ಕೊಡಗು ಒಂದೇ ನಾಣ್ಯದ ಎರೆಡು ಮುಖವಿದ್ದಂತೆ. ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ. ಒಂದು ಮುಖ ಐಷಾರಾಮಿ ಜೀವನ ನಡೆಸುವ ಸಿರಿವಂತರದ್ದು. ಇನ್ನೊಂದು ಮುಖ ಬಡತನದಲ್ಲೇ ಬೆಂದೆದ್ದ ಶೋಷಿತ ಸಮುದಾಯದ್ದು. ಆದಿವಾಸಿಗಳು, ದಲಿತರು, ಮಧ್ಯಮ ವರ್ಗದ ಧಮನಿತರು ಸದ್ದಿಲ್ಲದೆ ಅಡಗಿ ಹೋದ ಕಥಾನಕ.ಪ್ರಕೃತಿಯ ಸೌಂದರ್ಯದ ಕರಾಳ ಕರಿ ನೆರಳ ಸೊಬಗಲ್ಲೇ ಮಾಸಿ ಹೋದ ಛಾಯೆ.
ಪ್ರಕೃತಿ ಸೊಬಗಿನಿಂದಾಗಿ ಪ್ರವಾಸಿಗರಿಗೆ ಕರ್ನಾಟಕದ ಕಾಶ್ಮೀರ,ಪ್ರವಾಸಿಗರ ಸ್ವರ್ಗವಾದ ಕೊಡಗು ಬಡವರಿಗೆ ನಿಜಕ್ಕೂ ನರಕ ಸದೃಶ್ಯ. ನೋಡುಗರಿಗೆ ಸುಂದರ, ಅತಿ ಸುಂದರ, ಮನೋಹರ, ರಮಣೀಯ ಪ್ರಕೃತಿಯ ಒಡಲು. ಅದೇ ದುಡಿಯುವ ಕೈಗಳಿಗೆ ದಾಸ್ಯದ ಸಂಕೋಲೆ. ಹುಟ್ಟಿದಿಲ್ಲಿ, ಬದುಕಿದ್ದಿಲ್ಲಿ, ನನ್ನದು ಎನ್ನಲು ಏನಿಲ್ಲ ಇಲ್ಲಿ ಅನ್ನುವಂತಹ ಬದುಕು.ಆಳುಗಳಾಗಿ ದುಡಿಯುವ ವರ್ಗಕ್ಕೆ ಏನಿರದ ಬದುಕು. ದುಡಿಮೆಯೊಂದೇ ಕೂಳಿಗೆ ಆಸರೆ.
‘ ಕೊಡಗಿನ ಸೊಬಗು, ಕೊಡಗಿನ ಆಚಾರ,ವಿಚಾರ ಎಲ್ಲರಿಗೂ ಬಹು ಮೆಚ್ಚುಗೆಯ ವಿಚಾರ.ಕೇರಳ ರಾಜ್ಯದ ಪ್ರಭಾವ ಹೊಂದಿರುವ ಅತಿ ಹೆಚ್ಚು ಭೂ ಭಾಗ ವನ್ಯ ಸಿರಿಯಿಂದ ಕೂಡಿರುವ ಪ್ರಕೃತಿಯ ತಾಣ.ಎಲ್ಲಿ ನೋಡಿದರು ಅರಣ್ಯ ಸಂಪತ್ತು,ವನ ಮೃಗಗಳ ಐಸಿರಿ. ಸಾಗಿದಲ್ಲೆಲ್ಲ ಘಮ್ಮೆನ್ನುವ ಕಾಫಿ ತೋಟಗಳು, ಕಣ್ಮನ ಸೆಳೆಯುವ ನಾಡು. ಕೊಡಗು ಕಣ್ಣಿಗೆ ಕಾಣುವಂತೆ ಅದರ ನೋಟ ಎಲ್ಲವು ಚೆನ್ನ,ಇಲ್ಲಿ ಕಷ್ಟವೇ ಇಲ್ಲವೇನೋ ಎನ್ನುವಂತೆ ಕಾಣುವ ಕನ್ನಡಿಯ ಗಂಟು.ನೋಡುಗರಿಗೆ ಇಲ್ಲಿಯ ನೋಟ, ಆನಂದ ತರುತ್ತದೆ. ಸೊಬಗನ್ನ ಅನುಭವಿಸುತ್ತಾರೆ ಹೊರತು ಬೇರೆಯ ಚಿಂತೆ,ಇಲ್ಲಿನ ನೈಜ ಚಿತ್ರಣ ಕಾಣಲು ಸಾಧ್ಯವಾಗಲ್ಲ ‘.

