ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಹಲವು ವರ್ಷಗಳಿಂದ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ, ಆಹಾರ ಮತ್ತು ಮೂಲಸೌಕರ್ಯ ಒದಗಿಸುವ ಒಂದು ಪ್ರಮುಖ ಕೇಂದ್ರವಾಗಿದೆ. ಆದರೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಭವಿಷ್ಯದ ಕನಸುಗಳನ್ನು ಅರಸುವ ಬದಲು, ಆ ಕನಸುಗಳೇ ನಸುಕಿನಲ್ಲಿ ಮುಚ್ಚುತ್ತಿರುವ ಹೃದಯ ವಿದ್ರಾವಕ ಘಟನೆಗಳ ಕೇಂದ್ರವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇತ್ತೀಚಿನ ಎರಡು ಘಟನೆಗಳು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿವೆ. 2023ರಲ್ಲಿ ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ ಅಮೂಲ್ಯ ಎಂಬ ವಿದ್ಯಾರ್ಥಿನಿಯು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವರ್ಷ ಕೂಡ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶಮಿತಾ ಶೆಟ್ಟಿ ಎಂಬ ವಿದ್ಯಾರ್ಥಿನಿ ಓದು, ಕ್ರೀಡೆ, ಹಾಗೂ ಸಾಂಸ್ಕೃತಿಕ ಚಟುವಟಿಕೆ ಎಲ್ಲದರಲ್ಲೂ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾಕೆ, ಕಳೆದ ಜೂನ್ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಇಬ್ಬರೂ ವಿದ್ಯಾರ್ಥಿನಿಯರ ಪೋಷಕರ ಮಾತುಗಳು ಈ ಸಾವಿನ ಹಿಂದಿನ ಅನುಮಾನಗಳನ್ನು ಮತ್ತಷ್ಟು ಗಾಬರಿ ಹುಟ್ಟಿಸಿದೆ.ಚ”ಅವಳು ಆರೋಗ್ಯವಾಗಿದ್ದಳು, ಪ್ರತಿ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದಳು. ಯಾವುದೇ ಚಿಂತೆಯ ಲಕ್ಷಣವಿಲ್ಲದಿದ್ದರೂ ಇಂತಹ ದುರಂತ ಏಕೆ?” ಎಂಬ ಮಾತು ಚಿಂತೆ ಹುಟ್ಟಿಸಿದೆ.
ಈ ಪ್ರಕರಣ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಸಂಘಟನೆಗಳ ಒತ್ತಡದ ಹಿನ್ನೆಲೆಯಲ್ಲಿ ಕೆಲ ಸಿಬ್ಬಂದಿಗಳನ್ನು ಬೇರೆಡೆ ವರ್ಗಾಯಿಸಲಾಗಿದೆ. ಆದರೆ ಸಮಸ್ಯೆಯ ಮೂಲದಲ್ಲಿರುವ ಭಯಾನಕತೆ ಇನ್ನೂ ಹೊರಬಂದಿಲ್ಲ.

ಎಲ್ಲ ಸೌಲಭ್ಯವಿರುವ ಕೊಪ್ಪ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳೆದ 5 ವರ್ಷದಿಂದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಎಂಬ ಪ್ರಕರಣ ದಾಖಲಾಗಿದೆ. 2023ರಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ, ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ ಅಮೂಲ್ಯ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲೆಡೆ ಸುದ್ದಿಯಾಗಿತ್ತು.
