ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಒದಗಿಸುವುದರ ಜೊತೆಗೆ ಅಗತ್ಯವಾದ ಔಷಧಿಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಔಷಧಿಗಳನ್ನು ಹೊರಗೆ ತೆಗೆದುಕೊಳ್ಳಿ ಎಂದು ಚೀಟಿ ಬರೆದು ಕೊಡುವುದು, ರೋಗಿಗಳ ಬಳಿ ಹಣ ಕೇಳುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಕೋಲಾರ ನಗರದ ಕ್ಲಾಕ್ ಟವರ್ ಬಳಿಯಿರುವ ದರ್ಗಾ ಮೊಹಲ್ ಆಸ್ಪತ್ರೆಗೆ ಭೇಟಿ ನೀಡಿ, ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದ ಅವರು, “ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಬರುವಂತೆ ನಿಗಾ ವಹಿಸಬೇಕು. ಈ ಆಸ್ಪತ್ರೆಯಲ್ಲಿ ಜನರ ಮೆಚ್ಚುಗೆ ಇದೆ. ಆದರೆ ದುರುಪಯೋಗವಾಗಬಾರದು. ಸರ್ಕಾರಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ಉಚಿತ. ಹಣ ಕೊಡುವುದು- ತೆಗೆದುಕೊಳ್ಳುವುದು ತಪ್ಪು. ಆಸ್ಪತ್ರೆಯ ಔಷಧಗಳನ್ನೇ ರೋಗಿಗಳಿಗೆ ಉಚಿತವಾಗಿ ನೀಡಬೇಕು” ಎಂದರು.
“ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಎಂಆರ್‌ಐ ಸ್ಕ್ಯಾನಿಂಗ್ ಮತ್ತು ಸಿಟಿ ಸ್ಕ್ಯಾನ್‌ಗೆ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸದಂತೆ ಎಚ್ಚರ ವಹಿಸಬೇಕು. ರೋಗಿಗಳಿಗೆ ವೈದ್ಯರು, ಸಿಬ್ಬಂದಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಲಿಫ್ಟ್ ನಿರ್ವಹಣೆ ಮಾಡಬೇಕು. ಬೋರ್ ವೆಲ್ ದುರಸ್ತಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು” ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಆರೋಗ್ಯಾಧಿಕಾರಿ ನಾರಾಯಣಸ್ವಾಮಿ ಮಾತನಾಡಿ, ಆಸ್ಪತ್ರೆಯಲ್ಲಿ ಲಿಫ್ಟ್, ಮೆಡಿಕಲ್ ಗ್ಯಾಸ್ ಲೈಫ್ ಲೈನ್, ನೀರು ಸೇರಿದಂತೆ ಮೂಲ ಸೌಲಭ್ಯಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿದರು. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆರ್ಥಿಕ ಸಮಸ್ಯೆಯಿದ್ದರೆ ಅದನ್ನು ಅಧಿಕಾರಿಗಳು ಗಮನಕ್ಕೆ ತನ್ನಿ, ಸರ್ಕಾರದಿಂದ ಅಥವಾ ಸಿಎಸ್ಆರ್ ಅನುದಾನದಿಂದ ಕೊಡಿಸುವ ಕೆಲಸ ಮಾಡುತ್ತೇನೆ” ಎಂದರು.
ಇದನ್ನೂ ಓದಿ: ಕೋಲಾರ | ನಾಡ ಹಬ್ಬದಲ್ಲಿ ಜಾತಿ-ಧರ್ಮ ತರೋದು ಸರಿಯಲ್ಲ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಕೂಡಾ ಅಧ್ಯಕ್ಷ ಹನೀಫ್, ಉಪಾಧ್ಯಕ್ಷೆ ಸಂಗೀತಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್, ನಗರಸಭೆ ಸದಸ್ಯರಾದ ಅಪ್ಸರ್, ಸಾದಿಕ್, ಷಫಿ,ರಫಿ, ಶಾಮೀರ್, ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಸೈಫ್, ಹಿದಾಯತ್, ಮನ್ಸೂರ್ ಸೇರಿದಂತೆ ನಗರಸಭೆ ಸದಸ್ಯರು ಅಧಿಕಾರಿಗಳು ಕಾಂಗ್ರೆಸ್ ಮುಖಂಡರು ಇದ್ದರು.