ಅದೆಲ್ಲವೂ, ” ಒಳ ಹೊಕ್ಕರೆ ಮಾತ್ರ ತಿಳಿಯಲು ಸಾಧ್ಯ. ಅಷ್ಟು ಸುಲಭವಿಲ್ಲ,ಕಾಫಿ ತೋಟಗಳ ಒಳಗೆ ‘ ಲೈನ್ ಮನೆ’ ಜೀತ ಮಾಡುವ ಕುಟುಂಬಗಳ ಕಷ್ಟ ಅರಿಯುವುದು, ಸಮಾಜದ ಗೊಡವೆಯೇ ಇಲ್ಲದೆ ಬದುಕು ಸವಿಸುತ್ತಿರುವ ಗಾಣದ ಎತ್ತುಗಳು ಬೆಳಗ್ಗೆಯಿಂದ ಸಂಜೆವರೆಗೆ ಸಮಯದ ಮಿತಿ ಇರದೆ ದುಡಿಯುವ ಜನ. ಇಡೀ ಕುಟುಂಬವೇ ದಾಸ್ಯದಿಂದ ಬದುಕುವ ಕೆಟ್ಟ ವ್ಯವಸ್ಥೆ ಕೊಡಗಿನದ್ದು. ಇಲ್ಲೇ ಹುಟ್ಟಿ, ಬೆಳೆದ ಆದಿವಾಸಿ,ಬುಡಕಟ್ಟು, ದಲಿತ,ಶೋಷಿತ ವರ್ಗಗಳು ಭೂ ಮಾಲೀಕರ ಕಪಿ ಮುಷ್ಠಿಯ ಬಲಿ ಪಶುಗಳು. ಹಿಂದೆಯೆಲ್ಲ 125 ರೂಪಾಯಿಗೆ ಬೆಳಗ್ಗೆಯಿಂದ ಸಂಜೆವರೆಗೆ ದುಡಿಯಬೇಕಿತ್ತು.ಈಗ 250 ರೂಪಾಯಿಗೆ ದುಡಿಮೆ.ಇಂಥದ್ದೇ ಕೆಲಸ ಅನ್ನುವಂತಿಲ್ಲ. ಹೇಳಿದ್ದೆಲ್ಲ ಮಾಡಲೇಬೇಕು “.
