ಯರಗೋಳ್ ಜಲಾಶಯ ಕೋಲಾರ ಜಿಲ್ಲೆಯ ರೈತರಿಗೆ ಮತ್ತು ಗ್ರಾಮೀಣ ಜನತೆಗೆ ಜೀವಾಳವಾಗಿದ್ದು, ಬರಪೀಡಿತ ಪ್ರದೇಶದಲ್ಲಿ ನೀರಿನ ಭದ್ರತೆಯನ್ನು ಒದಗಿಸುವ ಯಶಸ್ವಿ ಸಣ್ಣ ನೀರಾವರಿ ಯೋಜನೆಯಾಗಿ ಗುರುತಿಸಬಹುದಾಗಿದೆ.
ಬಂಗಾರಪೇಟೆಯ ಯರಗೋಳ ಗ್ರಾಮದ ಬಳಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದ, ನೀರಿಗೆ ಅಡ್ಡಲಾಗಿ ಈ ಯರಗೋಳ್ ಜಲಾಶಯವನ್ನು ನಿರ್ಮಿಸುವ ಜತೆಗೆ ಕುಡಿಯಲು ನೀರಿಲ್ಲದೆ ಫ್ಲೋರೈಡ್ ಯುಕ್ತ ನೀರು ಕುಡಿಯುತ್ತಿದ್ದ, ಜಿಲ್ಲೆಯ ಜನರಿಗೆ ಶುದ್ಧವಾದ ಕುಡಿಯುವ ನೀರು ಕುಡಿಯುವ ಭಾಗ್ಯ ಸಿಕ್ಕರೆ ಅದೇ ಚಿನ್ನದ ನಾಡಿನ ಜನರ ಭಾಗ್ಯವಾಗಿದೆ.
ತಮಿಳುನಾಡಿನ ಗಡಿ ಭಾಗದ ಯರಗೋಳ್ ಎಂಬ ಪುಟ್ಟ ಗ್ರಾಮದ ಬಳಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗಿದೆ. ಬಂಗಾರಪೇಟೆ ಪಟ್ಟಣದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಯರಗೋಳ್ ಜಲಾಶಯದ ಸೊಬಗು ಆಕರ್ಷಣೆಯಾಗಿದ್ದು, ಕಣ್ಣಿಗೆ ಹಬ್ಬದಂತಿದೆ. ಜಲಾಶಯದ ಅಂಚಿನ ಮರ ಗಿಡಗಳಲ್ಲಿನ ಹಕ್ಕಿಗಳ ಕಲರವ. ಹಕ್ಕಿಗಳ ಗೂಡು, ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಅರಣ್ಯ. ಬಗೆ ಬಗೆಯ ಮರಗಳು ಪರಿಸರ ಪ್ರೇಮಿಗಳನ್ನು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ರಾಜ್ಯದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಲೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಈ ಯರಗೋಳ್ ಅಣೆಕಟ್ಟಯನ್ನು ನಿರ್ಮಿಸಿದ್ದಾರೆ. ಈ ಅಣೆಕಟ್ಟೆಯಿಂದ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳ ಜತೆಗೆ ಮೂರು ತಾಲೂಕುಗಳ 45 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಲಾಗಿದೆ. 17 ವರ್ಷಗಳ ನಂತರ ಕಾಮಗಾರಿ ಪೂರ್ಣಗೊಂಡು 2023 ನವಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡಿದೆ.
ಈ ಯರಗೋಳ ಅಣೆಕಟ್ಟೆಯ ವಿಶೇಷವೆಂದರೆ ಸ್ವಾತಂತ್ರ್ಯ ನಂತರ ಕೋಲಾರ ಜಿಲ್ಲೆಯಲ್ಲಿ ನಿರ್ಮಾಣಗೊಂಡ ಮೊದಲ ಅಣೆಕಟ್ಟೆ ಇದಾಗಿದೆ. ಬೇಸಿಗೆ ಹತ್ತಿರವಾಗುವ ಸಮಯದಲ್ಲಿ ಈ ಅಣೆಕಟ್ಟೆಯನ್ನು ವೀಕ್ಷಿಸುವಾಗ ನೀರೇ ಇಲ್ಲದೆ ಎಲ್ಲವೂ ಖಾಲಿ ಖಾಲಿ ಕಾಣುತ್ತದೆ. ಆದರೆ ಮಳೆಗಾಲದ ಸಮಯದಲ್ಲಿ ಅಣೆಕಟ್ಟೆ ತುಂಬಿ ಹರಿಯುವಾಗ ಸುಂದರವಾದ ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬಹುದು.
