ಅನಾಥಾಶ್ರಮ ನಡೆಸುತ್ತಿದ್ದ ದಂಪತಿ ಅಡುಗೆ ಅನಿಲ ಸೋರಿಕೆ ದುರಂತದಲ್ಲಿ ಮೃತಪಟ್ಟಿದ್ದಾರೆ. ದಂಪತಿ ಸಾವಿನಿಂದ ಅವರ ಮೂವರು ಮಕ್ಕಳು ಮಾತ್ರವಲ್ಲದೆ, ಸುಮಾರು 33 ಮಂದಿ ನಿರ್ಗತಿಕರು ಮತ್ತೆ ಅನಾಥರಾಗಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿಗಳಾದ ರಮೇಶ್ ಮತ್ತು ರೂಪಾ ದಂಪತಿ ಕಳೆದ 15 ವರ್ಷಗಳಿಂದ ಕುಶಾಲನಗರ ತಾಲೂಕಿನ ಗದ್ದೆಹಳ್ಳದಲ್ಲಿ ‘ವಿಕಾಸ್ ಜನಸೇವಾ’ ಅನಾಥಾಶ್ರಮ ನಡೆಸುತ್ತಿದ್ದರು. ಕೊಡಗು ಜಿಲ್ಲೆಯಲ್ಲಿ ಯಾರೇ ಅನಾಥರು ಕಂಡರೂ ಅವರನ್ನ ಕರೆತಂದು ತಮ್ಮ ಅನಾಥಾಶ್ರಮದಲ್ಲಿ ಇರಿಸಿಕೊಂಡು ಪೋಷಿಸುತ್ತಿದ್ದರು. ಊಟ, ಬಟ್ಟೆ ಸೇರಿದಂತೆ ನಾನಾ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದ್ದರು. ಅನಾಥರು ಮೃತಪಟ್ಟಾಗ ತಮ್ಮ ಮನೆಯವರೆಂಬಂತೆ ಮುಂದೆ ನಿಂತು ಅಂತ್ಯಕ್ರಿಯೆಯನ್ನೂ ಮಾಡಿದ್ದರು.
ಆದರೆ, ಅವರ ಮನೆಯಲ್ಲಿ ಸಂಭವಿಸಿದ ಅಡುಗೆ ಅನಿಲ ಸೋರಿಕೆಯ ದುರಂತದಲ್ಲಿ ದಂಪತಿ ಇಹಲೋಕ ತ್ಯಜಿಸಿದ್ದಾರೆ. ಅಕ್ಟೋಬರ್ 4ರಂದು ರೂಪಾ ಅವರು ಅಡುವೆ ಮಾಡಲು ಗ್ಯಾಸ್ ಸ್ಟವ್ ಹಚ್ಚಿದ್ದಾರೆ. ಮೊದಲೇ ಅನಿಲ ಸೋರಿಕೆಯಾಗಿದ್ದರಿಂದ ಬೆಂಕಿ ಆವರಿಸಿಕೊಂಡಿದೆ. ರೂಪ ಮತ್ತು ರಮೇಶ್ ಅವರಿಗೆ ತೀವ್ರ ಸುಟ್ಟಗಾಯಗಳಾಗಿದ್ದವು. ರಮೇಶ್ ಅವರ ತಂದೆಗೂ ಸುಟ್ಟ ಗಾಯಗಳಾಗಿದ್ದವು.
ಮೂವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ರಮೇಶ್ ಅವರು ಅಕ್ಟೋಬರ್ 8ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರೂಪ ಕೂಡ ಅಸುನೀಗಿದ್ದಾರೆ. ಹೀಗಾಗಿ, ಇಡೀ ಅನಾಥಾಶ್ರಮವೇ ಈಗ ಅನಾಥವಾಗಿದೆ. ಅನಾಥಾಶ್ರಮದಲ್ಲಿದ್ದ 33 ಮಂದಿ ಈಗ ಮತ್ತೆ ನಿರ್ಗತಿಕರಾಗುವ ಆತಂಕದಲ್ಲಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.
ಸಧ್ಯ ರಮೇಶ ಅವರ ಕುಟುಂಬಸ್ಥರು ಅನಾಥಾಶ್ರಮವನ್ನು ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.