” ನಾಯಿ ತೊಳೆದು,ಹೇಸಿಗೆ ಬಾಚುವುದರಿಂದ ಹಿಡಿದು, ಮನೆ ಕಸ ತೆಗೆದು, ಕಾಫಿ ತೋಟದ ಕೆಲಸ,ಕಚಡ ತೆಗೆವುದು, ಕಪತ್ತು, ಗದ್ದೆ ಕೆಲಸ, ಧನ ಕರ ಮೇಯಿಸುವುದು ಹೀಗೆ ಒಂದಲ್ಲ ಎರೆಡಲ್ಲ ಎಲ್ಲ ಕೆಲಸ ಮಾಡ್ಬೇಕು. ನಾವು ಸಂತೆಯಲ್ಲಿ ಕೋಳಿ, ಕುರಿ,ಹಂದಿ ಕೊಳ್ಳುತ್ತೀವಿ. ಅಂತೆಯೇ, ಹಿಂದೆ ಲೈನ್ ಮನೆ ಜೀತಕ್ಕೆ ಜನರನ್ನು ಸಂತೆಯಲ್ಲಿ ಕೊಳ್ಳುವ ವಿಧಾನವಿತ್ತಂತೆ. ಈಗ ಬದಲಾಗಿ ಚೀಟಿ ವ್ಯವಸ್ಥೆ ಇದೇ. ಸಾಹುಕಾರರ ಲೆಕ್ಕಾಚಾರ. ಕುಟುಂಬದಲ್ಲಿ ಗಂಡ,ಇಲ್ಲ ಹೆಂಡತಿ ಕೆಲಸ ಮಾಡ್ತೀವಿ ಅನ್ನುವಂತಿಲ್ಲ.’ ಲೈನ್ ಮನೆ ‘ ಒಂದು ರೀತಿಯ ಜೈಲು. ಅಲ್ಲಿರಬೇಕು ಅಂದ್ರೆ ಆ ಮನೆಯ ಮಕ್ಕಳಿಂದ ಹಿಡಿದು ಎಲ್ಲರೂ ಭೂ ಮಾಲಿಕರ ಅಣತಿಯಂತೆ ಗೆಯ್ಯಬೇಕು. ಹುಷಾರಿಲ್ಲ,ವಿಶ್ರಾಂತಿ ಬೇಕು.ಇನ್ನೇನೋ ಕಾರಣಗಳು ಹೇಳುವಂತೆ ಇಲ್ಲ.ದುಡಿಯುವುದೊಂದೇ ಇರುವ ಮಾರ್ಗ “.

‘ ಲೈನ್ ಮನೆ ‘ ಕಿರುಕುಳ ಎಷ್ಟರ ಮಟ್ಟಿಗೆ ಅಂದ್ರೆ ಅವರ ಆಧಾರ್,ರೇಷನ್ ಕಾರ್ಡ್,ವೋಟರ್ ಐಡಿ ಎಲ್ಲವನ್ನೂ ಭೂ ಮಾಲೀಕರು ಕಿತ್ತುಕೊಂಡಿರುತ್ತಾರೆ.ಅಷ್ಟೋ ಇಷ್ಟೋ ಸಾಲ ಕೊಟ್ಟು.ಅದನ್ನ ಒಂದು ಪುಸ್ತಕದಲ್ಲಿ ಬರೆದು ಸಾಲಕ್ಕೆ ಸಾಲ.ಕೊಟ್ಟ ಸಾಲಕ್ಕೆ ದಿನ ದುಡಿಮೆಯ ಹಣ ಜಮಾ ಮಾಡಿಕೊಳ್ಳುವುದು.ಅದು ಯಾವುದೇ ಕಾರಣಕ್ಕೂ ಮುಗಿಯಲ್ಲ.ಕೊಟ್ಟ ಹಣಕ್ಕಿಂತ ಬೆಟ್ಟದಂತೆ ಬೆಳೆದಿರುತ್ತದೆ ಹೊರತು, ಏನಾದರೂ ಕೇಳಿದರೆ ಹೆದರಿಸಿ, ಬೆದರಿಸಿ ದುಡ್ಡು ಕೊಟ್ಟು ಆಚೆ ದಾಟು ಅನ್ನುವ ಮೃಗಗಳ ಜತೆ ಬದುಕು .
” ಅಲ್ಪ ಸ್ವಲ್ಪ ಹಣಕ್ಕೆ ಇಡೀ ಜೀವನ ಭೂ ಮಾಲಿಕರ ಅಡಿಯಾಳಾಗಿ ದುಡಿಯಬೇಕು ಅದುವೇ ಮನೆ, ಮಂದಿಯಾದಿಯಾಗಿ. ಯಾವುದೇ ಕಾರಣಕ್ಕೂ ಭೂ ಮಾಲಿಕರ ಒಪ್ಪಿಗೆ ಇರದೆ ಹೊರಗೆ ಹೋಗುವಂತಿಲ್ಲ. ಕಾಫಿ ತೋಟದ ಲೈನ್ ಮನೆಗೆ ಯಾರು ಬರುವಂತೆ ಇಲ್ಲ. ಸಂಬಂಧಿಕರು,ಸ್ನೇಹಿತರು ಯಾರೆ ಆಗಲಿ ಬರುವಂತೆ ಇಲ್ಲವೇ ಇಲ್ಲ.ಮನೆಯಲ್ಲಿ ಟಿವಿ,ಎಲೆಕ್ಟ್ರಿಕ್ ವಸ್ತುಗಳ ಬಳಕೆ ನಿಷಿದ್ದ. ಭೂ ಮಾಲೀಕರ ಮುಂದೆ ಒಳ್ಳೆ ಬಟ್ಟೆ ಹಾಕುವಂತಿಲ್ಲ. ಹಬ್ಬ ಹರಿದಿನ ಮಾಡುವಂತಿಲ್ಲ.

