ಆದಿವಾಸಿ ಕುಟುಂಬಗಳಿಗೆ 129 ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದ ಕಾಮಗಾರಿಯಲ್ಲಿ ಈಗಾಗಲೇ 60 ಮನೆಗಳ ನಿರ್ಮಾಣ ನಡೆದಿದೆ. ಆದರೆ, ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ. ಇದನ್ನು ಸರ್ಕಾರದ ಗಮನಕ್ಕೆ ತಂದು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾ.ಪಂ.ವ್ಯಾಪ್ತಿಯ, ಕೆದಮುಳ್ಳೂರು ಗ್ರಾಮದ ಸರ್ವೇ ನಂಬರ್ 370/1ರಲ್ಲಿರುವ 7.50ಎಕರೆ ಜಾಗದಲ್ಲಿ 129 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಪ್ರಥಮ ಹಂತದಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ವಿದ್ಯುತ್ ಮತ್ತು ಕುಡಿಯುವ ನೀರು ಸಂಪರ್ಕ ಕಲ್ಪಿಸದೆ ಅರ್ಧಕ್ಕೆ ನಿಂತಿದೆ.ಈ ಹಿನ್ನೆಲೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಸೋಮವಾರ(ಅ.30) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈಗಾಗಲೇ ಸೋಲಾರ್ ದೀಪದ ವ್ಯವಸ್ಥೆ ಮಾಡಲಾಗಿದೆ. ಆಹಾರ ಕಿಟ್, ಟಾರ್ಚ್ ವಿತರಿಸಲಾಗಿದೆ. ಸರ್ಕಾರ ಆದಿವಾಸಿಗಳು, ಬಡವರ ಒಳಿತಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ 75ಕುಟುಂಬಗಳು ಮತ್ತು ಸುತ್ತಮುತ್ತಲಿನ ಗ್ರಾ.ಪಂ.ವ್ಯಾಪ್ತಿಯ 54, ಒಟ್ಟು 129ನಿರಾಶ್ರಿತ ಆದಿವಾಸಿ ಗಿರಿಜನ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ವೆಂಕಟ್ ರಾಜಾ ಮಾತನಾಡಿ, ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಸಂಬಂಧ ಪತ್ರ ವ್ಯವಹಾರ ಆಗಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಈ ಸಂಬಂಧ ಇಲಾಖೆಯ ನಿರ್ದೇಶಕರ ಜೊತೆ ಚರ್ಚಿಸಲಾಗುವುದು ಎಂದರು. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ವಿದ್ಯುತ್ ಮತ್ತು ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಈ ಸಂಬಂಧ ಪ್ರಯತ್ನಿಸಲಾಗುವುದು ಎಂದರು.
ಸರ್ಕಾರದ ಆದೇಶದಲ್ಲಿ 5ಲಕ್ಷ ರೂ. ತಲಾ ಘಟಕ ವೆಚ್ಚದಲ್ಲಿ 129ಮನೆಗಳನ್ನು ನಿರ್ಮಾಣ ಮಾಡಲು 645ಲಕ್ಷ ರೂ. ಅನುದಾನ ಬಿಡುಗಡೆ ಮಾಡಲು ಆದೇಶಿಸಲಾಗಿತ್ತು. ಅದರಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದಿಂದ ಶೇ.50 ರಷ್ಟು 322.50 ಲಕ್ಷ ರೂ. ಅನುದಾನ ಬಿಡುಗಡೆ ಆಗಿ, ಕೆಆರ್‍ಐಡಿಎಲ್ ಮೂಲಕ 5 ಲಕ್ಷ ರೂ. ಘಟಕ ವೆಚ್ಚಕ್ಕೆ ಸಿದ್ಧಪಡಿಸಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ದೊರತಿದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ ಮಾಹಿತಿ ನೀಡಿದರು.
ಕೆದಮುಳ್ಳೂರು ಗ್ರಾಮದಲ್ಲಿ 129ಮನೆಗಳನ್ನು ನಾಲ್ಕು ಹಂತದಲ್ಲಿ ಅಂದರೆ, ಮೊದಲನೇ ಹಂತದಲ್ಲಿ 40, 2ನೇ ಹಂತದಲ್ಲಿ 40, 3ನೇ ಹಂತದಲ್ಲಿ 40, ನಾಲ್ಕನೇ ಹಂತದಲ್ಲಿ 9ಮನೆಗಳನ್ನು ನಿರ್ಮಿಸಲು, ಸರ್ಕಾರದಿಂದ ನಿರ್ದೇಶನ ನೀಡಲಾಗಿತ್ತು ಎಂದು ಅವರು ವಿವರಿಸಿದರು.
ಆಡಳಿತಾತ್ಮಕ ಮಂಜೂರಾತಿ ದೊರೆತಿರುವ 5 ಲಕ್ಷ ರೂ. ಘಟಕ ವೆಚ್ಚದ ಅಂದಾಜು ಪಟ್ಟಿಯಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರು ಪೂರೈಕೆ ಒಳಗೊಂಡಿಲ್ಲದೆ ಇರುವುದರಿಂದ ಪ್ರಸ್ತುತ ಸಾಮಾಗ್ರಿಗಳ ದರ ಮತ್ತು ಎಸ್.ಆರ್ ದರ ಹೆಚ್ಚಾಗಿರುವುದರಿಂದ ಅಂದಾಜು ಪಟ್ಟಿಯಂತೆ ಅವಶ್ಯಕ ಕಾಮಗಾರಿ ಕೈಗೊಳ್ಳಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ ಎಂದು ಎಸ್.ಹೊನ್ನೇಗೌಡ ಅವರು ತಿಳಿಸಿದರು. ಸದ್ಯ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಗ್ರಾ.ಪಂ. ಪ್ರಮುಖರು ಮಾಹಿತಿ ನೀಡಿದರು.