ಈ ಅಣೆಕಟ್ಟೆಯ ಒಟ್ಟು ಸಂಗ್ರಹಣಾ ಸಾಮರ್ಥ್ಯ 14.15 ಟಿಎಂಸಿ ನೀರನ್ನು ಸಂಗ್ರಹಿಸಬಹುದು. ಅಣೆಕಟ್ಟೆ ಹಾಗೂ ನೀರು ನಿಲುಗಡೆಗಾಗಿ 300 ಎಕರೆ ಪ್ರದೇಶವನ್ನು ಸ್ವಾಧೀನಕ್ಕೆ ಪಡೆದು ಅದರಲ್ಲಿ 124 ಎಕರೆ ಅರಣ್ಯ ಭೂಮಿಯಾಗಿದ್ದು, ಉಳಿದ 128 ಎಕರೆ ಭೂಮಿಯನ್ನು ರೈತರಿಂದ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಅಣೆಕಟ್ಟೆ ನಿರ್ಮಾಣಕ್ಕೆ 160 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಿದೆ. ಇದರಿಂದ 3 ನಗರಗಳಿಗೆ ಪೈಪ್ ಲೈನ್ ಅಳವಡಿಕೆ ನೀರು ಸಂಸ್ಕರಣ ಘಟಕ, ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳಿಗೆ 79.92 ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಿದ್ದು, ಒಟ್ಟು 240 ಕೋಟಿ ರೂಪಾಯಿಗಳು ವೆಚ್ಚವಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಎರಡು ವರ್ಷದ ಹಿಂದೆ ಈ ಜಾಗ ಬರೀ ನೀರು ಹರಿಯುವ ಹಳ್ಳ ಅಷ್ಟೇ. ಹೆಚ್ಚೆಂದರೆ ದನಕರುಗಳಿಗೆ ನೀರುಣಿಸುವ ಜಾಗ. ಈಗ ಡ್ಯಾಂ ಹತ್ತಾರು ಹಳ್ಳಿಗಳಿಗೆ ಉಸಿರಾಗಿದೆ. ಬತ್ತಿಹೋಗಿದ್ದ ಕೆರೆ, ಕುಂಟೆ, ಕೊಳವೆಬಾವಿಗಳಲ್ಲಿ ಜೀವಜಲ ಪುಟಿಯುತ್ತಿದೆ. ಅಳಿವಿನ ಅಂಚಿನಲ್ಲಿದ್ದ ಕೋಟ್ಯಂತರ ಜೀವಿಗಳ ಉಗಮ ಸ್ಥಾನವಾಗಿ ಬದಲಾಗಿದೆ.
ನಾವು ಗೆಳೆಯರೊಂದಿಗೆ ಹೋಗಿ ಈ ಅಣೆಕಟ್ಟೆಯನ್ನು ವೀಕ್ಷಿಸಿದಾಗ ನನ್ನ ಗಮನಕ್ಕೆ ಮುಖ್ಯವಾಗಿ ತಿಳಿದುಬಂದ ಅಂಶವೆಂದರೆ ಎಲ್ಲ ಜಲಾಶಯಗಳ ಮುಂದೆ ಇರುವಂತೆ ಬೃಹತ್ತಾದ ಉದ್ಯಾನ, ನೀರಿನ ಕಾರಂಜಿ, ಲೇಸರ್ ಲೈಟ್‌ಗಳ ವೀಕ್ಷಣೆ ಮತ್ತು ಪ್ರವಾಸಿಗರಿಗೆ ಮನೋರಂಜನೆ ಆಟಗಳನ್ನು ನಿರ್ಮಿಸುವುದರಿಂದ ಒಂದು ಒಳ್ಳೆಯ ಪ್ರವಾಸಿ ತಾಣ ಮಾಡಬಹುದು. ಅಷ್ಟೇ ಅಲ್ಲದೆ ಜಲಾಶಯದ ಹಿನ್ನೀರಿನಿಂದ ಹಳ್ಳಿಗಳಿಗೆ ಕುಡಿಯುವ ನೀರನ್ನು ಕೊಡುವುದರ ಜತೆಗೆ ಕಾಲುವೆಗಳನ್ನು ನಿರ್ಮಿಸಿ ರೈತರು ಬೆಳೆ ಬೆಳೆಯುವಂತೆ ಅನುಕೂಲ ಮಾಡಬಹುದು. ಇನ್ನು ಮುಖ್ಯವಾದುದ್ದು ಎಂದರೆ ಅಣೆಕಟ್ಟೆಯಿಂದ ಹೊರನಿಡುವ ನೀರಿಂದ ವಿದ್ಯುತ್ತನ್ನೂ ತಯಾರಿಸಬಹುದು ಎಂಬುದು ನನ್ನ ಅನಿಸಿಕೆ.