” ಏನಿದ್ದರೂ ಬೆಳಗ್ಗೆಯಿಂದ ಸಂಜೆಯವರೆಗೆ ಕತ್ತೆಯಂತೆ ದುಡಿಯಬೇಕು.ಹೊಟ್ಟೆ ತುಂಬಾ ಹೆಂಡ ಕುಡಿದು ಮಲಗಬೇಕು.ಮತ್ತೆ, ಬೆಳಗಾದರೆ ಕೆಲಸಕ್ಕೆ ಹೋಗಬೇಕು ಇದೆ ನರಕದ ‘ ಲೈನ್ ಮನೆ ‘ ಜೀತ.ಕೆಲಸಕ್ಕೆ ಹೋದರೆ ಒಂದು ಲೋಟ ಕಾಫಿ, ಒಂದು ಕಡಿ ಕೊಟ್ಟರೆ ಅದೇ ಹೆಚ್ಚು.ಹಸಿವಿನಿಂದಲೇ ದುಡಿಯಬೇಕು.ಪ್ರಶ್ನೆ ಮಾಡುವಂತಿಲ್ಲ.ಮಾತೆತ್ತಿದರೆ,ಗುಂಡಾಗ್ತೀನಿ ಅನ್ನುವ ಬೆದರಿಕೆ.ಕೋವಿ ಹಿಡಿದು ಹೆದರಿಸುವ ವ್ಯಕ್ತಿತ್ವಗಳು. ಹೊತ್ತು ಊಟ ಹಾಕಿದ ಉದಾಹರಣೆಯೇ ಇಲ್ಲ “.
” ಲೈನ್ ಮನೆ ನರಕ ಇಲ್ಲಿಗೆ ಕೊನೆಯಾಗುವುದಿಲ್ಲ ಮಕ್ಕಳಿಗೆ ಶಿಕ್ಷಣ ಇರಲ್ಲ.ಅವರೇನಿದ್ದರು ಅಲ್ಲಿಯೇ ಗೆಯ್ಯಬೇಕು,ಇವರ ನಂತರ ಪರಂಪರೆ ಮುಂದುವರೆಯಬೇಕು.ಇವರಾದ ಮೇಲೆ ಅವರು, ಅವರಾದ ಮೇಲೆ ಇವರು ಅನ್ನುವಂತೆ ದುಡಿಯುವುದೆ ಬದುಕು. ಹೆಣ್ಣು ಮಕ್ಕಳ ಮದುವೆ, ಮುಂಜಿ ಗೊತ್ತಾಗುವುದೇ ಇಲ್ಲ.ಬೆಳೆದ ಹೆಣ್ಣು ಚಿಕ್ಕ ವಯಸ್ಸಿಗೇ ಸಂಸಾರ. ಅನೈತಿಕವಾಗಿ ಬಳಕೆ ಇದು ಕೊಡಗಿನ ಕರಾಳ ಮುಖ “.

