ಕೇವಲ ಕಾನೂನಿನಿಂದ ಎಲ್ಲ ಬದಲಾವಣೆಗಳು ಸಾಧ್ಯವಿಲ್ಲ. ಸಾಮಾಜಿಕ ಪರಿವರ್ತನೆಗೆ ನಾಗರೀಕರು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಹೇಳಿದರು.
ಅಂತರಜಾತಿ ಮದುವೆಗಳಿಗೂ ಮುನ್ನ ಉಪಜಾತಿಗಳಲ್ಲಿ ವಿವಾಹಗಳಾಗಬೇಕು. ಪ್ರೇಮ ವಿವಾಹಗಳ ಜೊತೆಗೆ ಪೋಷಕರೇ ಅಂತರಜಾತಿ ವಿವಾಹಗಳನ್ನು ಆಯೋಜಿಸುವ ಹಂತಕ್ಕೆ ನಮ್ಮ ಸಮಾಜ ಬೆಳೆಯಬೇಕು ಎಂದು ಆಶಿಸಿದರು. ಶಾಂತಿಯುತ ಬದಲಾವಣೆಗೆ ಹಲವು ದಾರಿಗಳನ್ನು ಅರಿವು ಭಾರತ ತೋರಿಸಿಕೊಟ್ಟಿದೆ. ಈ ಕಾರ್ಯಕ್ರಮಗಳು ದೇಶದಾದ್ಯಂತ ನಡೆಯಬೇಕೆಂದರು.
ಕೋಲಾರ ತಾಲ್ಲೂಕಿನ ನಾಗನಾಳ ಗ್ರಾಮದ ಮಂಜುನಾಥ್ ವಿ ಅವರ ಮನೆಯಲ್ಲಿ ನಡೆದ ಸಹಭೋಜನದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಮಾನವೀಯ ಮೌಲ್ಯಗಳ ಪ್ರತಿಪಾದನೆಯಿಂದ ಗಟ್ಟಿ ಮನಸ್ಸುಗಳನ್ನೂ ಮೃದುಗೊಳಿಸಬಹುದಾಗಿದೆ. ಹಲವಾರು ಜಟಿಲ ಸಮಸ್ಯೆಗಳನ್ನೂ ಸರಿಯಾದ ಮಾರ್ಗದಿಂದ ಸರಿಪಡಿಸಬಹುದಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಸುದರ್ಶನ್ ಅವರು ಅರಿವು ಕಾರ್ಯಕ್ರಮಗಳ ನಿರಂತರ ಪ್ರಯತ್ನಕ್ಕೆ ಬೆಂಬಲ ಸೂಚಿಸಿ ಪ್ರತಿ ಗ್ರಾಮದಲ್ಲೂ ಸಹಭೋಜನ ಏರ್ಪಡಿಸಲು ಸೂಚಿಸಿದರು ದೂರದವರೂ ಹತ್ತಿರವಾಗಿ ಸ್ನೇಹ ಸಂಬಂಧಗಳು ಸದೃಢಗೊಳ್ಳುತ್ತವೆ ಎಂದು ಅವರು ತಿಳಿಸಿದರು.
ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಅರಿವು ಸಹಭೋಜನ ಕಾರ್ಯಕ್ರಮದಿಂದ ಅಸ್ಪೃಶ್ಯತೆಯ ಪಿಡುಗನ್ನು ಹೋಗಲಾಡಿಸಲು ಸಾಧ್ಯವಾಗುತ್ತಿದೆ ಎಂದು ಪೋಲಿಸ್ ತರಬೇತಿ ಡಿ.ಐ.ಜಿ.ಪಿ ಆಗಿರುವ ಡಿ.ದೇವರಾಜ್ ಅವರು ಅಭಿಪ್ರಾಯಪಟ್ಟರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಕನ್ನಿಕಾ ಸಿಕ್ರಿವಾಲ್ ಅವರು ಯುವಜಜರನ್ನು ಮಾನಸಿಕವಾಗಿ ಸಿದ್ಧಪಡಿಸಿಕೊಂಡರೆ ಅಸ್ಪೃಶ್ಯತೆ ನಿರ್ಮೂಲನೆ ಸಲೀಸಾಗುತ್ತದೆ ಎಂದರು. ಹಳ್ಳಿ ಕೇಂದ್ರಿತ ಕಾರ್ಯಕ್ರಮಗಳು ಬೇರೆ ಜಿಲ್ಲೆಗಳಿಗೂ ವಿಸ್ತರಣೆಯಾಗಲಿ ಎಂದರು.
