ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗಿದ್ದ ಶಿಕ್ಷಕಿ ಅಖ್ತರ್ ಬೇಗಂ (50) ಮೂರು ದಿನಗಳ ಹಿಂದೆ ಕಾಣೆಯಾಗಿದ್ದರು. ಇದೀಗ ಕೆಜಿಎಫ್‌ನ ಬೇತಮಂಗಲ ಹೋಬಳಿಯ ಅಯ್ಯಪಲ್ಲಿ ಅಮಾನಿ ಕೆರೆಯಲ್ಲಿ ಶಿಕ್ಷಕಿಯ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪಟ್ಟಣದ ಬಳಿಯ ಟೀ ಕೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯಪಲ್ಲಿ ಅಮಾನಿಕೆರೆಯ ದಡದಲ್ಲಿ ಶಿಕ್ಷಕಿಯ ಬ್ಯಾಗ್ ಪತ್ತೆಯಾಗಿದೆ. ಅಲ್ಲೇ ಬದಿಯ ಕೆರೆಯಲ್ಲಿ ಶವ ತೇಲುತ್ತಿದ್ದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಬೇತಮಂಗಲ ಪೊಲೀಸ್ ಠಾಣೆಯ ಪಿಎಸ್ಐ ಗುರುರಾಜ್ ಸಿಪಿಐ ರಂಗಶಾಮಯ್ಯ ನೇತೃತ್ವದಲ್ಲಿ ಅಗ್ನಿಶಾಮಕ ಮತ್ತು ಸ್ಥಳೀಯರ ನೆರವಿನೊಂದಿಗೆ ಶವವನ್ನು ತೆಗೆದು ಕೆಜಿಎಫ್ ನ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

ಅಖ್ತರ್ ಬೇಗಂ ಕಳೆದ 15 ದಿನಗಳಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಮಗನ ಬೈಕ್ ನಲ್ಲಿಯೇ ಬಸ್ ನಿಲ್ದಾಣದವರೆಗೆ ಡ್ರಾಪ್ ಪಡೆದುಕೊಂಡಿದ್ದಾರೆ. ಅಂದು ತಮ್ಮ ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರಂತೆ.
ಇದನ್ನೂ ಓದಿ: ಕೋಲಾರ | ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ನಿಖರ ಮಾಹಿತಿ ನೀಡಿ: ಇಒ ವೆಂಕಟೇಶಪ್ಪ
ಸೋಮವಾರ ರಾತ್ರಿಯಾದರೂ ಮನೆಗೆ ವಾಪಸ್ ಬರದೆ ಇದ್ದಾಗ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಸಮೀಕ್ಷೆ ಕಾರ್ಯದಲ್ಲಿ ಪ್ರಗತಿ ಸಾಧಿಸಿಲ್ಲದ್ದರಿಂದ ಖಿನ್ನತೆಗೆ ಒಳಗಾಗಿದ್ದರು. ಹಿರಿಯ ಅಧಿಕಾರಿಗಳ ಭಯವೂ ಇತ್ತು ಎನ್ನಲಾಗುತ್ತಿದೆ.
ಪೊಲೀಸರು ತನಿಖೆ ಕೈಗೊಂಡಿದ್ದು, ಸಾವಿಗೆ ನಿಜ ಕಾರಣ ಇನ್ನಷ್ಟೇ ತಿಳಿಯಬೇಕಿದೆ.