” ಹೆಣ್ಣು ಕೊಡಗಿನಲ್ಲಿ ಅನುಭವಿಸುವಸ್ಟು ದೌರ್ಜನ್ಯ, ಮತ್ತೆಲ್ಲಿಯೂ ಅನುಭವಿಸಲು ಸಾಧ್ಯವೇ ಇಲ್ಲ.ಹೆಣ್ಣಿಗೆ ನ್ಯಾಯ ಹೋಗಲಿ ಉಸಿರು ಸಹ ಬಿಡುವಂತೆ ಇಲ್ಲ.ಏನು ನಡೆದರು,ಎಂಥದ್ದೇ ನಡೆದರು ಯಾರಿಗೂ ತಿಳಿಯುವುದಿಲ್ಲ. ಇತ್ಲಾಗಿ ಆ ಹೆಣ್ಣು ಮಗಳು ಸಹ ಹೇಳಿಕೊಳ್ಳುವುದಿಲ್ಲ. ಭಯದ ಬದುಕು,ಲೈನ್ ಮನೆಯಿಂದ ಹೊರಗೆ ಹಾಕಿದ್ರೆ ಎಲ್ಲಿಗೆ ಹೋಗಬೇಕು, ಯಾರು ಕೆಲಸ ಕೊಡುತ್ತಾರೆ.ಕೂಲಿ ಮಾಡಲು ಬಿಡಲ್ಲ,ಇರಲು ಜಾಗ ಕೊಡಲ್ಲ ಅನ್ನುವ ಭಯದಿಂದ ದಾಸ್ಯತನ “.
ಒಂದೇ ಒಂದು ಹೆಣ್ಣು ಮಗಳು ಒಳ್ಳೆಯ ಜೀವನ ಕಟ್ಟಿಕೊಂಡ ಉದಾಹರಣೆ ಇಲ್ಲ. ಉತ್ತಮವಾದ ವಿಧ್ಯಾಭ್ಯಾಸ, ನೌಕರಿ, ಮದುವೆ ಇದೆಲ್ಲವೂ ಮರೀಚಿಕೆ ಇದ್ದಂತೆ ಅಲ್ಲೊಂದು, ಇಲ್ಲೊಂದು ಅಷ್ಟೇ ಇನ್ನೆಲ್ಲ ನೀರಿಂದ ಕುದಿಯುವ ಬಾಂಡಲಿಗೆ ಬಿದ್ದಂತೆ ಜೀವನ,ಯವ್ವನ ಅಲ್ಲೇ ಕಳೆದು ಹೋಗಿರುತ್ತೆ.ಅದೇ ಕೆಟ್ಟ ವ್ಯವಸ್ಥೆಗೆ ಹೊಂದಿಕೊಂಡು ಜೀವನ ಸಾಗಿಸುವ ಬಗೆ.

ಭೂ ಮಾಲೀಕರ ಹತ್ರ ಒಂದೈವತ್ತು ಸಾವಿರ ಸಾಲ ಪಡೆದರೆ ಅದು ಏನಿಲ್ಲ ಅಂದ್ರು ಒಂದೆರೆಡು ಲಕ್ಷ ರೂಪಾಯಿ ಲೆಕ್ಕಕ್ಕೆ ಹೋಗಿರುತ್ತೆ. ಇಡೀ ಕುಟುಂಬವೇ ಸಾಲಗಾರರು. ಇದು ತೀರಲ್ಲ, ತೀರುವವರೆಗೆ ಹೊರ ಹೋಗುವಂತೆ ಇಲ್ಲ. ಕ್ರಮೇಣ ಅಲ್ಲಿಯೇ ಖಾಯಂ. ಯಾವೊಬ್ಬ ಭೂ ಮಾಲೀಕನ ನಿಷ್ಟೂರ ಕಟ್ಟಿ ಕೊಳ್ಳಲು ಸಾಧ್ಯವೇ ಇಲ್ಲ.