ಈ ಕುರಿತು ವಿದ್ಯಾರ್ಥಿನಿಯ ಪೋಷಕರು “ನನ್ನ ಮಗಳು ಅರೋಗ್ಯವಾಗಿದ್ದಳು ಏನು ಸಮಸ್ಯೆ ಇರಲಿಲ್ಲ. ಎಲ್ಲದರಲ್ಲೂ ಮುಂದೆ ಇದ್ದಳು. ಯಾವ ಹುಡುಗರ ಸಹವಾಸ ಕೂಡ ಇರಲಿಲ್ಲ, ಹೇಗೆ ಅವಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇಲ್ಲಿರುವವವರೇ ನನ್ನ ಮಗಳನ್ನು ಸಾಯಿಸಿ, ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ” ಎಂದು ಆರೋಪಿಸಿದ್ದರು. ಈ ವಿಚಾರವಾಗಿ ಸ್ಥಳೀಯ ಸಂಘಟನೆ ಹಾಗೂ ಈದಿನ.ಕಾಮ್ ಮಾಧ್ಯಮದ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಗಮನಕ್ಕೆ ತಂದಾಗ ಆ ವಸತಿ ಶಾಲೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನು ಬೇರೆಡೆ ವರ್ಗಾವಣೆ ಮಾಡಿಸಲಾಗಿತ್ತು.

ಹಾಗೆಯೇ, ಈ ವರ್ಷ ಕೂಡ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶಮಿತಾ ಶೆಟ್ಟಿ ಎಂಬ ವಿದ್ಯಾರ್ಥಿನಿ ಓದು, ಕ್ರೀಡೆ, ಹಾಗೂ ಸಾಂಸ್ಕೃತಿಕ ಚಟುವಟಿಕೆ ಎಲ್ಲದರಲ್ಲೂ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾಕೆ. ಜೂನ್ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಾಗ, ಈ ಹಿಂದೇ ಅಮೂಲ್ಯ ಎಂಬ ಹುಡುಗಿ ಹೇಗೆ ಸಾವನಪ್ಪಿದ್ದಳು ಅದೇ ರೀತಿಯಲ್ಲಿ ಶಮಿತಾ ಶೆಟ್ಟಿಯ ಮೃತದೇಹವಿರುವುದು ಅನುಮಾನ ಹುಟ್ಟಿಸಿದೆ.
“ಶಮಿತಾ ಶೆಟ್ಟಿ ಸಾವನ್ನಪ್ಪುವ ಹಿಂದಿನ ದಿನ ಅಂದರೆ ಜೂನ್ 27ರಂದು ಕ್ರೀಡೆಯಲ್ಲಿ ಭಾಗವಹಿಸಿ ಎಲ್ಲರೊಂದಿಗೆ ಜೊತೆಯಾಗಿ ಚೆನ್ನಾಗಿಯೇ ಇದ್ದಳು. ರಾತ್ರಿ ವೇಳೆಯಲ್ಲಿ ಊಟ ಮುಗಿಸಿ ಎಲ್ಲರೂ ಮಲಗಿದ್ದೆವು. ಚೀರಾಡಿದ ಶಬ್ದ ಕೇಳಿತು. ಪಕ್ಕದಲ್ಲಿದ್ದ ಶಮಿತಾ ಶೆಟ್ಟಿ ಇರಲಿಲ್ಲ. ತಕ್ಷಣ ನಾವು ಓಡಿ ನೋಡಿದಾಗ ಯಾರೋ ಒಬ್ಬರು ಅಲ್ಲಿಂದ ಓಡಿ ಹೋದಂತಾಯಿತು”ಎಂದು ವಿದ್ಯಾರ್ಥಿಯ ಸಹಚರರು ಈದಿನಕ್ಕೆ ತಿಳಿಸಿದರು.

“ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ ಅಂತಹ ಸಮಸ್ಯೆ ಏನಿಲ್ಲ, ಇಲ್ಲಿಯವರೆ ಕೊಂದು ನೇಣು ಹಾಕಿದ್ದಾರೆ” ಹಾಗೆಯೇ, ನನ್ನ ಮೊಮ್ಮಗಳು ಶೌಚಾಲಯಕ್ಕೆ ಹೋಗುವುದಾದರೆ ಅವಳು ಮಲಗುವ ಪಕ್ಕದಲ್ಲಿಯೇ ಶೌಚಾಲಯವಿತ್ತು. 2023ರಲ್ಲಿ ಅಮೂಲ್ಯ ಎಲ್ಲಿ ಸಾವನಪ್ಪಿದ್ದಳು ಆ ಶೌಚಾಲಯದಲ್ಲಿಯೇ, ಅಷ್ಟು ದೂರ ಹೋಗಿ ನನ್ನ ಮೊಮ್ಮಗಳು ಏಕೆ ನೇಣು ಹಾಕಿಕೊಳ್ಳುತ್ತಿದ್ದಳು. ಅದಲ್ಲದೆ ವಸತಿ ಶಾಲೆಯ ಸಿಬ್ಬಂದಿಯವರಿಗೆ ರಾತ್ರಿ 10:30 ಒಳಗೆ ವಿಚಾರ ಗೊತ್ತಾಗಿದೆ. ವಸತಿ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಎಲ್ಲಾ ಪೋಷಕರಿಗೆ ಮಧ್ಯರಾತ್ರಿ 3:30 ಕ್ಕೆ ಶಮಿತಾ ಸಾವಿನ ವಿಚಾರ ತಿಳಿಸಿದ್ದಾರೆ. ಆದರೇ ನಮಗೆ ತಿಳಿಸಿರುವುದು ಜೂನ್ 28ರಂದು ಬೆಳಗ್ಗೆ 6 ಗಂಟೆಗೆ. ಹಾಗೆಯೇ, ಸಾವನ್ನಾಪ್ಪಿದ್ದಾಳೆಂದು ತಿಳಿದರೂ ಕೂಡ ಶಮಿತಾ ತಂದೆಗೆ ನೀವು ಮಾತ್ರ ಬನ್ನಿ. ವಿದ್ಯಾರ್ಥಿನಿಯ ತಾಯಿಯನ್ನು ಕರೆದುಕೊಂಡು ಬರಬೇಡಿ ಎನ್ನುತ್ತಾರೆ. ಆ ದಿನ ನಾವೆಲ್ಲ ಬಂದಾಗ ಅಲ್ಲಿನ ಮುಖ್ಯಸ್ಥರು ಹಾಗೂ ಸಿಬ್ಬಂದಿಯವರನ್ನು ಕೇಳಿದಾಗ ನಮಗೆ ಗೊತ್ತಿಲ್ಲ ಎಂಬ ಉಡಾಫೆ ಮಾತುಗಳನ್ನಾಡುತ್ತಾರೆ” ಎಂದು ಪೋಷಕರು ದೂರಿದ್ದಾರೆ.

“ಒಂದು ದಿನದ ನಂತರ ಮುಖ್ಯಸ್ಥರು ಶಮಿತಾ ತಂದೆಗೆ ಫೋನ್ ಮಾಡಿ ನೀವು ಮಾತ್ರ ಬನ್ನಿ ಎಂದು ಕರೆಸಿಕೊಂಡು ನಿಮ್ಮ ಮಗಳು ಡೇತ್ ನೋಟ್ ಬರೆದಿಟ್ಟಿದ್ದಾಳೆಂದು ಹೇಳಿ ಇದು ಆತ್ಮಹತ್ಯೆ ಎಂದು ಪತ್ರಕ್ಕೆ ಸಹಿ ಮಾಡುವಂತೆ ಬಲವಂತ ಮಾಡಿದ್ದಾರೆ. ಸಾವು ಸಂಭವಿಸಿದ ದಿನ ಏನೂ ಇಲ್ಲ ಎಂದಿದ್ದ ಮುಖ್ಯ ಶಿಕ್ಷಕರು, ಈಗ ಎಲ್ಲಿಂದ ಡೆತ್ ನೋಟ್ ಸೃಷ್ಟಿ ಮಾಡಿದ್ರು. ಶಮಿತಾ ಶಾಲೆಗೆ ತೆಗೆದುಕೊಂಡು ಹೋಗುವ ಬ್ಯಾಗ್ ನೀಲಿಯ ಬಣ್ಣದ್ದು, ಇವರು ತೋರಿಸಿರುವ ಶಾಲೆಯ ಬ್ಯಾಗ್ ಹಸಿರು ಬಣ್ಣದ್ದಾಗಿದೆ. ಈ ಹಿಂದೇ ಅಮೂಲ್ಯ ಸಾವನ್ನಪ್ಪಿದ್ದಾಗ ವಾರ್ಡನ್ ಮತ್ತು ಮುಖ್ಯ ಶಿಕ್ಷಕರನ್ನು ಬೇರೆಡೆ ವರ್ಗಾವಣೆ ಮಾಡಲಾಗಿತ್ತು. ಶಮಿತಾ ಸಾವನ್ನಪ್ಪಿದಾಗ ಅವರೇ ಆ ದಿನವಿರುವುದು ಇದು ಹೇಗೆ ಸಾಧ್ಯ. ಕೊಲೆ ಮಾಡಿ ಅವಳೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದಾರೆ” ಎಂದು ಶಮಿತಾ ಶೆಟ್ಟಿಯ ಕುಟುಂಬದವರು ಆರೋಪಿಸಿದ್ದಾರೆ.

