ಕೊಪ್ಪಳ ನಗರದ ಅಶೋಕ್ ಸರ್ಕಲ್ ಪ್ರದೇಶದಲ್ಲಿ 3 ತಿಂಗಳ ಮಗುವಿನೊಂದಿಗೆ ಭಿಕ್ಷಾಟನೆ ಮಾಡಲಾಗುತ್ತಿದ್ದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಉತ್ತರ ಭಾರತದಿಂದ ಕೊಪ್ಪಳ ಗವಿಮಠ ಜಾತ್ರೆಯ ಪ್ರಯುಕ್ತ ಆಗಮಿಸಿದ್ದ ಲಕ್ಷ್ಮಿ(24) ಹಾಗೂ ಅರ್ಜುನ್(26) ದಂಪತಿ ಅಶೋಕ್ ಸರ್ಕಲ್ ಬಳಿ ವಾಸ್ತವ್ಯ ಹೂಡಿದ್ದರು. ತಂದೆ ಪ್ಲಾಸ್ಟಿಕ್ ಆಟಿಕೆ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದು, ತಾಯಿ ಮೂರು ತಿಂಗಳ ಗಂಡು ಮಗುವಿನೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು.
ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಪ್ರತಿನಿಧಿ ಸುಭಾನ್ ಸಾಬ್ ನೀರಲಗಿ ಇದನ್ನು ಗಮನಿಸಿದ್ದು, ಮಕ್ಕಳ ಸಹಾಯವಾಣಿ 1098ಕ್ಕೆ ಮಾಹಿತಿ ನೀಡಿದ್ದರು. ಬಳಿಕ ಮಾಹಿತಿ ಆಧಾರದ ಮೇಲೆ ಮಕ್ಕಳ ರಕ್ಷಣಾ ಘಟಕದ ಮೂಲಕ 112ಕ್ಕೆ ದೂರು ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು, ʼಮಗುವಿನೊಂದಿಗೆ ಭಿಕ್ಷಾಟನೆ ಮಾಡುವುದು ಕಾನೂನುಬಾಹಿರ ಹಾಗೂ ಮಕ್ಕಳ ಹಕ್ಕುಗಳಿಗೆ ವಿರುದ್ಧವಾಗಿದೆʼ ಎಂದು ಪೋಷಕರಿಗೆ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಮರುಕಳಿಸಬಾರದೆಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿನ್ನಸಂದ್ರದಲ್ಲಿ ಉಚಿತ ಸಾಮೂಹಿಕ ವಿವಾಹಗಳು
ಪೊಲೀಸರ ಎಚ್ಚರಿಕೆಯನ್ನು ಸ್ವೀಕರಿಸಿದ ಪೋಷಕರು, ಮುಂದಿನ ದಿನಗಳಲ್ಲಿ ಮಗುವಿನೊಂದಿಗೆ ಭಿಕ್ಷಾಟನೆ ಮಾಡದಿರುವುದಾಗಿ ಭರವಸೆ ನೀಡಿದ್ದಾರೆ.
ತಕ್ಷಣದ ಕ್ರಮದಿಂದ ಮಗುವಿನ ಸುರಕ್ಷತೆ ಖಚಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