ಪ್ರಜಾ ಪರಿವರ್ತನಾ ವೇದಿಕೆಯ ಬಿ ಗೋಪಾಲ್ ದಿಕ್ಸೂಚಿ ಭಾಷಣ ಮಾಡಿ, ಬಾಬಾ ಸಾಹೇಬರ ಆಶಯಗಳನ್ನು ಈಡೇರಿಸಲು ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವುದು ಮುಖ್ಯ ಬುದ್ದರ ಕಾಲದಲ್ಲಿ ಶುರುವಾದ ಸಮಭಾವ ಚಿಂತನೆಯನ್ನು ನಾವೆಲ್ಲ ಕೂಡಿ ಬಲಪಡಿಸಬೇಕು ಎಂದರು.
ಮಾಜಿ ಜಿಲ್ಲಾಪಂಚಾಯಿತಿ ಸದಸ್ಯರಾದ ನಾಗನಾಳ ಸೋಮಣ್ಣ ಅವರು ಮಾತನಾಡಿ ಶಿಕ್ಷಣ ಮತ್ತು ಆಧುನಿಕತೆಯಿಂದ ಹಳ್ಳಿಗಳು ಬದಲಾಗಿದ್ದರೂ ಇನ್ನೂ ಕೆಲವು ಮೂಢನಂಬಿಕೆಗಳು ಉಳಿದಿವೆ ಎಂದು ಹೇಳಿದರು. ಕೃಷಿಕ ಸಮಾಜದ ಜಿಲ್ಲಾಧಕ್ಷ ವಡಗೂರು ನಾಗರಾಜ್ ಮಾತನಾಡಿ ಹೋರಾಟಗಾರರು ಎತ್ತಿದ ಅಸಮಾನತೆಯ ಪ್ರಶ್ನೆಗಳಿಗೆ ಉತ್ತರವಾಗಿ ನಾವೆಲ್ಲ ಸೇರಿ ಮಾಡಬಹುದಾದ ಹಲವು ಕೆಲಸಗಳಿವೆ. ದ್ವೇಷ ಈಗ ಕಡಿಮೆಯಾಗುತ್ತಿದೆಪ್ರೀತಿಯಿಂದ ಹಳ್ಳಿಗಳಲ್ಲಿ ಉಳಿದಿರುವ ತಾರತಮ್ಯವನ್ನು ತಿದ್ದಬಹುದಾಗಿದೆ ಎಂದರು.
ಇದನ್ನು ಓದಿದ್ದೀರಾ..? ಕಾರ್ಮಿಕರ ವಿರೋಧಿ ನೀತಿಗಳ ವಿರುದ್ಧ ಬೃಹತ್ ಪ್ರತಿಭಟನೆ
ಸಹಭೋಜನ ಏರ್ಪಡಿಸಿದ ನಾಗನಾಳ ಮಂಜುನಾಥ್ ದಂಪತಿಗೆ ಗ್ರಾಮರತ್ನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಟಿ ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಕುರಟಹಳ್ಳಿ ರಾಧಾಕೃಷ್ಣ, ಓಂ ಪ್ರಕಾಶ್, ವಾರಿಧಿ ಮಂಜುನಾಥರೆಡ್ಡಿ, ಸಿ.ಡಿ.ರಾಮಚಂದ್ರೇಗೌಡ, ಮಾಜಿ ಪ್ರಾಂಶುಪಾಲ ಕೃಷ್ಣ, ತಿಪ್ಪಸಂದ್ರ ಶ್ರೀನಿವಾಸ್, ಕುಟೀರ ಶಾಂತಮ್ಮ, ಈ ನೆಲ ಈ ಜಲ ವೆಂಕಟಾಚಲಪತಿ, ಕೂಟೇರಿ ನಂಜಾಮರಿ, ಜಿ. ಮಂಜುನಾಥ್, ನಾಗನಾಳ ರಮೇಶ್, ಶಂಕರ್, ಕೆ.ಎಚ್.ರಾಮಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಪ್ರೊ.ತಿಲಕ್ ಕಾರ್ಯಕ್ರಮ ನಿರೂಪಿಸಿದರು.





