ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರ ಹುಲಗಿಯಲ್ಲಿ ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುತ್ತಿರುವ ಕಾರ್ಯಾಚರಣೆಯನ್ನು ನಿಲ್ಲಿಸಬೇಕು. ಕ್ಷೇತ್ರದಲ್ಲಿ ʼಬೀದಿಬದಿ ವ್ಯಾಪಾರಸ್ಥರ ಪಾರಂಪರಿಕ ಮಾರುಕಟ್ಟೆʼ ಎಂದು ಘೋಷಿಸಿ ಅಭಿವೃದ್ಧಿ ಪಡಿಸಬೇಕು ಎಂದು ಎಐಯುಟಿಯುಸಿ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಬೀದಿಬದಿ ವ್ಯಾಪಾರಸ್ಥರ ಸಂಘ ಒತ್ತಾಯಿಸಿದೆ.
ಇತ್ತಿಚೆಗೆ ಸೀಗೆಹುಣ್ಣಿಮೆಯಿಂದ ಹುಲಗಿಯಲ್ಲಿ ನೂಕುನುಗ್ಗಲು ಗದ್ದಲ ಆಗಿದ್ದರಿಂದ ಜಿಲ್ಲಾಡಳಿತ ಅಲ್ಲಿಯ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಕ್ರಮ ಖಂಡಿಸಿ ಎಐಯುಟಿಯುಸಿ ಹಾಗೂ ಬೀದಿಬದಿ ವ್ಯಾಪಾರಸ್ಥರ ಸಂಘವು ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ಅವರಿಗೆ ಮನವಿ ಸಲ್ಲಿಸಿತು.
ರಾಜ್ಯ ಸಂಚಾಲಕ ಮಂಜುನಾಥ್ ಕೈದಾಳ ಮಾತನಾಡಿ, “ಪ್ರಸಿದ್ಧ ಹುಲಿಗಿ ಕ್ಷೇತ್ರ ಸುಮಾರು 800 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿದ್ದು, ವ್ಯಾಪಾರಸ್ಥ ಕುಟುಂಬಗಳು 50ಕ್ಕೂ ಹೆಚ್ಚು ವರ್ಷಗಳಿಂದ ಇದೇ ಸ್ಥಳದಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ದೇವಾಲಯಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಹೂವು, ಹಣ್ಣು, ಪೂಜಾ ಸಾಮಗ್ರಿ, ನೀರು, ತಿಂಡಿ ಹಾಗೂ ಇತರೆ ವಸ್ತುಗಳನ್ನು ಕಡಿಮೆ ದರದಲ್ಲಿ ಪೂರೈಸುವ ಮೂಲಕ ತಮ್ಮ ಜೀವನೋಪಾಯ ನಡೆಸುತ್ತಿದ್ದಾರೆ. ವ್ಯಾಪಾರದಿಂದ ಸ್ಥಳೀಯ ಆರ್ಥಿಕತೆ, ಮಹಿಳಾ ಉದ್ಯೋಗ ಮತ್ತು ಸಣ್ಣ ವ್ಯಾಪಾರಿಗಳಿಗೂ ಕೂಡ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ” ಎಂದು ಹೇಳಿದರು.
