ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗುರುಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 2.50 ಕೋಟಿ ಅನುದಾನ ನೀಡುತ್ತೇವೆ. 2027ರೊಳಗೆ ಕಟ್ಟಡವನ್ನು ಪೂರ್ಣಗೊಳಿಸಿ ಅದೇ ಕಟ್ಟಡದಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಕೋಲಾರ ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
“ಜಿಲ್ಲೆಯ ಶಿಕ್ಷಕ ಸಂಘಟನೆಗಳಲ್ಲಿನ ಗೊಂದಲ ಮತ್ತು ನಾನಾ ಕಾರಣಗಳಿಗಾಗಿ ಸುಮಾರು ಐದಾರು ಬಾರಿ ಶಂಕುಸ್ಥಾಪನೆ ಮಾಡಲಾಗಿರುವ ಗುರುಭವಕ್ಕೆ ಮುಂದೆ ಅಂತಹ ಪರಿಸ್ಥಿತಿ ಬರುವುದಿಲ್ಲ. ವಾರದೊಳಗೆ ಅನುದಾನಕ್ಕೆ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಸರ್ಕಾರಿ ನೌಕರರು ಹಾಗೂ ಶಿಕ್ಷಕರೂ ಕೂಡ ಒಂರೆಡು ದಿನಗಳ ವೇತನವನ್ನು ನೀಡಿದರೆ ಒಳಿತು” ಎಂದು ಮನವಿ ಮಾಡಿದರು.
“ಶಿಕ್ಷಕರು ನೀಡುವ ಶಾಲಾ ದಾಖಲೆಗಳು ಮಹತ್ವದ್ದಾಗಿವೆ. ಮಕ್ಕಳು ಪೋಷಕರಿಗಿಂತ ಹೆಚ್ಚಾಗಿ ಶಿಕ್ಷಕರಿಗೆ ಭಯಪಡುತ್ತಾರೆ, ಪ್ರೀತಿ ಇಟ್ಟುಕೊಂಡಿರುತ್ತಾರೆ. ಹಾಗಾಗಿ ಶಿಕ್ಷಕರಿಂದ ಸಾವಿರಾರು ವಿಚಾರ ಕಲಿಯಬಹುದು. ಅವರು ಕೊಡುವ ಜ್ಞಾನ, ಬುದ್ದಿ, ಆಚಾರ ವಿಚಾರಗಳು ಬೇರೆ ಎಲ್ಲೂ ಸಿಗುವುದಿಲ್ಲ. ಗುರು ಶಿಷ್ಯರ ಸಂಬಂಧ ಯಾವಾಗಲೂ ಗಟ್ಟಿಯಾಗಿರುತ್ತದೆ” ಎಂದರು.
ವಿಧಾನ ಪರಿಷತ್ ಸದಸ್ಯ ಎಂ ಎಲ್ ಅನಿಲ್ ಕುಮಾರ್ ಮಾತನಾಡಿ, “ನಾವು ಯಾರೂ ದೇವರನ್ನು ನೋಡಿಲ್ಲ. ತಂದೆ ತಾಯಿ ಬಳಿಕ ಕಣ್ಣಿಗೆ ಕಾಣುವ ದೇವರು ಶಿಕ್ಷಕರು ಮಾತ್ರ. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ತಯಾರಿಸುವ ಶಿಲ್ಪಿಗಳು. ಖಾಸಗಿ ಶಿಕ್ಷಣ ವ್ಯವಸ್ಥೆಗೆ ಮಾರು ಹೋಗುತ್ತಿದ್ದೇವೆ. ಸರ್ಕಾರಿ ಶಾಲೆಗಳು ಏಕೆ ಮುಚ್ಚುತ್ತಿವೆ? ದಾಖಲಾತಿ ಏಕೆ ಕಡಿಮೆಯಾಗುತ್ತಿದೆ? ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕು. ವಿವಿಧ ಕಾರ್ಯಕ್ರಮ ನೀಡಿದರೂ ದಾಖಲಾತಿ ಕಡಿಮೆಯಾಗುತ್ತಿದೆ. ಉತ್ತಮ ವಾತಾವರಣ ನಿರ್ಮಿಸುವ ಕೆಲಸವನ್ನು ಸರ್ಕಾರಿ ಶಾಲೆಗಳಲ್ಲಿ ನಡೆಸಬೇಕು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು” ಎಂದು ಹೇಳಿದರು.