ಸಾರ್ವಜನಿಕರು ಹಾಗೂ ಮಕ್ಕಳ ಪೋಷಕರ ಅಭಿಪ್ರಾಯ ಏನು?
“ನಾವು ದೂರದ ಊರು, ಬೇರೆ ಬೇರೆ ತಾಲೂಕು ಹಾಗೂ ಜಿಲ್ಲೆಗಳಿಂದ ನಮ್ಮ ಮಕ್ಕಳನ್ನು ಓದಲು ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ. ಅದರಲ್ಲೂ ಮಲೆನಾಡಿನಲ್ಲಿ ಓದುವ ಮಕ್ಕಳು ಚೆನ್ನಾಗಿ ಓದುತ್ತಾರೆ, ಇಲ್ಲಿನ ಶಿಕ್ಷಣದ ಆಡಳಿತ ವ್ಯವಸ್ಯೆ ಹಾಗೂ ಶಿಕ್ಷಕರಿಂದ ಉತ್ತಮ ಶಿಕ್ಷಣ ಸಿಗುತ್ತದೆಂದು ನಮ್ಮ ಮಕ್ಕಳನ್ನು ಸೇರಿಸುತ್ತೇವೆ. ಇಂತಹ ಘಟನೆಗಳಾದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಹಾಗೂ ನಮ್ಮ ಮಕ್ಕಳ ಪ್ರಾಣಕ್ಕೆ ಯಾರು ಜವಾಬ್ದಾರರು? ಮಕ್ಕಳ ಓದಿಗೆ ಹಾಗೂ ಸುರಕ್ಷತೆಗೆ ಸೇರಿಸುತ್ತೇವೆ. ಆದರೆ, ಇಲ್ಲಿ ಸರಣಿ ಸಾವಿನಿಂದ ಹಾಸ್ಟೆಲ್ ಸ್ಮಶಾನವಾಗಿದೆ. ನಮ್ಮ ಮಕ್ಕಳನ್ನು ನೋಡಲು ಬಂದರೆ ದೂರದಿಂದ ನೋಡಬೇಕು, ಹುಷಾರಿಲ್ಲ ಎಂದಾಗ ಮಕ್ಕಳನ್ನು ನಮ್ಮ ಜೊತೆ ಕಳಿಸುವುದಿಲ್ಲ. ಹಾಗೆಯೇ, ಹಾಸ್ಟೆಲ್ ಒಳಗೆ ಹೇಗಿದೆ ವ್ಯವಸ್ಥೆ ಚೆನ್ನಾಗಿದೆಯೇ ಎಂದು ನೋಡೋಣವೆಂದರೆ ಒಳಗೆ ಪ್ರವೇಶ ಕೊಡುವುದಿಲ್ಲ. ಮಕ್ಕಳ ಜೊತೆ ಬೇರೆಯಲು ಬಿಡುತ್ತಿರಲಿಲ್ಲ. ಈಗ ಗೊತ್ತಾಗುತ್ತಿದೆ ನಾವು ಹಾಸ್ಟೆಲ್ ಒಳಗೆ ಬಂದರೆ ಮಕ್ಕಳನ್ನು ಮಾತಾಡಿಸಿದರೆ ಇವರ ಬಂಡವಾಳದ ಸತ್ಯ ಎಲ್ಲಿ ಗೊತ್ತಾಗುತ್ತದೆಂದು ಈ ರೀತಿ ನಡೆದುಕೊಳ್ಳುತ್ತಿದ್ದರು ಎಂದು ಈಗ ಅನಿಸುತ್ತಿದೆ” ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪೋಷಕರು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದದ್ದು ಕಂಡು ಬಂತು.

