ಕೋಲಾರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರು ಹೊಡೆದಾಡಿಕೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಇಬ್ಬರು ಉಪನ್ಯಾಸಕರ ನಡುವೆ ಹೊಡೆದಾಟ ನಡೆದಿದ್ದು, ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, ಹಾಲಿ ರಾಜ್ಯಶಾಸ್ತ್ರ ಉಪನ್ಯಾಸಕ ನಾಗಾನಂದ ಕೆಂಪರಾಜು ಮತ್ತು ಕನ್ನಡ ಉನ್ಯಾಸಕ ಜೆ.ಜಿ ನಾಗರಾಜ್ ನಡುವೆ ಜಗಳ ನಡೆದಿದೆ. ಗಲಾಟೆಯಲ್ಲಿ ನಾಗರಾಜ್ ಅವರ ಮುಖಕ್ಕೆ ಪೆಟ್ಟುಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
“ತಮ್ಮ ಮೇಲೆ ಉಪನ್ಯಾಸಕ ನಾಗಾನಂದ ಕೆಂಪರಾಜು ಹಲ್ಲೆ ನಡೆಸಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೋತಿರುವ ನಾಗಾನಂದ, ದಿನನಿತ್ಯ ನನಗೆ ಹಿಂಸೆ ಕೊಡುತ್ತಿದ್ದರು. ಅವಹೇಳನಾಕಾರಿಯಾಗಿ ನಿಂದಿಸುತ್ತಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ, ಹಲ್ಲೆ ನಡೆಸಿದ್ದಾರೆ” ಎಂದು ನಾಗರಾಜ್ ಆರೋಪಿಸಿದ್ದಾರೆ.
ಉಪನ್ಯಾಸಕ ನಾಗಾನಂದ ಕೂಟ ಆಸ್ಪತ್ರೆಗೆ ದಾಖಲಾಗಿದ್ದು, ನನ್ನ ಮೇಲೆ ಮೊದಲು ನಾಗರಾಜ್ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯ ಇನ್ಸ್‌ಪೆಕ್ಟರ್ ಸದಾನಂದ ಅವರು ಆಸ್ಪತ್ರೆಗೆ ತೆರಳಿ, ಮಾಹಿತಿ ಪಡೆದುಕೊಂಡಿದ್ದಾರೆ.




