ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆಯುವುದು ಕಂಡು ಬಂದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ ಇಟ್ನಾಳ ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾರ್ಕೋ ಕೋ-ಆಡಿನೇಷನ್ ಸೆಂಟರ್ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, “ಮಾದಕ ವಸ್ತುಗಳ ಉತ್ಪನ್ನ, ಸಾಗಾಟ, ಸಂಗ್ರಹ ಹಾಗೂ ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಡಾಬಾ, ಹೋಟೆಲ್, ರೆಸಾರ್ಟ್ಗಳಿಗೆ ಗೌಪ್ಯವಾಗಿ ಭೇಟಿ ನೀಡಿ, ಹಾಗೇನಾದರೂ ಮಾಧಕ ವಸ್ತುಗಳ ಸೇವನೆ, ಮಾರಾಟ ಕಂಡು ಬಂದರೆ ಅವುಗಳ ಮೇಲೆ ಕೇಸು ದಾಖಲಿಸಬೇಕು” ಎಂದರು.
“ಜನರು ದುಶ್ಚಟಗಳಿಂದ ದೂರ ಇರಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳಲ್ಲಿ ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು” ಎಂದರು.
ಇದನ್ನೂ ಓದಿ: ಕೊಪ್ಪಳ | 17ರ ಬಾಲಕಿ ಮೇಲೆ ಗ್ರಾಪಂ ನೌಕರನಿಂದ ಅತ್ಯಾಚಾರ; ಪೋಕ್ಸೊ ದಾಖಲು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ ಮಾತನಾಡಿ, “ಆಸ್ಪತ್ರೆಗಳಲ್ಲಿ ಯಾವ ತರಹದ ಪ್ರಕರಣಗಳು ಬರುತ್ತವೆ ಎನ್ನುವುದರ ಕುರಿತು ವರದಿ ನೀಡಬೇಕು. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದರೆ ತಕ್ಷಣ ಕ್ರಮ ವಹಿಸಬೇಕು” ಎಂದು ಔಷಧ ನಿಯಂತ್ರಣಾಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನಿರ್ದೆಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಟಿ ಲಿಂಗರಾಜು, ವಾರ್ತಾ ಇಲಾಖೆ ಸಹಾಯಕ ನಿರ್ದೆಶಕ ಸುರೇಶ ಜಿ ಹಾಗೂ ಇತರರು ಉಪಸ್ಥಿತರಿದ್ದರು.





