ಕೋಲಾರದ ಎಪಿಎಂಸಿ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆ: 100 ಎಕರೆ ಜಾಗ ನೀಡುವುದೇ ಸರ್ಕಾರ?

Date:

ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆ(APMC) ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಜಿಲ್ಲೆಯ ರೈತರು, ವರ್ತಕರು ಹಾಗೂ ಸಾಮಾನ್ಯ ಜನರು ಮಾರುಕಟ್ಟೆ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಕೋಲಾರ ಬಯಲುಸೀಮೆ ಜಿಲ್ಲೆಯಾಗಿದ್ದರೂ ಕೂಡ ರೈತರು ಕಷ್ಟಪಟ್ಟು ಅತಿಹೆಚ್ಚು ಟೊಮೆಟೊ ಹಾಗೂ ಇತರೆ ತರಕಾರಿ ಬೆಳೆಯುತ್ತಾರೆ. ಇಲ್ಲಿನ ಟೊಮೆಟೊ ಬೇರೆ ರಾಜ್ಯ ಹಾಗೂ ಹಲವಾರು ದೇಶಗಳಿಗೂ ರಫ್ತಾಗುತ್ತದೆ.

ಪ್ರಮುಖವಾಗಿ ವರ್ಷದ ಮುರ್ನಾಲ್ಕು ತಿಂಗಳು ಇಲ್ಲಿ ಸೀಜನ್ ನಡೆಯುವ ಸಂದರ್ಭ ಕೋಲಾರದ ಎಪಿಎಂಸಿಯಲ್ಲಿ ರೈತರಿಗೆ, ವರ್ತಕರಿಗೆ ಹಾಗೂ ಕೆಲಸ ಮಾಡುವ ಕಾರ್ಮಿಕರಿಗೆ ಜಾಗದ ಸಮಸ್ಯೆ ಹೆಚ್ಚಾಗುತ್ತದೆ. ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಜಾಗ ನೀಡಬೇಕೆಂಬ ಕೂಗು ಸುಮಾರು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಈವರೆಗೂ ಯಾವುದೇ ಸರ್ಕಾರಗಳು ಅಧಿಕಾರದ ಚುಕ್ಕಾಣಿ ಹಿಡಿದರೂ ಮಾರುಕಟ್ಟೆಗೆ ಜಾಗ ನೀಡುವ ಭರವಸೆ ಪೂರ್ಣಗೊಂಡಿಲ್ಲ. ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಜಾಗ ನೀಡುವ ಕುರಿತು ಚರ್ಚೆ ಮಾಡಿದೆ. ಆದರೆ ಜಾಗ ಯಾವಾಗ ಮಂಜೂರು ಆಗುತ್ತೆಂಬ ಸುಳಿವೂ ಇಲ್ಲ.