ಹಾಗೇನಾದರೂ ಪ್ರಶ್ನೆ ಮಾಡಿದ್ರೆ ,ಕಾಫಿ ತೋಟ ತೊರೆಯಲು ಮುಂದಾದ ಅಂದರೆ ಕಾಫಿ ಕದ್ದ,ಮೆಣಸು ಕದ್ದ ಅಂತೇಳಿ ಸುಖಾ ಸುಮ್ಮನೆ ಹೊಡೆದು ಆರೋಪ ಹೊರಿಸಿ ಆಚೆ ಹಾಕುವುದು.ಕೂಡಲೇ ಈ ವಿಷಯ ಎಲ್ಲ ತೋಟಗಳ ಭೂ ಮಾಲೀಕರಿಗೆ ತಿಳಿಯುವಂತೆ ಮಾಡುವುದು.ಬೇರೆಲ್ಲೇ ಹೋದರು ಇದೇ ಆರೋಪ ಗುರಿಯಾಗಿಸಿ ಕೂಲಿ,ಜಾಗ ಸಿಗದಂತೆ ಮಾಡಿ ಕೊನೆಗೆ ಭೂ ಮಾಲಿಕನ ಕಾಲಿಗೆ ಬಿದ್ದು,ಕ್ಷಮೆ ಕೋರಿ ಅಲ್ಲಿಯೇ ಜೀತ ಮಾಡಿಕೊಂಡು ಇರುವಂತೆ ಮಾಡುವ ವ್ಯವಸ್ಥಿತ ಷಡ್ಯಂತರ.

” ವಯಸ್ಸು ಇರಿವತನಕ ಕೂಲಿ, ಕಂಬಳ ಮುದಿತನಕ್ಕೆ ಆಸರೆಯು ಇಲ್ಲ, ಕೆಲಸವೂ ಇಲ್ಲ ಆಚೆ ದಾಟು ಅನ್ನುವ ನಿಕೃಷ್ಟತೆಯೇ ‘ಲೈನ್ ಮನೆ ‘ ಜೀತ. ಶಕ್ತಿ, ಶ್ರಮವನ್ನ ಹೀರಿ ಹಿಪ್ಪೆ ಮಾಡುವ ಭೂ ಮಾಲೀಕರು ಕೆಲಸಕ್ಕೆ ಬಾರದ ಪರಿಸ್ಥಿತಿ, ಅನಾರೋಗ್ಯ ತಲುಪಿದರೆ ಕೂಡಲೇ ತೋಟದಿಂದ ಆಚೆ ಹಾಕುತ್ತಾರೆ. ಇಡೀ ಜೀವನ ಜೀತ ಮಾಡಿಕೊಂಡಿದ್ದ ಕುಟುಂಬ ಆಚೆ ಬಂದರೆ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ದುಬಾರಿ ಬಾಡಿಗೆ ಕೊಟ್ಟು ಮನೆ ಮಾಡುವುದಾ? ಜೀವನ ನಿರ್ವಹಣೆ ಹೇಗೆ? ಕೆಲಸ ಯಾರು ಕೊಡ್ತಾರೆ? ಹೀಗೆ ಚಿಂತೆಯಲ್ಲೇ ಇಡೀ ಬದುಕೇ ವ್ಯಥೆಯಾಗಿ ಪರಿಣಮಿಸುತ್ತೆ “.

ಇಂತಹ ಕೆಟ್ಟ ಸ್ಥಿತಿ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ಕೊಡಗಿನ ಪರಿಸರದಿಂದ ಆಚೆ ಬಂದು ಬದುಕುವುದು ಇಲ್ಲ.ಬದುಕು ಕಟ್ಟಿಕೊಳ್ಳಲು ಗೊತ್ತು ಇಲ್ಲ. ಅಲ್ಲೇ ಹುಟ್ಟಿ, ಅಲ್ಲಿಯೇ ಮಣ್ಣಾಗುವ ಶ್ರಮ ಜೀವಿಗಳು. ಸತ್ತರೆ ಹೂಳಲು ಜಾಗವಿಲ್ಲ. ಸತ್ತರೆ ತೋಟದ ಆಚೆ ತೆಗೆದುಕೊಂಡು ಹೋಗಬೇಕು. ಬದುಕಿದ್ದರೆ ಜೀತ ಮಾಡಿಕೊಂಡು ಇರಬೇಕು. ಹೆಣ್ಣಾಗಲಿ, ಗಂಡಾಗಲಿ ಬದುಕಬೇಕು ಅಂದರೆ ಜೀತ ಮಾಡಲೇಬೇಕು.
