ಮತಗಳ್ಳತನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕೋಲಾರ ನಗರದಲ್ಲಿ ಯೂತ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯಲ್ಲಿ ಬಣಗಳ ಜಗಳ ನಡೆದಿದ್ದು, ರಾಜ್ಯ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನಿಲ್ ನಂಜೇಗೌಡ ಹಾಗೂ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರಿದ್ ಬಣಗಳ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.
ಕೋಲಾರ ಹಾಗೂ ಮಾಲೂರು ಕಾಂಗ್ರೆಸ್ ಮುಖಂಡರು ಪರಸ್ಪರ ಕೈಕೈ ಮಿಲಾಯಿಸಿಕೊಳ್ಳುವ ಹಂತ ತಲುಪಿದ್ದು, ಕೋಲಾರದವರು ಪುಟಗೋಸಿ ಎಂದು ಸುನಿಲ್ ನಂಜೇಗೌಡ ಬಣದವರು ಹೇಳಿದ್ದು, ಮತ್ತೊಂದು ಬಣಕ್ಕೆ ಸಿಟ್ಟು ತರಿಸಿದೆ. ಶಾಸಕರ ಪುತ್ರನೆಂದು ಧಮ್ಕಿ ಹಾಕಬಹುದೇ ಎಂದು ಸೈಯದ್ ಅಫ್ರಿದ್ ಬಣದವರು ಪ್ರಶ್ನಿಸಿದರು.
ಸುನಿಲ್ ನಂಜೇಗೌಡ ಬಣದವರು ಬೈರೇಗೌಡ ನಗರದಿಂದ ಬಂಗಾರಪೇಟೆ ವೃತ್ತದವರೆಗೆ ಮೆರವಣಿಗೆ ನಡೆಸಲು ಪೊಲೀಸರ ಅನುಮತಿ ಪಡೆದಿದ್ದರು. ಆದರೆ, ಪೊಲೀಸರ ಅನುಮತಿ ಉಲ್ಲಂಘಿಸಿ ಇಟಿಸಿಎಂ ವೃತ್ತದ ಕಡೆ ತೆರಳಿದರು. ಇತ್ತ ಅಫ್ರಿನ್ ಬಣದವರು ಇಟಿಸಿಎಂ ವೃತ್ತದಿಂದ ಪದವಿ ಕಾಲೇಜು ವೃತ್ತಕ್ಕೆ ಮೆರವಣಿಗೆ ನಡೆಸಲು ಅನುಮತಿ ಪಡೆದಿದ್ದರು. ಹೀಗಾಗಿ, ಇಟಿಸಿಎಂ ವೃತ್ತದಲ್ಲಿ ಎರಡೂ ಬಣದವರು ಮುಖಾಮುಖಿಯಾದರು. ಸುನಿಲ್ ನಂಜೇಗೌಡ ಬಣದಲ್ಲಿ ಹೆಚ್ಚು ಜನರಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಯಿತು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಪೊಲೀಸರು ಮಧ್ಯಪ್ರವೇಶ ಮಾಡಿದ್ದು, ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರು.
“ಶಿಷ್ಟಾಚಾರ ಉಲ್ಲಂಘಿಸಿದ್ದಾರೆ, ಶಾಸಕರ ಮಗ ಎಂದುಕೊಂಡು ಬಂದರೆ ಕೋಲಾರದಲ್ಲಿ ನಡೆಯುವುದಿಲ್ಲ. ಶಿಷ್ಟಾಚಾರದಂತೆ ಅಧ್ಯಕ್ಷರನ್ನು ಸ್ವಾಗತಿಸಬೇಕಿರುವುದು ಜಿಲ್ಲಾ ಯೂತ್ ಅಧ್ಯಕ್ಷರು, ಕಾಸು ಖರ್ಚು ಮಾಡಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಾವು” ಎಂದು ಸೈಯದ್ ಅಫ್ರಿದ್ ವಾಗ್ದಾಳಿ ನಡೆಸಿದರು.
ಎರಡೂ ಬಣಗಳು ಮೆರವಣಿಗೆಯ ಶ್ರೇಯಸ್ಸು ಪಡೆಯಲು ಕಿತ್ತಾಡಿದರು. ಮೆರವಣಿಗೆ ತಮ್ಮ ನೇತೃತ್ವದಲ್ಲಿ ನಡೆಯಬೇಕೆಂದು ಸುನಿಲ್ ನಂಜೇಗೌಡ ಬಣದ ವಾದವಾದರೆ, ತಮ್ಮ ಬಣದಲ್ಲಿ ನಡೆಯಬೇಕೆಂದು ಅಫ್ರಿದ್ ಬಣದವರು ವಾದ ಮುಂದಿಟ್ಟರು.
ವೇದಿಕೆ ಕಾರ್ಯಕ್ರಮದತ್ತ ಹೋಗದಂತೆ ಸುನಿಲ್ ನಂಜೇಗೌಡ ಬಣದವರನ್ನು ಪೊಲೀಸರು ತಡೆದರು. ಬಣದ ಮುಖಂಡರು, ‘ಸುನಿಲ್ ಗೌಡ ಅವರನ್ನು ನಿರ್ಲಕ್ಷಿಸಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೆ ಹೋಗುವುದು ಬೇಡ’ ಎಂದು ಪಟ್ಟು ಹಿಡಿದರು. ಸುನಿಲ್ ಮುಂದೆ ಹೆಜ್ಜೆ ಇಡಲು ಮುಂದಾದರು, ಆದರೆ ಬೆಂಬಲಿಗರು ಬಿಡಲಿಲ್ಲ. ಹೀಗಾಗಿ, ಈ ಬಣದವರು ಸುನಿಲ್ ಅವರಿಗೆ ಜೈಘೋಷ ಹಾಕುತ್ತ ವಾಪಸ್ ಹೋದರು.
ಇತ್ತ ಸೈಯದ್ ಅಫ್ರಿದ್ ಬಣದವರು ಘೋಷಣೆ ವಾಕ್ಯದೊಂದಿಗೆ ಫುಡ್ ಕೋರ್ಟ್ ಬಳಿ ವೇದಿಕೆ ಕಾರ್ಯಕ್ರಮ ನಡೆಸಿದರು. ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷರ ಉದಯ ಬಾನು ಅವರನ್ನು ಸುನಿಲ್ ನಂಜೇಗೌಡ ಬಣದವರು ಸ್ವಾಗತಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷರ ಉದಯ ಬಾನು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಪಾಲ್ಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಮದ್ದೂರಲ್ಲಿ ಬಿಜೆಪಿ ಪರ ಸಂಘಟನೆಯವರಿಂದ ಕಲ್ಲು ತೂರಾಟ: ಗೃಹ ಸಚಿವ ಪರಮೇಶ್ವರ್
‘ಬ್ಯಾನರ್ ವಿಚಾರಕ್ಕಾಗಿ ಸಮಸ್ಯೆ ಉಂಟಾಗಿದೆ. ನಾವೆಲ್ಲಾ ಕುಳಿತು ಮಾತನಾಡಿ ಸರಿಪಡಿಸಿಕೊಳ್ಳುತ್ತೇವೆ’ ಎಂದು ಸುನಿಲ್ ನಂಜೇಗೌಡ ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಗಲ್‌ಪೇಟೆ ಸರ್ಕಲ್ ಇನ್‌ಸ್ಪೆಕ್ಟರ್ ಲೋಕೇಶ್, ನಗರ ಠಾಣೆ ಇನ್‌ಸ್ಪೆಕ್ಟರ್ ಸದಾನಂದ ನೇತೃತ್ವದಲ್ಲಿ ಪೊಲೀಸರು ಬಣಗಳ ಜಗಳ ನಿಲ್ಲಿಸಲು ಹರಸಾಹಸಪಟ್ಟರು.