ಕೋಲಾರ ಎಪಿಎಂಸಿ ಮಾರುಕಟ್ಟೆಯ ವರ್ತಕ ಪುಟ್ಟರಾಜು ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಕೋಲಾರ ಟೊಮೆಟೊ ಮಾರುಕಟ್ಟೆ ಅಂದ್ರೆ ಏಷ್ಯಾದಲ್ಲೇ ದೊಡ್ಡ ಮಾರುಕಟ್ಟೆ ಎನ್ನುವ ಹೆಸರಿದೆ. ಬಯಲು ಸೀಮೆ ಜಿಲ್ಲೆಯಲ್ಲಿ ಹೆಚ್ಚಾಗಿ ರೈತರು ಕೃಷಿಯನ್ನು ನಂಬಿಕೊಂಡಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಯನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಅದರ ಜತೆಗೆ ಹಲವು ರೀತಿಯ ತರಕಾರಿಗಳನ್ನೂ ಬೆಳೆಯುತ್ತಾರೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಹೊರ ರಾಜ್ಯ, ಹೊರ ದೇಶಗಳಿಗೂ ಟೊಮೆಟೊ ರಫ್ತಾಗುತ್ತದೆ. ಜೂನ್, ಜುಲೈ, ಆಗಸ್ಟ್ ಟೊಮೆಟೊ ಸೀಜ಼ನ್ ಆಗಿರುವುದರಿಂದ ಹೇರಳವಾಗಿ ಬರುತ್ತದೆ. ಆದ್ರೆ ನಮ್ಮ ಎಪಿಎಂಸಿ ಮಾರುಕಟ್ಟೆಗೆ ಇರುವ 18 ಎಕರೆ ಜಾಗದಲ್ಲಿ ಟೊಮೆಟೊ ಲೋಡ್, ಅನ್ಲೋಡ್ ಮಾಡಲು ಬಹಳ ಕಷ್ಟವಾಗುತ್ತಿದೆ. ಟೊಮೆಟೊ ಇಳಿಸಿಕೊಳ್ಳಲು ಸೂಕ್ತವಾದ ಜಾಗವಿಲ್ಲದೆ ರಸ್ತೆಯಲ್ಲಿ ಇಳಿಸುವ ಸನ್ನಿವೇಶ ಎದುರಾಗಿದೆ. ಮಳೆಗಾಲದಲ್ಲಂತೂ ಹೇಳತೀರದಾಗಿದೆ. ಮಳೆಗಾಲದಲ್ಲಿ ಟೊಮಾಟೊ ನೆನೆಯುತ್ತದೆ, ಬಿಸಿಲು ಬಂದ್ರೆ ಒಣಗುತ್ತದೆ. ಈ ರೀತಿ ಸಮಸ್ಯೆಗಳಿವೆ. ಆದ್ರೆ ಸುಮಾರು ವರ್ಷಗಳಿಂದ ಕೋಲಾರ ಜಿಲ್ಲೆಯ ರೈತರು, ಹೋರಾಟಗಾರರು ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ 100 ಎಕರೆ ಜಾಗ ಕೊಟ್ಟು, ಸುಸಜ್ಜಿತವಾದ ಮಾರುಕಟ್ಟೆ ಮಾಡಿ ಎಂದು ಹೋರಾಟ ಮಾಡಿದರೂ ಕೂಡಾ ಈವರೆಗೂ ಮಾರುಕಟ್ಟೆಗೆ ಜಾಗ ನೀಡಿಲ್ಲ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಎಪಿಎಂಸಿ ಕೋಲಾರ

“ಕೆಲವು ತಿಂಗಳ ಹಿಂದೆ ವಕ್ಕಲೇರಿ ಬಳಿ ಜಾಗ ಇದೆಯೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಆದರೂ ಜಾಗ ಮಂಜೂರಾಗಿಲ್ಲ. ನಮ್ಮ ರೈತರ ಜಾಗವನ್ನು ಕಸಿದುಕೊಂಡು ಬೇರೆ ದೇಶಗಿಳಿಂದ ಬರುವ ಕಂಪೆನಿಗಳಿಗೆ ಜಾಗ ಕೊಡ್ತಾರೆ. ಆದ್ರೆ ಇಲ್ಲಿರುವ ರೈತರು ಬೆಳೆದಿರುವ ಬೆಳೆಯನ್ನು ಮಾರಾಟ ಮಾಡಲು ಸೂಕ್ತವಾದ ಮಾರುಕಟ್ಟೆ ನೀಡುಲು ಯಾವುದೇ ಸರ್ಕಾರಗಳೂ ಮುಂದೆ ಬಂದಿಲ್ಲ. ಟೊಮೆಟೊ ಜತೆ ವಿವಿಧ ರೀತಿಯ ತರಕಾರಿಗಳನ್ನು ಬೆಳೆದರೂ ಅವುಗಳನ್ನು ನಿರ್ವಹಣೆ ಮಾಡಲು ಸೂಕ್ತ ಜಾಗವಿಲ್ಲ. ಇಂತಹ ದುಃಸ್ಥಿತಿಯಲ್ಲಿ ನಾವು ಇದ್ದೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಅವರು ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಜಾಗ ಮಂಜೂರು ಮಾಡಬೇಕೆಂದು ಪ್ರಶ್ನೆ ಕೇಳಿರುವುದು ಸ್ವಾಗತಾರ್ಹ. ಆದರೆ ಸರ್ಕಾರಕ್ಕೆ ಒತ್ತಾಯ ಮಾಡಿ ಜನಪ್ರತಿನಿಧಿಗಳು ಮಾರುಕಟ್ಟೆಗೆ ಜಾಗ ಮಂಜೂರು ಮಾಡಿಸಿದರೆ ಜಿಲ್ಲೆಯ ಜನರು ಅವರಿಗೆ ಧನ್ಯವಾದ ಹೇಳುತ್ತಾರೆ. ಆದರೆ ಕೇವಲ ಚರ್ಚೆ ಮಾಡಿ ಬಿಟ್ಟರೆ ಸಮಸ್ಯೆ ಬಗೆಹರಿಸುವುದಿಲ್ಲ” ಎಂದರು.