“ಸರ್ಕಾರಿ ಶಾಲೆಗಳಲ್ಲಿ ಓದಿದ ಎಷ್ಟೋ ಮಂದಿ ದೊಡ್ಡ ಮಟ್ಟದ ಅಧಿಕಾರಿಗಳಾಗಿದ್ದಾರೆ. ಅವರಿಂದಲೂ ಸಹಾಯ ಪಡೆಯಬೇಕು. ಸಾಧ್ಯವಾದರೆ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು, ಹಳೆ ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ ಸೌಲಭ್ಯ ಕಲ್ಪಿಸಿಕೊಡಬೇಕು. ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವಿಲ್ಲ” ಎಂದು ತಿಳಿಸಿದರು.
“ಗುರುಭವನ ನಿರ್ಮಾಣ ಮಾಡುವುದಾಗಿ ಪ್ರತಿ ಬಾರಿ ಭರವಸೆ ನೀಡುತ್ತಿದ್ದೇವೆ. ಆರೇಳು ಬಾರಿ ಶಂಕುಸ್ಥಾಪನೆ ಮಾಡಿದ್ದೇವೆ. ನಾನು 10 ಲಕ್ಷ ರೂಪಾಯಿ ನೀಡಿದ್ದೇನೆ. ಸಂಸದರಾಗಿದ್ದ ಮುನಿಸ್ವಾಮಿ 25 ಲಕ್ಷ ನೀಡಿದ್ದಾರೆ. ಆದರೆ ಸಮಸ್ಯೆಯಾಗಿ ಹಣ ಬಂದಿಲ್ಲ. ನನ್ನ ಅನುದಾನದಲ್ಲಿ ಕೆಲಸ ಪ್ರಾರಂಭವಾಗಿದೆ. ಮುಂದೆ ಅವಶ್ಯಕತೆ ಇರುವ ಅನುದಾನ ಕೊಡಿಸತ್ತೇವೆ. ಜತೆಗೆ ಮತ್ತೆ 10 ಲಕ್ಷ ರೂಪಾಯಿ ನೀಡಲು ಸಿದ್ದ” ಎಂದರು.
ಜಿಲ್ಲಾಧಿಕಾರಿ ಎಂ ಆರ್ ರವಿ ಮಾತನಾಡಿ, “ವೈದ್ಯರು ಕೆಟ್ಟವರಾಗಿದ್ದರೆ ಒಂದು ವ್ಯಕ್ತಿ ಸಾಯಬಹುದು. ಒಬ್ಬ ಎಂಜಿನಿಯರ್ ಕೆಟ್ಟವರಾದರೆ ಒಂದು ಕಟ್ಟಡ ಬೀಳಬಹುದು. ಆದರೆ ಒಬ್ಬರು ಶಿಕ್ಷಕರು ಕೆಟ್ಟವರಾದರೆ ಇಡೀ ಸಮಾಜ ಕೆಟ್ಟದಾಗುತ್ತದೆ” ಎಂದರು.
“ಶಿಕ್ಷಕರಿಗೆ ಪ್ರತಿ ಕ್ಲಾಸ್ ಕೂಡ ಅಗ್ನಿ ಪರೀಕ್ಷೆ. ನಿರಂತರ ಕಲಿಕೆಯಲ್ಲಿ ತೊಡಗಬೇಕು. ಪಾಠ ಮಾಡುತ್ತ ಬೆಳೆಯಬೇಕು. ನನಗೆ ಶಿಕ್ಷಕರ ಬಗ್ಗೆ ಸಾತ್ವಿಕ ಕೋಪವಿದೆ. ಏಕೆಂದರೆ ಸಂದರ್ಶನ ಎದುರಿಸುವುದನ್ನು ಯಾರೂ ನನಗೆ ಹೇಳಿ ಕೊಡಲಿಲ್ಲ. ಪುಸ್ತಕ ಜ್ಞಾನಕ್ಕೆ ಸೀಮಿತವಾಗಿದೆ. ವ್ಯಕ್ತಿತ್ವ ಸುಧಾರಣೆಗೆ ಆದ್ಯತೆ ಕೊಡಬೇಕು. ಚಾರಿತ್ರ್ಯ ತುಂಬಬೇಕು. ವಿದ್ಯಾರ್ಥಿಗಳಿಗೆ ಪ್ರಪಂಚ ತೋರಿಸಬೇಕು. ಇಲ್ಲದಿದ್ದರೆ ತಮ್ಮ ಬೋಧನೆ ಯಶಸ್ವಿಯಾಗುವುದಿಲ್ಲ” ಎಂದು ತಿಳಿಸಿದರು.
