ಬೇತಮಂಗಲ: ಸಮಾಜದಲ್ಲಿ ಪ್ರತಿಯೊಬ್ಬ ಹೆಣ್ಣು ಮಗು ಸಹ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಎಲ್ಲಾ ರಂಗದಲ್ಲೂ ಮೇಲುಗೈ ಸಾಧಿಸಿದಾಗ ಮಾತ್ರ ಹೆಣ್ಣು ಮಕ್ಕಳು ಗೌರವವನ್ನು ಸಾಧಿಸಲು ಸಾಧ್ಯವಾಗುತ್ತದೆ ಹಾಗೂ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೆಜಿಎಫ್ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮುಜಾಫರ್ ಎ.ಮಂಜರಿ ಅವರು ತಿಳಿಸಿದರು.
ಪಟ್ಟಣದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಆವರಣದಲ್ಲಿ ಕೆಜಿಎಫ್ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ದೇವರಾಜ್ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಪೊಲೀಸ್ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆಯ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ಕಾನೂನಿನ ಅರಿವು ಮತ್ತು ಪ್ರೋತ್ಸಾ ಕಾಯ್ದೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಹಳ್ಳಿಯ ಜನರು ತಮ್ಮ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸುವಲ್ಲಿ ತುಂಬಾ ಹಿಂದೆ ಇದ್ದಾರೆ, ಯಾವಾಗ ಹೆಣ್ಣು ಮಕ್ಕಳು ಉನ್ನತ ಶಿಕ್ಷಣವನ್ನು ಪಡೆದು ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಿದಾಗ ಮಾತ್ರ ಸಮಾಜದಲ್ಲಿ ಆಗುತ್ತಿರುವಂತಹ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಲಿಂಗ ತಾರತಮ್ಯ:
ನಮ್ಮ ದೇಶವು ಪುರುಷ ಪ್ರಧಾನ ದೇಶವಾಗಿರುವುದರಿಂದ ಮಗು ಜನಿಸುವುದಕ್ಕಿಂತ ಮುಂಚೆಯೇ ಲಿಂಗ ತಾರತಮ್ಯವನ್ನು ಮಾಡುತ್ತಾರೆ ಬಹುತೇಕರು ತಮಗೆ ಗಂಡು ಮಗುವಾಗಲಿ ಎಂದು ಕೋರುತ್ತಾರೆ, ಹೆಣ್ಣು ಮಗು ಆದರೆ ನಿರಾಸಕ್ತಿ ತೋರಿ ಅದೇ ಗಂಡು ಮಗುವಾದರೆ ಸಂಭ್ರಮಿಸುವಂತಹ ತಾರತಮ್ಯವನ್ನು ಅಳವಡಿಸಿಕೊಂಡು ಬರುತ್ತಿರುವುದು ಬದಲಾದಾಗ ಮಾತ್ರ ಹೆಣ್ಣು ಮಗುವಿಗೆ ಗೌರವ ಕೊಟ್ಟಂತೆ ಎಂದರು.
ಶಿಕ್ಷಣದಲ್ಲಿ ವ್ಯತ್ಯಾಸ:
ಪೋಷಕರು ಗಂಡು ಮಗುವಿಗಾದರೆ ಉನ್ನತ ಶಿಕ್ಷಣವನ್ನು ಕೊಟ್ಟು ಉನ್ನತ ಸ್ಥಾನಮಾನಕ್ಕೆ ತರುತ್ತಾರೆ, ಆದರೆ ಹೆಣ್ಣು ಮಗುವಿಗೆ 18 ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಮದುವೆ ಮಾಡಲು ನಿರ್ಧರಿಸಿ ಶಿಕ್ಷಣವನ್ನು ಮುಟ್ಟೋಕುಗೊಳಿಸುತ್ತಾರೆ, ಈ ಪದ್ಧತಿಯನ್ನು ಕೈ ಬಿಟ್ಟು ಪುರುಷರಂತೆ ಹೆಣ್ಣು ಮಕ್ಕಳಿಗೂ ಶಿಕ್ಷಣವನ್ನು ಕೊಡಬೇಕು ಎಂದರು.
