ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಅನ್ನು ಹೋಲುವ ನಕಲಿ ವೆಬ್‌ಸೈಟ್ ಸೃಷ್ಠಿಸಿ, ಭಕ್ತರಿಂದ ಮುಂಗಡ ರೂಮ್ ಬುಕಿಂಗ್ ಹೆಸರಿನಲ್ಲಿ ಹಣ ಪಡೆದು ನಕಲಿ ರಶೀದಿಗಳನ್ನು ನೀಡುತ್ತಿದ್ದ ಆನ್‌ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಲೂರು ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರು ನೀಡಿದ ದೂರಿನ ಮೇರೆಗೆ, ಕಳೆದ ನವೆಂಬರ್ 3ರಂದು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದು ಮುಜುರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಕ್ಕೆ ಸಂಬಂಧಿಸಿದ ಗಂಭೀರ ಮಾಹಿತಿ ತಂತ್ರಜ್ಞಾನ ವಂಚನೆ ಪ್ರಕರಣವಾಗಿರುವುದರಿಂದ, ಕುಂದಾಪುರ ಉಪವಿಭಾಗದ ಮಾನ್ಯ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಳ್ಳಲಾಯಿತು. ಬೈಂದೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ.ಬಿ ಹಾಗೂ ಕುಂದಾಪುರ ಗ್ರಾಮಾಂತರ ವೃತ್ತದ ಸಿಪಿಐ ಸಂತೋಷ ಎ. ಕಾಯ್ಕಿಣಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ತನಿಖೆಯ ವೇಳೆ ರಾಜಸ್ಥಾನ ರಾಜ್ಯದ ಆಲ್ವಾರ್ ಜಿಲ್ಲೆಯ ತಿಜಾರಾ ತಾಲ್ಲೂಕಿನ ದಾಖಾಪುರಿ ನಿವಾಸಿ ನಾಸೀರ್ ಹುಸೇನ್ (21) ಎಂಬವನು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಖಚಿತ ಪಡಿಸಿದ ಪೊಲೀಸರು. ಅದರಂತೆ ನಿನ್ನೆ ದಿನ ರಾಜಸ್ಥಾನದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ. ವಂಚನೆಗೆ ಬಳಸಿದ ಲ್ಯಾಪ್‌ಟಾಪ್ ಅನ್ನು ಪೊಲೀಸರು ಪಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಇಂದು ಮಾನ್ಯ ಬೈಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವಿಶೇಷ ತನಿಖಾ ತಂಡದಲ್ಲಿ ಕೊಲ್ಲೂರು ಪೊಲೀಸ್ ಠಾಣೆಯ ಪಿಎಸ್‌ಐ ವಿನಯ ಎಂ. ಕೋರ್ಲಹಳ್ಳಿ, ಭೀಮಶಂಕರ ಸಿನ್ನೂರ ಸೇರಿದಂತೆ ಕೊಲ್ಲೂರು ಠಾಣೆಯ ನಾಗೇಂದ್ರ, ಗಂಗೊಳ್ಳಿ ಠಾಣೆಯ ರಾಘವೇಂದ್ರ ಶೆಟ್ಟಿ ಹಾಗೂ ಕೃಷ್ಣ ದೇವಾಡಿಗ ಇದ್ದರು.