ಟೊಮೆಟೊ 1 1

“ನಾವು ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಸಾವಿರಾರು ಎಕರೆ ಜಾಗ ಕೇಳುತ್ತಿಲ್ಲ. ನೂರು ಎಕರೆ ಮಾತ್ರ ಕೇಳುತ್ತಿದ್ದೇವೆ ಸರ್ಕಾರ ಜಾಗ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದೇವೆ. ಕೋಲಾರ ಎಪಿಎಂಸಿ ಮಾರುಕಟ್ಟೆಗೆ 100 ಎಕರೆ ಜಾಗ ನೀಡಬೇಕೆಂದು ಸುಮಾರು 10 ವರ್ಷದಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಕೂಡ ಎಪಿಎಂಸಿಗೆ ಜಾಗ ನೀಡಲಿಲ್ಲ. ಆದರೆ ಕೋಲಾರ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂದು ಹೇಳ್ತಾರೆ, ಆದ್ರೆ ಕೇವಲ 18 ಎಕರೆಯಲ್ಲಿ ಮಾತ್ರ ಮಾರುಕಟ್ಟೆ ಇದ್ದು, ಸುಮಾರು ನೂರು ಎಕರೆ ಜಾಗ ಬೇಕು. ಜಿಲ್ಲಾಡಳಿತ ಯಾವುದೇ ಜಾಗವನ್ನು ಮಂಜೂರು ಮಾಡಿಲ್ಲ. ಚೆಲುವನಹಳ್ಳಿ ಬಳಿ 41 ಎಕರೆ ಇದೆ ಅಂತ ನಾವೇ ಹೇಳಿದ್ದೇವೆ. ಆದ್ರೆ ಅದು ಕೆರೆ ಜಾಗ ಮಂಜೂರು ಮಾಡಲಾಗುವುದಿಲ್ಲ ಅಂತ ಹೇಳುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಎಪಿಎಂಸಿಗೆ ಜಾಗ ಕೊಡಲು ಒಂದು ಕಡೆ ಕೆರೆ ಎನ್ನುತ್ತಾರೆ, ಇನ್ನೊಂದು ಕಡೆ ಫಾರೆಸ್ಟ್ ಎನ್ನುತ್ತಾರೆ. ಆದ್ರೆ ರಿಯಲ್ ಎಸ್ಟೇಟ್ ಹಾಗೂ ಬೇರೆಯವರಿಗೆ ರಾತ್ರೋರಾತ್ರಿ ಜಮೀನು ಕೊಡ್ತರೆ. ರೈತರ ಅನುಕೂಲಕ್ಕಾಗಿ ಎಪಿಎಂಸಿಗೆ ಜಮೀನು ಹುಡುಕಲು ಆಗುತ್ತಿಲ್ಲ. ಈ ವರ್ಷ ಎಪಿಎಂಸಿ ಮಾರುಕಟ್ಟೆಗೆ ಜಾಗ ಮಂಜೂರು ಆಗುತ್ತೆ ಅಂತ ಹೇಳ್ತಿದ್ದಾರೆ, ಆದರೆ ಅದು ಮಂಜುರು ಆಗುವವರೆಗೂ ಯಾವುದೇ ಗ್ಯಾರಂಟಿ ಇಲ್ಲ” ಎಂದು ಹೇಳಿದರು.