ವಿದ್ಯಾರ್ಥಿನಿಯ ಸಾವಿನ ಕುರಿತು ಉನ್ನತ ತನಿಖೆಗೆ ಒತ್ತಾಯ
ಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಒಂದು ವರ್ಷದ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಶಾಲಾ ಆಡಳಿತ ಮತ್ತು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಸರಣಿ ಸಾವುಗಳಿಗೆ ಸಮಗ್ರ ತನಿಖೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಎಲ್ಲೂ ಕೆಲಸ ಸಿಗದಂತೆ ಅಮಾನತು ಮಾಡಿಸಬೇಕೆಂದು ಪ್ರಗತಿಪರ ಸಂಘಟನೆ ಒಕ್ಕೂಟದಿಂದ ಸೋಮವಾರ ಬೃಹತ್ ಸಂಖ್ಯೆಯಲ್ಲಿ ಜನ ಸೇರಿ ಕೊಪ್ಪ ಪಟ್ಟಣದಲ್ಲಿ ಎರಡು ಕಿಲೋಮೀಟರ್ ವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ವಸತಿ ಶಾಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ: ಕರ್ನಾಟಕ ವಿದ್ಯಾರ್ಥಿ ಸಂಘಟನೆ
“ಪ್ರತಿ ಮೊರಾರ್ಜಿ ವಸತಿ ಶಾಲೆಗಳಲ್ಲಿ ಸಿ ಸಿ ಟಿವಿ, ಕ್ಯಾಮರಗಳು ಕಡ್ಡಾಯವಾಗಿರುತ್ತದೆ. ಆದರೇ, ಇಲ್ಲಿ ಎಲ್ಲಿ ನೋಡಿದರೂ ಒಂದು ಕ್ಯಾಮರಗಳು ಕಾಣುವುದಿಲ್ಲ ಯಾಕೆ?” ಎಂದು ಕೇಳಿರುವ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮುಖಂಡರು, “ಈ ಹಿಂದೆ ಅಮೂಲ್ಯ ಎಂಬ ವಿದ್ಯಾರ್ಥಿನಿ ಸಾವನಪ್ಪಿದ ವೇಳೆ ಕೇಳಿದಾಗ ಸಿ ಸಿ ಟಿವಿ ಹಾಗೂ ಕ್ಯಾಮರಗಳು ಹಾಳಾಗಿವೆ ಎಂದು ಹೇಳಿದ್ದರು. ನಂತರ ಸಾರ್ವಜನಿಕರು ಹಾಗೂ ಮಾಧ್ಯಮದವರು ಕೇಳಿದಾಗ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳುತ್ತೇವೆ, ಹೊಸ ಸಿ ಸಿ ಟಿವಿ, ಕ್ಯಾಮರಗಳು ಹಾಕಿಸುತ್ತೇವೆ ಎಂದು ಹೇಳಿ ಎರಡು ವರ್ಷ ಕಳೆದಿದೆ. ಆದರೂ ವ್ಯವಸ್ಥೆ ಆಗಲಿಲ್ಲ. ಶಮಿತಾ ಶೆಟ್ಟಿ ಸಾವನಪ್ಪಿದಾಗ ಮೊದಲು ಹೇಳಿದ ಮಾತನ್ನೇ ಸಿಸಿ ಟಿವಿ, ಕ್ಯಾಮರಗಳು ಹಾಳಾಗಿವೆಂದು ಉಡಾಫೆ ಉತ್ತರ ನೀಡುತ್ತಾರೆ. ಇವರು ಏಕಿದ್ದಾರೆ, ಜವಾಬ್ದಾರಿ ಏನು? ಇಂತಹ ಶಿಕ್ಷಕರು, ಮುಖ್ಯಸ್ಥರು, ಸಿಬ್ಬಂದಿಗಳನ್ನು ಏಕೆ ಇಲ್ಲಿಯವರೆಗೂ ಸರ್ಕಾರದ ಸಂಬಳ ಕೊಟ್ಟು ಇಟ್ಟುಕೊಂಡಿದೆ. ಇನ್ನು ಇಂತಹ ಘಟನೆಗಳು ವರ್ಷಕ್ಕೊಂದು ಆಗುವುದಕ್ಕೆ ಷಡ್ಯಂತ್ರ ಮಾಡುತ್ತಿದ್ದಾರೆಯೇ?” ಈದಿನ. ಕಾಮ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

“ಬಾಲಕಿಯ ಸಾವಿನ ಸಮಗ್ರ ತನಿಖೆಯಾಗಬೇಕು ಎನ್ನುವ ಉದ್ದೇಶದಿಂದಲೇ ಶಿವಮೊಗ್ಗ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ವರದಿ ಬಂದ ಕೂಡಲೇ, ಪ್ರಾಮಾಣಿಕ ತನಿಖೆ ಮಾಡಿಸಲಾಗುವುದು. ವಸತಿ ಶಾಲೆಯ ಸಿಬ್ಬಂದಿಯವರನ್ನು ವರ್ಗಾವಣೆ ಮಾಡಿಸಲಾಗುವುದು, ತನಿಖೆಯಲ್ಲಿ ವಸತಿ ಸಿಬ್ಬಂದಿಯವರೇ ಮುಖ್ಯ ಕಾರಣ ಎಂದು ತಿಳಿದಾಗ ಈ ಹುದ್ದೆಯಿಂದ ಅಮಾನತು ಮಾಡಲಾಗುತ್ತದೆ. ವಸತಿ ಶಾಲೆಗೆ ಬಣ್ಣ ಬಳಿಸಿ, ಶಾಲೆ ಹಾಗೂ ವಸತಿ ನಿಲಯದಲ್ಲಿರುವ ಕುಂದು ಕೊರತೆ ಬಗೆಹರಿಸಿ, ಈ ಘಟನೆ ಪುನಃ ಮರುಕಳಿಸದಂತೆ ಸಂಘಟನಾ ಮುಖಂಡರನ್ನೊಳಗೊಂಡು ಸಮಿತಿ ರಚಿಸಲಾಗುತ್ತದೆ. ಹಾಗೆಯೇ, ಪೋಷಕರನ್ನು ಕರೆಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಸಲಾಗುವುದು” ಎಂದು ತುಂಬಿದ ಪ್ರತಿಭಟನಾ ಸ್ಥಳದಲ್ಲಿ ಸಾರ್ವಜನಿಕರ ಮುಂದೆ ಶೃಂಗೇರಿ ಕ್ಷೇತ್ರ ಶಾಸಕರಾದ ಟಿ ಡಿ ರಾಜೇಗೌಡ ಭರವಸೆ ನೀಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿಯ ಬಂಧನ
ಇಂತಹ ಘಟನೆಗಳು ಇನ್ನೂ ಮುಂದೆ ಆಗದಂತೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರದಿಂದ ನೇಮಕಗೊಂಡಿರುವಂತಹ ಅಧಿಕಾರಿ ಹಾಗೂ ಸಿಬ್ಬಂದಿ ಕ್ರಮ ವಹಿಸಬೇಕಾಗಿದೆ.





