಾತನಾಡಿ, ಕುರ್‌ಆನ್ ದೇವನ ವತಿಯಿಂದ ಬಂದ ಗ್ರಂಥವಾಗಿದ್ದು, ಕತ್ತಲೆಯಲ್ಲಿರುವವರಿಗೆ ದಾರಿತೋರುವ ದೀಪಸ್ತಂಭದಂತೆ ಕಾರ್ಯನಿರ್ವಹಿಸುತ್ತದೆ. ಇದರ ಸದುಪಯೋಗ ಪಡೆದವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಕುರ್‌ಆನ್ ರಮಝಾನ್ ಮಾಸದಲ್ಲಿಯೇ ಅವತರಿಸಿರುವುದರಿಂದ ಈ ಮಾಸವು ಜನರನ್ನು ಒಳಿತಿನತ್ತ ಕೊಂಡೊಯ್ಯುತ್ತದೆ. ಆದ್ದರಿಂದ ಕುರ್‌ಆನ್‌ನೊಂದಿಗೆ ಗಾಢ ಸಂಬಂಧ ಬೆಳೆಸಬೇಕು. ಪಠಣ, ಅನುವಾದ ಹಾಗೂ ವ್ಯಾಖ್ಯಾನದ ಅಧ್ಯಯನಕ್ಕಾಗಿ ಸಮಯಸೂಚಿ ರೂಪಿಸಬೇಕು. ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಯನ್ನು ನಿಯಂತ್ರಣದಲ್ಲಿಡಲು ಈ ಮಾಸದಲ್ಲಿ ಸಂಕಲ್ಪ ಕೈಗೊಳ್ಳಬೇಕು ಎಂದು ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್ ಕಾಪು ಸ್ಥಳೀಯ ಅಧ್ಯಕ್ಷ ಅನ್ವರ್ ಅಲಿ ಅವರು, ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಎಸ್‌ಐಒಗಳ ಧ್ಯೇಯೋದ್ದೇಶ, ಉತ್ತಮ ಸಮಾಜ ನಿರ್ಮಾಣದ ಕಾರ್ಯಯೋಜನೆ ಮತ್ತು ರಮಝಾನ್ ಮಾಸದ ಸ್ವಾಗತದ ಅಗತ್ಯತೆಯನ್ನು ವಿವರಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳು ಹಾಗೂ ಸಭಿಕರನ್ನು ಸ್ವಾಗತಿಸಿದರು.
ಕಾರ್ಯಕ್ರಮವು ಹಾಫಿಜ್ ಎ ಕುರ್‌ಆನ್ ಒಬಾದ ಜರ್ರಾರ್ ಅವರ ಕುರ್‌ಆನ್ ಪಠಣದೊಂದಿಗೆ ಆರಂಭವಾಯಿತು. ವೇದಿಕೆಯಲ್ಲಿ ಜಾಮಿಯಾ ಮಸ್ಜಿದ್ ಜದೀದ್ ಕಲಾನ್‌ನ ಅಧ್ಯಕ್ಷ ಜನಾಬ್ ಶಬಿ ಅಹಮದ್ ಕಾಝಿ ಉಪಸ್ಥಿತರಿದ್ದರು. ಮುಹಮ್ಮದ್ ಇಕ್ಬಾಲ್ ಸಾಹೇಬ್ ಧನ್ಯವಾದ ಅರ್ಪಿಸಿದರು. ಎಸ್‌ಐಒ ಸದಸ್ಯ ಅಬ್ದುಲ್ ಖಾಲಿದ್ ಕಾರ್ಯಕ್ರಮ ನಿರೂಪಿಸಿದರು.