ಹೋರಾಟಗಾರರು 1

“ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಜಾಗ ಕಡಿಮೆ ಇರುವುದರಿಂದ ಟ್ರ್ಯಾಫಿಕ್ ಸಮಸ್ಯೆ ಹೆಚ್ಚಾಗಿದೆ. ಒಂದು ವಾಹನ ಮಾರುಕಟ್ಟೆ ಒಳಗೆ ಹೋಗಿ ಬರಲು ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣ ತರಕಾರಿ ಬೆಲೆ ಕಡಿಮೆ ಆಗಿ ರೈತರಿಗೆ ನಷ್ಟ ಆಗುತ್ತಿದೆ. ರೈತರಿಗೆ ಬಹಳ ಅನಾನುಕೂಲವಾಗಿರುವ ಕಾರಣ ಸರ್ಕಾರ ಬೇಗ ಜಮೀನು ಮಂಜೂರು ಮಾಡಬೇಕು. ಸುಮಾರು ಹತ್ತು ವರ್ಷದಿಂದ ರೈತ ಸಂಘದ ವತಿಯಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯಿಲ್ಲ” ಎಂದು ರೈತ ಹೋರಾಟಗಾರ್ತಿ ನಳಿನಿ ಗೌಡ ರವರು ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದರು.

“ಬೆಳಗಾವಿ ಅಧಿವೇಶನದಲ್ಲಿ ಡಿಸೆಂಬರ್‌ 18ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನಪರಿಷತ್ ಸದಸ್ಯ ಎಂ ಎಲ್ ಅನಿಲ್ ಕುಮಾರ್ ಅವರು ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಸ್ಥಳ ಬೇಗ ಮಂಜೂರು ಮಾಡುವ ಕುರಿತು ಪ್ರಸ್ತಾಪ ಮಾಡಿದ್ದಾರೆ, ಕೋಲಾರ ಶಾಸಕ ಕೊತ್ತೂರ್ ಮಂಜುನಾಥ್ ಅವರೂ ಕೂಡ ಕೋಲಾರ ಎಪಿಎಂಸಿಗೆ ಜಾಗ ನೀಡುತ್ತೇವೆಂದು ಹಲವು ಬಾರಿ ಭರವಸೆ ನೀಡಿದ್ದಾರೆ” ಎಂದರು.

ಟೊಮೆಟೊ ರೈತ

“ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಜಾಗ ಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವನ್ನು ಅಂಗಲಾಚಿ ಬೇಡುತ್ತಿದ್ದೇವೆ. ರೈತರು ಬೆಳೆದಂತಹ ಬೆಳೆ ಮಾರುಕಟ್ಟೆಗೆ ಹೋದಾಗ ಮಳೆ ಮತ್ತು ಬಿಸಿಲಿನಿಂದ ನಲುಗಿದೆ. ಇದರಿಂದ ತುಂಬಾ ಸಮಸ್ಯೆ ಉಂಟಾಗಿ ರೈತರಿಗೆ ಸರಿಯಾದ ರೀತಿ ಬೆಲೆ ಸಿಗುತ್ತಿಲ್ಲ. ಜನಪ್ರತಿನಿಧಿಗಳಿಗೆ, ಕಂದಾಯ ಸಚಿವರಿಗೆ ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ. ಕೋಲಾರ ರೈತರು ಅಂದ್ರೆ ಸ್ವಾಭಿಮಾನಿಗಳು ಇಡೀ ದೇಶಕ್ಕೆ ಹಾಲು, ಹಣ್ಣು, ತರಕಾರಿ ಕೊಡುವ ಜಿಲ್ಲೆ. ಆದರೆ ರೈತರ ಮಾರುಕಟ್ಟೆಗೆ ನೂರು ಎಕರೆ ಜಾಗ ಕೊಡಲಿಲ್ಲ ಅಂದ್ರೆ ಸರ್ಕಾರ ರೈತರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದು ಇದರಿಂದಲೇ ಅರ್ಥವಾಗ್ತದೆ” ಎಂದು ಹೇಳಿದರು.