ಆಧುನಿಕ ಸಮಾಜದಲ್ಲಿ ಜೀತ ಪದ್ಧತಿ ಜೀವಂತವಾಗಿರುವುದು, ಭೂ ಮಾಲೀಕರ ಕಪಿ ಮುಷ್ಟಿಯಲ್ಲಿ ಜನಗಳು ಬದುಕುತ್ತಿರುವುದು ವ್ಯಾಪಕವಾಗಿ ಕೊಡಗಿನಲ್ಲಿ ಕಾಣಬಹುದು. ಯಾವುದೇ ಭದ್ರತೆ ಇಲ್ಲ. ಕೆಲವು ಕಡೆ ಇರುವ ಲೈನ್ ಮನೆಗೂ ಬಾಡಿಗೆ ಕೊಡಬೇಕು. ಮನೆ ಬೇಕು ಇಡೀ ಕುಟುಂಬ ದುಡಿಯಬೇಕು ಇದೇ ಕೊಡಗಿನ ನೈಜ ರೂಪ.

ಮಹಿಳಾ ಆಯೋಗ, ಮಕ್ಕಳ ರಕ್ಷಣಾ ಆಯೋಗ, ಮಾನವ ಹಕ್ಕುಗಳ ಆಯೋಗ ರಾಜ್ಯದಲ್ಲಿ, ದೇಶದಲ್ಲಿ ಇದ್ದಾವೆ ಹೆಸರಿಗೆ ಮಾತ್ರ. ಕೇವಲ ಫೋಟೋಗಳಿಗೆ, ಪತ್ರಿಕಾ ಹೇಳಿಕೆಗಳಿಗೆ, ಪ್ರಚಾರಕ್ಕೆ ಇದುವರೆಗೆ ಕೊಡಗಿಗೆ ಇವರ ಆಗಮನ ಇಲ್ಲ, ಇಷ್ಟೆಲ್ಲ ದೌರ್ಜನ್ಯ ನಡೆಯುತ್ತಾ ಇದ್ದರು ಭೇಟಿಯು ಇಲ್ಲ ರಕ್ಷಣೆಯು ಇಲ್ಲ.
ಹೆಣ್ಣಿಗೆ ಸುರಕ್ಷತೆ ಇಲ್ಲ, ಒಂದೇ ಒಂದು ಮನೆ, ಶೌಚಾಲಯ, ಸ್ನಾನಗೃಹ ಇಲ್ಲ, ಶಿಕ್ಷಣ ಇಲ್ಲ ಚಿಕ್ಕ ವಯಸ್ಸಿಗೆ ಮದುವೆ, ಮಕ್ಕಳು ಇಂತಹದರ ಕಡೆ ಮಹಿಳಾ ಆಯೋಗ ತಿರುಗಿಯೂ ನೋಡದೆ ಇರುವುದು ಶೋಚನಿಯ ಸಂಗತಿ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | 48 ಗ್ರಾಮ ಪಂಚಾಯ್ತಿಗಳು ಕ್ಷಯ ಮುಕ್ತ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಕೊಡಗಿನಲ್ಲಿ ಜೀವಂತವಾಗಿರುವ ‘ ಲೈನ್ ಮನೆ ‘ ಜೀತ ಕೊನೆಗಾಣುವುದೇ? ಸರ್ಕಾರ ಲಕ್ಷ್ಯ ವಹಿಸುವುದೇ? ಸ್ಥಳೀಯ ಆಡಳಿತ ಕ್ರಮ ವಹಿಸುವುದೇ? ಕಾದು ನೋಡಬೇಕು. ಈದಿನ. ಕಾಮ್ ‘ ಲೈನ್ ಮನೆ ‘ ಜೀತ ಕುರಿತಾಗಿ ಹೆಚ್ಚಿನ ಮಾಹಿತಿಯೊಡನೆ ವರದಿ ಮಾಡಲಿದೆ.






