ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಬೆಟ್ಟಹೊಸಪುರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂಗನವಾಡಿ ಕೇಂದ್ರದಲ್ಲಿ ನೀರಿನ ವ್ಯವಸ್ಥೆ ಇದ್ದರೂ ಟ್ಯಾಂಕ್ ಇಲ್ಲದೇ ಸಮಸ್ಯೆ ಆಗಿದೆ. ಈ ಕುರಿತು ಕೂಡಲೇ ಪೈಪ್‌ಲೈನ್ ಅಳವಡಿಕೆಗೆ ಕ್ರಮವಹಿಸಲಾಗುವುದು ಎಂದ ಅವರು, ಮಕ್ಕಳಿಗೆ ನೀಡುವ ಆಹಾರಧಾನ್ಯ ಹಾಗೂ ಪೌಷ್ಟಿಕ ಆಹಾರದ ಪೊಟ್ಟಣಗಳನ್ನು ಪರಿಶೀಲನೆ ಮಾಡಿದರು. ಎಲ್ಲ ಪೌಷ್ಟಿಕಾಂಶ ಇರುವಂತೆ ನೋಡಿಕೊಳ್ಳಬೇಕು. ಗುಣಮಟ್ಟದ ಆಹಾರ ಧಾನ್ಯಗಳನ್ನು ಮಾತ್ರ ಬಳಸಬೇಕು. ಅಡುಗೆ ಮಾಡಲು ಬಳಸುವ ಪಾತ್ರೆ ಹಾಗೂ ಕೊಠಡಿಯನ್ನು ಸ್ವಚ್ಛವಾಗಿಟ್ಟುಕೊಂಡು, ಅಡುಗೆಗೆ ಶುದ್ಧ ನೀರನ್ನು ಬಳಸಬೇಕು ಎಂದು ಸೂಚಿಸಿದರು.
ಅಂಗನವಾಡಿಗಳ ಬಗ್ಗೆ ಯಾವುದೇ ದೂರು ಬಂದಲ್ಲಿ ಸಂಬಂಧಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗುವಂತೆ ಅಂಗನವಾಡಿ ಪರಿಸರವನ್ನು ಇಟ್ಟುಕೊಳ್ಳಬೇಕು. ಸರ್ಕಾರ ಒದಗಿಸುವ ಪೌಷ್ಟಿಕ ಆಹಾರದ ಕಿಟ್‌ಗಳನ್ನು ವ್ಯವಸ್ಥಿತವಾಗಿ ಮಕ್ಕಳಿಗೆ ನೀಡಬೇಕು. ಯಾವುದೇ ಮಗು ಅಪೌಷ್ಟಿಕತೆಯಿಂದ ಬಳಲುವಂತೆ ಆಗಬಾರದು. ಮಗುವಿನ ಬೆಳವಣಿಗೆ ಹಾಗೂ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕು ಎಂದರು.
ಇದನ್ನೂ ಓದಿ: ಕೋಲಾರ | ರೈತರ ಕೃಷಿ ಭೂಮಿ ತಂಟೆಗೆ ಸರ್ಕಾರ ಬರೋದು ಸರಿಯಲ್ಲ: ನಳಿನಿ ಗೌಡ
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಷಂಷೀರ್, ಕಾಂಗ್ರೆಸ್ ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಬೆಟ್ಟಹೊಸಪುರ ಜಗನ್, ಮುಂತಾದವರು ಇದ್ದರು.