“ಕೊರಗಂಡಹಳ್ಳಿಯಲ್ಲಿ ನೂರು ಎಕರೆ ಜಾಗವಿದ್ದು, ಕೋಲಾರ ಎಪಿಎಂಸಿಗೆ ಈ ಜಾಗ ಮಂಜೂರು ಆಗುತ್ತೆ, ಕಡತ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಳಿ ಇದೆ ಅಂತ ಹೇಳ್ತಿದ್ದಾರೆ. ಆದ್ರೆ ಕಡತ ವಿಲೇವಾರಿ ಆಗುವುದಕ್ಕೆ ಎಷ್ಟು ವರ್ಷ ಬೇಕು. ಈವರೆಗೂ ಏನೂ ಆಗಿಲ್ಲ” ಎಂದು ಹೇಳಿದರು.

ಟೊಮೆಟೊ 6

“ಅಧಿವೇಶನದಲ್ಲಿ ರೈತರಿಗೆ ಮಾರುಕಟ್ಟೆಗೆ ಜಾಗ ನೀಡಬೇಕೆಂಬ ಧ್ವನಿ ಎತ್ತುತ್ತಿದ್ದರೂ ಕಂದಾಯ ಮಂತ್ರಿಗಳು ಕ್ಯಾರೆ ಎನ್ನುತ್ತಿಲ್ಲ. ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಜಾಗದ ಸಮಸ್ಯೆ ಜೀವಂತವಾಗಿದೆ. ಕೆಲವರು ಮಾರುಕಟ್ಟೆಯನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವಂತಹ ಮಾತುಗಳೂ ಕೇಳಿಬಂದಿವೆ” ಎಂದರು.

“ಭೂಗಳ್ಳರ ಬಳಿ ಇರುವ ಗೋಮಾಳ ಜಮೀನುಗಳು ಎಲ್ಲೆಲಿ ಇದೆ ಅಂತ ದಾಖಲೆ ಸಹಿತ ನಾವು ಕೊಟ್ಟಿದ್ದೇವೆ. ರೈತರ ಹಿತ ಕಾಯದೆ, ಎಪಿಎಂಸಿ ಮಾರುಕಟ್ಟೆಗೆ ಜಾಗ ನೀಡದೆ ರೈತ ವಿರೋಧಿ ದೋರಣೆ ಅನುಸರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕಂದಾಯ ಮಂತ್ರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಧಿಕ್ಕಾರ ಹೇಳುತ್ತೇವೆ” ಎಂದು ಆಕ್ರೋಶ ಹೊರಹಾಕಿದರು.

ಶೀಘ್ರದಲ್ಲೇ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಕೋರಗಂಡಹಳ್ಳಿ ಬಳಿ ನೂರು ಎಕರೆ ಜಾಗ ಕೊಡುತ್ತೇವೆ. ಅಲ್ಲಿ ಜಮೀನು ಗುರುತಿಸಿದ್ದು, ಸರ್ಕಾರದ ಮಟ್ಟದಲ್ಲಿ ಇದೆ. ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಹಿತ ಕಾಪಾಡುತ್ತೇವೆಂದು ಜಿಲ್ಲಾಧಿಕಾರಿಗಳು ನಮಗೆ ಭರವಸೆ ನೀಡಿದ್ದಾರೆ.

