ಕೊಡಗು ಜಿಲ್ಲೆ, ವಿರಾಜಪೇಟೆಯಲ್ಲಿ ಅಕ್ಟೋಬರ್. 12 ಭಾನುವಾರದಂದು ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ‘ಕೆಎಂಎ ಪ್ರತಿಭಾ ಪುರಸ್ಕಾರ-2025 ಮತ್ತು ಸಮುದಾಯದ ಸಾಧಕರಿಗೆ ಸನ್ಮಾನ’ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಕೆಎಂಎ ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಶ್ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 10-30 ರಿಂದ ನಡೆಯುವ ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಉಪಸ್ಥಿತರಿರಲಿದ್ದಾರೆ. ಬೆಂಗಳೂರಿನ ಹೈಕೋರ್ಟ್ ವಕೀಲರಾದ ಕುವೇoಡ ಹೆಚ್. ಹಿದಾಯತುಲ್ಲಾ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಶಿಕ್ಷಣ ತಜ್ಞ ಮೈಸೂರಿನ ಆರ್.ಎ. ಚೇತನ್ ರಾಮ್ ಅವರು ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕೊಡಗು ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ನಲ್ವತ್ತೋಕ್ಲಿನ ಪಟ್ಟಿಯಡ ಎ. ಹನೀಫ್ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ, ಎಸ್ಎಸ್ಎಲ್ಸಿ ಹಾಗೂ ಮದರಸಾ ವಿಭಾಗದ 5ನೇ, 7ನೇ ಮತ್ತು 10ನೇ ತರಗತಿಯ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿ ವ್ಯಾಸಂಗ ಮುಂದುವರಿಸುತ್ತಿರುವ ಸಂಸ್ಥೆಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಈ ಕಾರ್ಯಕ್ರಮದಲ್ಲಿ ಕೆಎಂಎ ಪ್ರತಿಭಾ ಪುರಸ್ಕಾರ ಪಾರಿತೋಷಕ ಹಾಗೂ ನಗದು ಬಹುಮಾನ ನೀಡಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲಾಗುವುದು.
ಅಲ್ಲದೆ, ಕಳೆದ ಸಾಲಿನಲ್ಲಿ ಪದವೀಧರರಾಗಿರುವ ಸದಸ್ಯರ ಮಕ್ಕಳಿಗೆ ಕೆಎಂಎ ಪದವಿ ಪುರಸ್ಕಾರ ನೀಡಿ ಗೌರವಿಸಲಿದೆ. ಜೊತೆಗೆ ಸರಕಾರಿ ಶಾಲೆಗಳಲ್ಲಿ ಓದಿ ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ, ಕಳೆದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ತಲಾ ಓರ್ವ ಸಾಧಕ ವಿದ್ಯಾರ್ಥಿಗೆ ಹಾಗೂ ಈ ಎರಡು ವಿಭಾಗಗಳಲ್ಲೂ ಅತೀ ಹೆಚ್ಚಿನ ಅಂಕ ಪಡೆದ ಜಿಲ್ಲೆಯ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳಿಗೆ ಕೆಎಂಎ ವಿಶೇಷ ಪ್ರತಿಭಾ ಪುರಸ್ಕಾರ-2025 ನೀಡಿ ಗೌರವಿಸಲಿದೆ ಎಂದು ಹೇಳಿದರು.
ಹೊಸ ತಲೆಮಾರಿಗೆ ಪ್ರೇರಣೆ ಮೂಡಿಸಲು ಪ್ರತಿ ವರ್ಷ ಸಮುದಾಯದ ಹಿರಿಯ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಶತಾಯುಷಿ ಕುಂಜಿಲದ ಪುದುರೆಕಾರಂಡ ಹುಸೈನಾರ್ ಹಾಜಿ, ಹಿರಿಯ ವಿದ್ವಾಂಸರಾದ ಕುಂಜಿಲದ ಪಾಯಡತಂಡ ಹುಸೈನ್ ಮುಸ್ಲಿಯಾರ್, ನಿವೃತ್ತ ಕೃಷಿ ಅಧಿಕಾರಿ ಬೇಟೋಳಿ ಗ್ರಾಮದ ಪುಡಿಯಂಡ ಎಂ. ಸಾದಲಿ ಹಾಜಿ, ರಾತೀಬ್ ಖಲ್ಫರಾದ ಐಮಂಗಳದ ಕೂತಂಬಟ್ಟಿರ ಹುಸೈನ್, ಕಳೆದ ನೀಟ್ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಜೋಯಿಪೆರ ಐ. ಮೊಹಮ್ಮದ್ ಸಫ್ವಾನ್ ಮತ್ತು ತಮ್ಮ ಚೊಚ್ಚಲ ಕೃತಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದ ದುದ್ದಿಯಂಡ ಮುಸ್ಕಾನ್ ಅವರನ್ನು ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸೌಜನ್ಯ ಕೊಲೆ ಪ್ರಕರಣ; ‘ನ್ಯಾಯಕ್ಕಾಗಿ ಜನಾಗ್ರಹ’
ಪತ್ರಿಕಾಗೋಷ್ಠಿಯಲ್ಲಿ ಕೆಎಂಎ ನಿರ್ದೇಶಕ ಕೇಂಗೋಟಂಡ ಎಸ್.ಸೂಫಿ, ಆಲೀರ ಹೆಚ್. ಅಬ್ದುಲ್ ಲತೀಫ್ ಹಾಗೂ ದುದ್ದಿಯಂಡ ಹೆಚ್.ಮೊಯ್ದು ಇದ್ದರು.





