ಮಕ್ಕಳ ಹಕ್ಕುಗಳ ರಕ್ಷಣೆಗೆ ಸರ್ಕಾರವು ಗ್ರಾಮೀಣ ಮಟ್ಟದಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಹಕ್ಕುಗಳ ಗ್ರಾಮಸಭೆ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೆ ತಂದಿದ್ದರೂ ಕೊಪ್ಪಳ ಜಿಲ್ಲೆಯ ಯಾವುದೇ ಗ್ರಾಮ ಪಂಚಾಯತಿಲ್ಲೂ ‘ಮಕ್ಕಳ ಹಕ್ಕುಗಳ ಗ್ರಾಮಸಭೆʼ ನಡೆಯುತ್ತಿಲ್ಲ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಮ ಕೇಂದ್ರದ ಜಿಲ್ಲಾ ಘಟಕ ಪ್ರತಿನಿಧಿ ಸುಭಾನ್ ಸಾಬ್ ಆರೋಪಿಸಿದ್ದಾರೆ.
“ಮಕ್ಕಳ ಶಿಕ್ಷಣ, ಆರೋಗ್ಯ, ಭದ್ರತೆ, ಪೌಷ್ಟಿಕ ಆಹಾರ ಹಾಗೂ ಕಾನೂನು ರಕ್ಷಣೆಯ ಮೂಲಭೂತ ಹಕ್ಕುಗಳು ತಲುಪಬೇಕು ಎಂಬ ಉದ್ದೇಶದಿಂದ ಈ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆಗಳು ಅತ್ಯಂತ ಮಹತ್ವದ್ದಾಗಿವೆ. ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಅನೇಕ ಹಕ್ಕುಗಳಿಂದ ವಂಚಿತರಾಗಿರುವುದು ಗೊತ್ತಿರುವ ಸಂಗತಿ. ವಿಶೇಷವಾಗಿ ಶಾಲೆ ಬಿಟ್ಟ ಮಕ್ಕಳ ಪ್ರಮಾಣದ ಏರಿಕೆ, ಬಾಲ್ಯವಿವಾಹ ಪ್ರಕರಣಗಳ ಹೆಚ್ಚಳ, ಬಾಲಗರ್ಭಿಣಿಯರ ಸಂಖ್ಯೆ ಆತಂಕಕಾರಿ ಮಟ್ಟಕ್ಕೆ ಏರಿಕೆಯಂತಹ ಗಂಭೀರ ಅಂಶಗಳು ದಿನನಿತ್ಯ ಪತ್ರಿಕೆ ಮಾಧ್ಯಮಗಳಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಅತ್ಯವಶ್ಯಕವಾಗಿದೆ” ಎಂದು ಹೇಳಿದರು.
“ಕೊಪ್ಪಳ ಜಿಲ್ಲೆಯ ಕೆಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಲ್ಲಿ ‘ಮಕ್ಕಳ ಹಕ್ಕುಗಳ ರಕ್ಷಣೆ’ ಗ್ರಾಮಸಭೆ ನಡೆಸುತ್ತಿಲ್ಲ ಹಾಗೂ ಈ ಕುರಿತು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮೌಖಿಕವಾಗಿ ಮನವಿ ಮೂಲಕ ತಿಳಿಸಿದರೂ ಸ್ಪಂದಿಸುತ್ತಿಲ್ಲ, ನಮ್ಮ ಮನವಿಯನ್ನೂ ಸ್ವೀಕರಿಸುತ್ತಿಲ್ಲ. ಅಲ್ಲದೆ ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವುದು ಕೆಸಿಆರ್‌ಒಗೆ ಸ್ಪಷ್ಟವಾದ ಮಾಹಿತಿ ಲಭಿಸಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ‘ನ್ಯಾಯ’ ಪ್ರತಿಯೊಬ್ಬ ನಾಗರಿಕನ ಹಕ್ಕು: ಡಾ. ರಂಗಸ್ವಾಮಿ ಡಿ
“ಶಿಕ್ಷಣ ಇಲಾಖೆಯ ‘ಶಾಲಾ ವೇಳೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು’ ಎಂಬ ಪತ್ರದ ಉಲ್ಲೇಖವನ್ನು ತಪ್ಪು ಅರ್ಥೈಸಿ, ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳನ್ನು ನಡೆಸುವುದೇ ತಪ್ಪು ಎಂಬಂತೆ ಆಡಳಿತದ ಮಟ್ಟದಲ್ಲಿ ಅಸಡ್ಡೆ ಮನೋಭಾವ ಕಂಡುಬರುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಮಕ್ಕಳ ಹಕ್ಕುಗಳ ಪ್ರಶ್ನೆ ಬರಿ ಕಾಗದದ ಕೆಲಸವಲ್ಲ. ಜಿಲ್ಲಾ ಮಟ್ಟದಲ್ಲಿ ಉಳಿಸುವ ಜಿಲ್ಲಾ ಆಡಳಿತದ ಸಾಮಾಜಿಕ ಹೊಣೆಗಾರಿಕೆ ಆಗಿರುವುದರಿಂದ ಸರ್ಕಾರ, ಆರ್‌ಡಿಪಿಆರ್ ಇಲಾಖೆ, ಜಿಲ್ಲಾ ಪಂಚಾಯತ್, ಮಕ್ಕಳ ರಕ್ಷಣಾ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲೆಯ ಎಲ್ಲ ಪಂಚಾಯಿತಿಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳನ್ನು ಕೂಡಲೇ ಕಡ್ಡಾಯವಾಗಿ ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.