ಎಪಿಎಂಸಿಯಲ್ಲಿ ಟೊಮೆಟೊ

ಒಂದು ವೇಳೆ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಜಾಗ ಮಂಜೂರು ಆಗಿಲ್ಲವೆಂದರೆ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಜನ್ಮ ದಿನಾಚರಣೆಯ ದಿವಸ ಫೆಬ್ರವರಿ 13ರಂದು ನಮ್ಮ ಮಾರುಕಟ್ಟೆಯ ಜಾಗದ ಸಮಸ್ಯೆಗಾಗಿ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಟೊಮೆಟೊ ಮತ್ತು ಜಾನುವಾರುಗಳ ಸಹಿತ ಬೃಹತ್‌ ಹೋರಾಟ ನಡೆಸುತ್ತೇವೆ. ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಹೋರಾಟ ಮಾಡಿದಂತೆ, ಮಾರುಕಟ್ಟೆ ಜಾಗಕ್ಕಾಗಿ ನಾವೂ ಕೂಡ ಬೃಹತ್ ಹೋರಾಟ ನಡೆಸುತ್ತೇವೆ” ಎಂದು ರೈತ ಸಂಘದ ಮುಖಂಡ ನಾರಯಣಗೌಡ ಎಚ್ಚರಿಕೆ ನೀಡಿದರು.

ಇದನ್ನೂ ಓದಿದ್ದೀರಾ? ವಿಜಯಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹೋರಾಟ: ದಮನದ ನೆರಳಿನಲ್ಲಿ ನ್ಯಾಯದ ಹುಡುಕಾಟ

ಕೋಲಾರ ಎಪಿಎಂಸಿ ಮಾರುಕಟ್ಟೆ ಜಾಗದ ಸಮಸ್ಯೆಯಿಂದ ರೈತರು, ವರ್ತಕರು ಮತ್ತು ಕಾರ್ಮಿಕರು ನಿರಂತರವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದಲೂ ಈ ಬೇಡಿಕೆ ಕೇಳಿಬರುತ್ತಿದ್ದರೂ ಯಾವುದೇ ಸರ್ಕಾರಗಳ ಅಧಿಕಾರಾವಧಿಯಲ್ಲಿಯೂ ಕಾರ್ಯರೂಪಕ್ಕೆ ಬಂದಿಲ್ಲ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಚರ್ಚೆಗಳ ಹೊರತಾಗಿಯೂ, ಜಾಗ ಮಂಜೂರಿಗೆ ಸಂಬಂಧಿಸಿದ ಯಾವುದೇ ಮಾಹಿತಿಗಳೂ ಇಲ್ಲ. ಪ್ರಸ್ತುತ 18 ಎಕರೆ ಜಾಗದಲ್ಲಿ ಮಾರುಕಟ್ಟೆ ಇದ್ದು, ಸೀಜ಼ನ್ ಸಮಯದಲ್ಲಿ ವಹಿವಾಟು ಹೆಚ್ಚಾದಾಗ ರೈತರು ಅಕ್ಷರಶಃ ಪರದಾಡುತ್ತಿದ್ದಾರೆ. ಸರ್ಕಾರವು ತ್ವರಿತವಾಗಿ ಕ್ರಮ ಕೈಗೊಂಡು ಸಾಕಷ್ಟು ಜಾಗವನ್ನು ಮಂಜೂರು ಮಾಡಿ, ರೈತರ ಹಿತರಕ್ಷಣೆಗೆ ಮುಂದಾಗಬೇಕು. ಇಲ್ಲದಿದ್ದರೆ, ಈ ಸಮಸ್ಯೆಯು ಆರ್ಥಿಕ ನಷ್ಟ ಮತ್ತು ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಬಹುದು. ರೈತರ ಉನ್ನತಿಗಾಗಿ ಸರ್ಕಾರದ ನಿರ್ಧಾರ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬಂದರೆ ಒಳಿತು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...