“ಸರ್ಕಾರಿ ಶಾಲೆ ಮುಚ್ಚಲು ಕಾರಣ ಏನು? ದಾಖಲಾತಿ ಏಕೆ ಕಡಿಮೆಯಾತ್ತಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆದರೆ, ಪ್ರತಿಭೆ ಇರುವುದು ಸರ್ಕಾರಿ ಶಾಲೆಯಲ್ಲಿ ಮಾತ್ರ. ಶಿಕ್ಷಕರ ಖಾಸಗಿ ವರ್ತನೆ ಕೂಡ ಚೆನ್ನಾಗಿರಬೇಕು. ಏಕೆಂದರೆ ಸಮಾಜ ಹಾಗೂ ವಿದ್ಯಾರ್ಥಿಗಳು ಶಿಕ್ಷಕರನ್ನು ಗಮನಿಸುತ್ತಿರುತ್ತಾರೆ” ಎಂದು ನುಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಮಾತನಾಡಿ, “ಎಲ್ಲರೂ ಏನನ್ನಾದರೂ ಕೊಡಬೇಕಾದರೆ ಜಿಪುಣತನ ತೋರಿಸುತ್ತೇವೆ. ಆದರೆ, ಶಿಕ್ಷಕರು ಮಾತ್ರ ತಮ್ಮ ಇಡೀ ಜೀವನವನ್ನು ಚೌಕಾಸಿ ಮಾಡದೆ ವಿದ್ಯಾರ್ಥಿಗಳಿಗೆ ಮುಡಿಪಾಗಿಟ್ಟಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಹಣ್ಣು ನೀಡುವ ಮರವಾಗಿ ರೂಪಿಸಿ, ಹಣ್ಣುಗಳನ್ನಾಗಿಸಿ ಕೊಡುಗೆ ನೀಡುತ್ತಿದ್ದಾರೆ. ಸಾವಿರಾರು ಮಂದಿಗೆ ದಾರಿ ತೋರಿಸಿದವರು. ತೃಪ್ತಿದಾಯಕ ವೃತ್ತಿ. ತುಂಬಾ ಗೌರವ ಪಡೆಯುವ ವೃತ್ತಿ ಕೂಡ. ಪೋಷಕರನ್ನು ಬಿಟ್ಟರೆ ಅತಿ ಹೆಚ್ಚು ನೆನಪಿಸಿಕೊಳ್ಳುವುದು ಶಿಕ್ಷಕರನ್ನು ಮಾತ್ರ” ಎಂದರು.
“ಒಂದು ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಮುಖ್ಯ ಕಾರಣ ಶಿಕ್ಷಕರು. ಮನುಷ್ಯ ಎಂಬ ಕಲ್ಲನ್ನು ಶಿಲೆಯಾಗಿ ಮಾಡುವುದು ಶಿಕ್ಷಕರು. ಹೀಗಾಗಿ ಶಿಕ್ಷಕರು ಯಾವಾಗಲೂ ಸರಿ ಇರುವುದನ್ನೇ ಮಾತನಾಡಬೇಕು. ನೀವು ಏನನ್ನು ಹೇಳುತ್ತೀರಿ ಅದನ್ನು ಕಲಿಯಬೇಕು. ನಿತ್ಯ ಅರ್ಧ ಗಂಟೆ ಮಕ್ಕಳಿಗೆ ಸಮಾಜಿಕ ಜ್ಞಾನದ ಬಗ್ಗೆ ಹೇಳಿಕೊಡಿ” ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ ಬಾಗೇವಾಡಿ ಮಾತನಾಡಿ, “ಉತ್ತಮ ಸಮಾಜ ಹಾಗೂ ದೇಶದ ನಿರ್ಮಾಣಕ್ಕಾಗಿ ಬುನಾದಿ ಹಾಕುವವರು ಶಿಕ್ಷಕರು. ಉನ್ನತ ಹುದ್ದೆಯಲ್ಲಿ ಇದ್ದರೂ ಕೂಡ ಗುರುಗಳು ಎಂಬುದನ್ನು ಹೆಮ್ಮೆಯಿಂದ ಹೇಳಬಹುದಾಗಿದೆ” ಎಂದರು.
ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್ ಮಾತನಾಡಿ, “ಶಾಲಾ ಶಿಕ್ಷಣದಲ್ಲಿ ಎಐಗೆ ಆದ್ಯತೆ ನೀಡಲು ಕ್ರಮ ವಹಿಸಲಾಗುತ್ತಿದೆ. ಹಳೆ ವಿದ್ಯಾರ್ಥಿಗಳು ಶಾಲಾಭಿವೃದ್ಧಿಗೆ ಸಹಾಯ ಮಾಡಬೇಕು. ಸರ್ಕಾರದಿಂದ ಎಲ್ಲ ಸೌಲಭ್ಯ ನೀಡಲಾಗುತ್ತಿದೆ. ಎಲ್ಲರ ಉದ್ದೇಶ ಗುಣಾತ್ಮಕ ಶಿಕ್ಷಣ ನೀಡುವುದಾಗಿದೆ” ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, “ನಮ್ಮ ಮೊದಲ ರೋಲ್ ಮಾಡೆಲ್ ಶಿಕ್ಷಕರು. ನನ್ನ ಕನ್ನಡ ಮೇಷ್ಟ್ರು ನನಗೆ ರೋಲ್ ಮಾಡೆಲ್ ಆಗಿದ್ದಾರೆ. ತಂದೆ ತಾಯಿ ಬಿಟ್ಟರೆ ಅತಿ ಹೆಚ್ಚು ಗೌರವ ಕೊಡುವುದು ಶಿಕ್ಷಕರಿಗೆ ಮಾತ್ರ. ಸರ್ಕಾರಿ ನೌಕರರು ಹೆಚ್ಚು ಶಿಕ್ಷಕರಾಗಿದ್ದಾರೆ. ಗುರುಭವನ ಬಾಕಿ ಉಳಿದಿದೆ. ಅದರ ನಿರ್ಮಾಣಕ್ಕೆ ಸಹಕಾರ ನೀಡುತ್ತೇವೆ. ಒಂದು ದಿನದ ವೇತನ ನೀಡಲು ಸಭೆ ನಡೆಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಕಿಶೋರಿಯರ ಸಮಗ್ರ ಆರೋಗ್ಯ ಕಾಳಜಿಗೆ ‘ಪ್ರಾಣಸಖಿ’ ಯೋಜನೆ; ಶಿಕ್ಷಣ ಅಧಿಕಾರಿಗಳಿಗೆ ಕಾರ್ಯಾಗಾರ
ಕಾರ್ಯಕ್ರಮದಲ್ಲಿ ಜಿಲ್ಲಾದ್ಯಂತ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಡೆದ 18 ಶಿಕ್ಷಕರನ್ನು ಹಾಗೂ ನಿವೃತ್ತಿ ಶಿಕ್ಷಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಬಿಇಒ ಮಧುಮಾಲತಿ ಸೇರಿದಂತೆ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳಾದ ಎ ಎಸ್ ಚೌಡಪ್ಪ, ಮುರಳಿ ಮೋಹನ್, ನಾಗರಾಜ್, ಮುನಿಯಪ್ಪ, ಅಪ್ಪೇಗೌಡ, ಶಿವಕುಮಾರ್, ಸಿ ವಿ ನಾಗರಾಜ್ ಶಂಕರೇಗೌಡ, ರಮೇಶ್, ಮಂಜುಳಾ ಸೇರಿದಂತೆ ಇತರರು ಇದ್ದರು.