ಇದನ್ನೂ ಓದಿದ್ದೀರಾ? ಹಾಸನ ಮಣ್ಣಿನ ಹೆಣ್ಣು ಬೇರುಗಳು | ಹಗರೆಯ ಮೂವರು ಮೌಖಿಕ ಕಥೆಗಾರ್ತಿಯರು…
ಭೂಗರ್ಭ ಜಲಮಟ್ಟದ ನೀರು ಏರಿಕೆಯಾಗಿ ಈ ಜಲಾಶಯದಲ್ಲಿ ಸಂಗ್ರಹವಾಗುವುದು ಇದರ ಇನ್ನೊಂದು ಪ್ರಮುಖ ಪ್ರಯೋಜನವಾಗಿದೆ. ನೀರು ನಿಧಾನವಾಗಿ ಭೂಮಿಯಲ್ಲಿ ಸೇರಿ ಬಾವಿ ಮತ್ತು ಕೊಳವೆಬಾವಿಗಳ ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಗ್ರಾಮೀಣ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ. ಈ ಜಲಾಶಯ ಗ್ರಾಮೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ. ನೀರಾವರಿ ಸೌಲಭ್ಯ ದೊರೆಕಿದ ನಂತರ ಕೃಷಿ ಉತ್ಪಾದನೆ ಹೆಚ್ಚಾಗಿ ರೈತರ ಆದಾಯದಲ್ಲಿ ಸುಧಾರಣೆ ಕಂಡುಬಂದಿದೆ. ಜೊತೆಗೆ ಕೃಷಿ ಆಧಾರಿತ ಉದ್ಯೋಗಗಳು ಹೆಚ್ಚಾಗಿ ಸ್ಥಳೀಯ ಆರ್ಥಿಕ ವ್ಯವಸ್ಥೆ ಸುಧಾರಿಸಿದೆ.
ಪರಿಸರದ ದೃಷ್ಟಿಯಿಂದಲೂ ಯರಗೋಳ್ ಜಲಾಶಯ ಮಹತ್ವದ್ದಾಗಿದೆ. ಜಲಾಶಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸಿರು ಹೆಚ್ಚಾಗಿದ್ದು, ಪಶುಪಾಲನೆಗೆ ನೀರು ಬಹಳ ಅನುಕೂಲಕರವಾಗಿದೆ. ಪಕ್ಷಿಗಳು ಮತ್ತು ಜೀವಿಗಳಿಗೆ ವಾಸಿಸಲು ಸೂಕ್ತವಾದ ಸ್ಥಳವಾಗಿದೆ. ಒಟ್ಟಾರೆ ಯರಗೋಳ್ ಜಲಾಶಯ ಕೋಲಾರ ಜಿಲ್ಲೆಯ ರೈತರಿಗೆ ಮತ್ತು ಗ್ರಾಮೀಣ ಜನತೆಗೆ ಜೀವಾಳವಾಗಿದ್ದು, ಬರಪೀಡಿತ ಪ್ರದೇಶದಲ್ಲಿ ನೀರಿನ ಭದ್ರತೆಯನ್ನು ಒದಗಿಸುವ ಯಶಸ್ವಿ ಸಣ್ಣ ನೀರಾವರಿ ಯೋಜನೆಯಾಗಿ ಗುರುತಿಸಬಹುದಾಗಿದೆ.

ವರದಿ : ಖಾದರ್ ಇಟಗಿ, ಮಾಸ್ ಮೀಡಿಯಾ ವಿದ್ಯಾರ್ಥಿ