“ಇತ್ತೀಚೆಗೆ ಸೀಗೆ ಹುಣ್ಣಿಮೆ ದಿನದಂದು, ಸರಿಯಾದ ಟ್ರಾಫಿಕ್ ನಿರ್ವಹಣೆ ಮಾಡದೆ, ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದ ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆ ಉಂಟಾಯಿತು. ಆದರೆ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಆಡಳಿತವು, ಅದರ ಹೊಣೆಗಾರಿಕೆಯನ್ನು ಬಡ ಬೀದಿಬದಿ ವ್ಯಾಪಾರಸ್ಥರ ಮೇಲೆ ಹಾಕಿ, ಯಾವುದೇ ಪೂರ್ವ ಸೂಚನೆ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಜೆಸಿಬಿ ಮೂಲಕ ದೌರ್ಜನ್ಯ ರೀತಿಯ ತೆರವು ಕಾರ್ಯಾಚರಣೆ ನಡೆಸಿದೆ. ಈ ಕ್ರಮವು ಮಾನವ ಹಕ್ಕುಗಳಿಗೆ ಹಾಗೂ ಕಾನೂನಾತ್ಮಕ ತತ್ವಗಳಿಗೆ ವಿರುದ್ಧವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ತೆರವು ಕಾರ್ಯಾಚರಣೆ ವೇಳೆ ವ್ಯಾಪಾರ ವಸ್ತುಗಳು, ಗುಡಿಸಲುಗಳು ಮತ್ತು ವಾಹನಗಳು ಹಾನಿಗೊಂಡಿದ್ದು, ಅನೇಕ ವ್ಯಾಪಾರಸ್ಥರು ಬದಕು ಕಟ್ಟಿಕೊಳ್ಳಲು ನಿರ್ಮಿಸಿಕೊಂಡಿದ್ದ ವ್ಯಾಪಾರದ ಗೂಡನ್ನೂ ನೆಲಸಮ ಮಾಡಿ ಅವರ ಆರ್ಥಿಕ ಬದುಕಿಗೆ ನಷ್ಟ ಉಂಟುಮಾಡಿರುವ ಜಿಲ್ಲಾಡಳಿತ ಜೀವನೋಪಾಯಕ್ಕೆಂದು ಇದ್ದ ಒಂದು ಕೆಲಸಕ್ಕೆ ಪೆಟ್ಟುಕೊಟ್ಟು ಮಾನಸಿಕ ಆಘಾತ ಅನುಭವಿಸುವಂತೆ ಮಾಡಿದೆ” ಎಂದು ಆರೋಪಿಸಿದರು.
“ಈ ವ್ಯಾಪಾರಸ್ಥರು ಅತ್ಯಂತ ಬಡತನದ ಕುಟುಂಬಗಳಿಗೆ ಸೇರಿದವರು. ಪ್ರತಿ ತಿಂಗಳು ವ್ಯಾಪಾರದಿಂದ ಬಂದ ಹಣದಲ್ಲಿ ಜೀವನ ನಡೆಸುತ್ತ ಮೈಕ್ರೋ ಫೈನಾನ್ಸ್ ಸಾಲಗಳ ಕಂತುಗಳನ್ನು ಕಟ್ಟಲು, ಮಕ್ಕಳ ಶಿಕ್ಷಣಕ್ಕೆ ಹಾಗೂ ಕುಟುಂಬದ ಅಗತ್ಯಗಳಿಗೆ ಬಳಸುತ್ತಿದ್ದರು. ತೆರವು ಕ್ರಮದಿಂದ ವ್ಯಾಪಾರ ಸ್ಥಗಿತಗೊಂಡಿದೆ. ಈಗ ಪ್ರತಿದಿನದ ಆದಾಯ ನಷ್ಟವಾಗಿ ತಮ್ಮ ಜೀವನವೇ ಅತಂತ್ರ ಸ್ಥಿತಿಯಲ್ಲಿದೆ. ಅನೇಕ ವ್ಯಾಪಾರಸ್ಥರು ಮೈಕ್ರೋ ಫೈನಾನ್ಸ್ ಸಾಲಗಳ ಕಂತುಗಳನ್ನು ಕಟ್ಟಲಾಗದೆ ಆರ್ಥಿಕ ಸಂಕಷ್ಟ ಮತ್ತು ಆತಂಕದಲ್ಲಿ ಮುಳುಗಿದ್ದಾರೆ” ಎಂದರು.
“ಹುಲಿಗಿ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು. ಹಾಗೂ ಯಾರು ನಷ್ಟ ಹೊಂದಿದ್ದಾರೆ ಅವರಿಗೆ ಪರಿಹಾರ ಒದಗಿಸಬೇಕು. ಎಲ್ಲ ಬೀದಿಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ಒದಗಿಸಿ ಅವರ ವೃತ್ತಿ ಮತ್ತು ವ್ಯಾಪಾರವನ್ನು ಗೌರವಿಸಿ ಘನತೆಯಿಂದ ಬದುಕುವಂತೆ ಆರ್ಥಿಕ ಸೌಲಭ್ಯ ಒದಗಿಸಬೇಕು” ಎಂದು ಆಗ್ರಹಿಸಿದರು.