ಬಾಲ್ಯ ವಿವಾಹ ಅಪರಾಧ:
ಸಮಾಜದ ಯಾವುದೇ ಮೂಲೆಯಲ್ಲಿ ಆದರೂ 18 ವರ್ಷಕ್ಕಿಂತ ಕೆಳಗಿನ ಹೆಣ್ಣು ಮಗುವಿಗೆ ಮದುವೆ ಮಾಡುತ್ತಿರುವ ಘಟನೆಯನ್ನು ನಿರ್ಭೀತಿಯಿಂದ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಗಮನಕ್ಕೆ ತಂದಾಗ ತಕ್ಷಣ ಅಂತಹ ಬಾಲ್ಯ ವಿವಾಹ ವನ್ನು ತಡೆದು ಒಂದು ಹೆಣ್ಣು ಮಗುವನ್ನು ರಕ್ಷಣೆ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು.
ಹೆಣ್ಣುಮಕ್ಕಳು ದೃಢ ನಿರ್ಧಾರ ಕೈಗೊಳ್ಳಿ:
ಕೆಜಿಎಫ್ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್ ಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ತಮಗೆ ತಾವೇ ಸೂಕ್ತವಾದ ನಿರ್ಧಾರವನ್ನು ಕೈಗೊಂಡು ಯಾವುದೇ ರೀತಿಯ ಆಕರ್ಷಣಗಳಿಗೆ ಬಲೆಯಾಗದೆ ಶಿಕ್ಷಣದಲ್ಲಿ ಮುಂದೆ ಬಂದು ತಮ್ಮ ಜೀವನವನ್ನು ತಾವೇ ಉತ್ತಮ ಪಡಿಸಿಕೊಳ್ಳಬೇಕು ಎಂದು ಕಿವಿ ಮಾತು ನುಡಿದರು.
ಹೆಣ್ಣು ಮಕ್ಕಳು ಜಾಗೃತರಾಗಬೇಕು:
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವಂತಹ ದೌರ್ಜನ್ಯಗಳು ಹಾಗೂ ದಬ್ಬಾಳಿಕೆ ಅಪಾರಣಗಳಿಂದ ಹೆಣ್ಣು ಮಕ್ಕಳೇ ಜಾಗೃತರಾಗಿ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು. ಅನಿವಾರ್ಯದ ಸಮಯದಲ್ಲಿ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಿ ರಕ್ಷಣೆಯನ್ನು ಪಡೆಯಬೇಕೆಂದರು.
ಪ್ರತಿನಿತ್ಯ ಪೋಷಕರು ತಮ್ಮ ಮಕ್ಕಳು ಮೊಬೈಲ್ ನಲ್ಲಿ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಕೊಡಬೇಕು ಆಗ ಮಾತ್ರ ಮಕ್ಕಳು ದಾರಿ ತಪ್ಪಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನು ಓದಿದ್ದೀರಾ…? ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಇಂದಿರಾಗಾಂಧಿ ಪುಣ್ಯಸ್ಮರಣೆ
ಈ ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಶೆಮಿದ, ಸ್ಕೂಲ್ ಆಫ್ ಲಾ ಪ್ರಾಂಶುಪಾಲರಾದ ಕೌಶಿಕ್, ವಕೀಲರ ಸಂಘದ ಅಧ್ಯಕ್ಷರಾದ ರಾಜಗೋಪಾಲ್ ಗೌಡ, ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಸಿ ನಾಗರಾಜ್, ಬೇತಮಂಗಲ ವೃತ್ತ ನಿರೀಕ್ಷಕ ರಂಗಶಾಮಯ್ಯ, ಪಿಎಸ್ಐ ಗುರುರಾಜ್ ಚಿಂತಕಲ್, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ರಾಜೇಶ್, ವಿದ್ಯಾರ್ಥಿ ಕ್ಷೇಮಫಲನ ಅಧಿಕಾರಿ ಅಂಜುಮ್ ಮಹಮದ್, ಕಾನೂನು ನೆರವು ಸಂಯೋಜಕರಾದ ವಿದ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತ್ ಕುಮಾರ್, ಮುಖ್ಯ ಶಿಕ್ಷಕ ಶ್ರೀನಿವಾಸ್, ವಕೀಲರಾದ ವೆಂಕಟರಾಮೇಗೌಡ, ಕಾರ್ಯದರ್ಶಿ ರಾಜಣ್ಣ ಸೇರಿದಂತೆ ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.