ಕಾರ್ಮಿಕ ಮುಖಂಡ ಶರಣು ಗಡ್ಡಿ ಮಾತನಾಡಿ, “ಹುಲಿಗಿ ಕ್ಷೇತ್ರವು ಕೊಪ್ಪಳ ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿ ಮಂಗಳವಾರ, ಶುಕ್ರವಾರ, ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನಗಳಂದು ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇತ್ತೀಚಿನ ಸೀಗೆ ಹುಣ್ಣಿಮೆಯಂದು ಸುಮಾರು ಎಂಟು ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಇಂತಹ ದೊಡ್ಡ ಜನಸ್ತೋಮ ನಿರೀಕ್ಷಿತವಾಗಿದ್ದರೂ ಯಾವುದೇ ಭದ್ರತೆ, ಬ್ಯಾರಿಕೇಡ್ ಅಥವಾ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಜಿಲ್ಲಾಡಳಿತದ ಸ್ಪಷ್ಟ ನಿರ್ಲಕ್ಷ್ಯವಾಗಿರುವುದು ಗೊತ್ತಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
“ಈ ನಿರ್ಲಕ್ಷ್ಯದಿಂದ ಉಂಟಾದ ಟ್ರ್ಯಾಫಿಕ್ ಸಮಸ್ಯೆಯ ಹೊಣೆಗಾರಿಕೆಯನ್ನು ಮುಚ್ಚಿಹಾಕಲು ಬಡ ಬೀದಿಬದಿ ವ್ಯಾಪಾರಸ್ಥರ ಮೇಲೆ ಕ್ರಮ ಕೈಗೊಳ್ಳುವುದು ಅಮಾನವೀಯ ಮತ್ತು ಅನ್ಯಾಯಕರ ಕ್ರಮವಾಗಿದೆ. ಬೀದಿಬದಿ ವ್ಯಾಪಾರಸ್ಥರಿಗಿರುವ ಕಾನೂನು 2014 ಪ್ರಕಾರ ಬೀದಿಬದಿ ವ್ಯಾಪಾರಿಗಳಿಗೆ ಕಾನೂನಾತ್ಮಕ ರಕ್ಷಣೆಯಿದೆ. ಈ ಕಾನೂನಿನ 3, 18 ಮತ್ತು 21ನೇ ವಿಧಿಗಳ ಪ್ರಕಾರ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಪ್ರಮಾಣಪತ್ರ ನೀಡುವುದು, ವ್ಯಾಪಾರ ಪ್ರದೇಶಗಳನ್ನು ಗುರುತಿಸುವುದು ಹಾಗೂ ದೀರ್ಘಕಾಲದಿಂದ ವ್ಯಾಪಾರ ಮಾಡುತ್ತಿರುವವರನ್ನು ತೆರವುಗೊಳಿಸದೆ ರಕ್ಷಿಸಿ ಹಾಗೂ ಅಭಿವೃದ್ಧಿಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂಬುದನ್ನು 21ನೇ ವಿಧಿ ಸ್ಪಷ್ಟವಾಗಿ ಹೇಳುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ತಾಪುರ | ಪಥಸಂಚಲನಕ್ಕೆ ಅನುಮತಿ ಕೋರಿ 12 ಸಂಘಟನೆಗಳು ಮನವಿ: ಶಾಂತಿಸಭೆ ನಡೆಸುವಂತೆ ಹೈಕೋರ್ಟ್ ನಿರ್ದೇಶನ
ಸಂಘದ ಸಂಘಟನಾ ಕಾರ್ಯದರ್ಶಿ ಮಂಜುಳಾ ಮಾತನಾಡಿ, “ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಅಥವಾ ಸಮಾಲೋಚನೆ ನಡೆಸದೇ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕ್ರಮವು ಅನ್ಯಾಯ, ಅಮಾನವೀಯ ಮತ್ತು ಕಾನೂನಾತ್ಮಕ ಉಲ್ಲಂಘನೆಯಾಗಿದೆ. ಕೂಡಲೇ ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಒತ್ತಾಯಿಸಿದರು.
ಸಂಘದ ಮುಖಂಡರುಗಳಾದ ಕೌಶಲ್ಯ ದೊಡ್ಡ ಗೌಡರ್, ರಾಜ್ಯ ಉಪಾಧ್ಯಕ್ಷ ಕೃಷ್ಣ ಮೂರ್ತಿ, ಎಐಡಿವೈಒ ಮುಖಂಡರಾದ ಅನಿಲ್, ಅಂಬರೀಶ್, ಶಿವಪುತ್ರಪ್ಪ, ಭಾಗ್ಯಮ್ಮ, ಯಮನೂರಪ್ಪ, ಹುಲಿಗೆಮ್ಮ, ರಾಘವೇಂದ್ರ ಶಿವಪ್ಪ, ನೇತ್ರಾವತಿ ಪಾರ್ವತಿ ಹಾಗೂ ವ್ಯಾಪಾರಿಗಳು ಇದ್ದರು.





