ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣಕ್ಕೆ ಹೊಂದಿಕೊಂಡಿರುವ ತ್ರಿವೇಣಿ ಸಂಗಮ ಎಂದು ಹೆಸರಾಗಿರುವ ಹಳ್ಳಕ್ಕೆ ಕೃಷ್ಣ ಭಾಗ್ಯ ಜಲ ನಿಗಮದಿಂದ ದನಕರುಗಳಿಗೆ ಕುಡಿಯಲು ನೀರು, ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ನೀರು ಹರಿಸುತ್ತಿದ್ದು, ಈ ಹಳ್ಳವನ್ನು ಸ್ವಚ್ಚಗೊಳಿಸಲು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಕನಕಗಿರಿಯ ಕೇಂದ್ರದಲ್ಲಿರುವ ದೊಡ್ಡ ಹಳ್ಳವನ್ನು ಸ್ವಚ್ಚಗೊಳಿಸಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮನವಿ ಸಲ್ಲಿಸಿದೆ.
ಹಳ್ಳಕ್ಕೆ ಪಟ್ಟಣದ ಚರಂಡಿಗಳಿಂದ ನೀರು ಹರಿಸುತ್ತಿರುವುದಲ್ಲದೇ, ಜನರು ತ್ಯಾಜ್ಯ ಹಾಕಿದ ಪರಿಣಾಮ ಹಳ್ಳವು ಕಸ ಹಾಗೂ ದುರ್ವಾಸನೆಯಿಂದ ಕೂಡಿರುತ್ತದೆ. ಅಲ್ಲದೆ ಐತಿಹಾಸಿಕ ಮತ್ತು ಪೌರಾಣಿಕವಾಗಿ ಹಿನ್ನಲೆ ಹೊಂದಿರುವ ಪಟ್ಟಣದ ಶ್ರೀ ಕನಕಾಚಲ ದೇವಸ್ಥಾನದಕ್ಕೆ ಹೊಂದಿಕೊಂಡಿರುವುದರಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನಾನುಕೂಲವಾಗಿರುತ್ತದೆ.
ಹಳ್ಳದಲ್ಲಿನ ಚರಂಡಿ ನೀರು ಮತ್ತು ತ್ಯಾಜ್ಯ ತೆಗೆಸಿ ಹಳ್ಳವನ್ನು ಸ್ವಚ್ಚಗೊಳಿಸಿ, ಶ್ರೀ ಮಲ್ಲಯ್ಯ ತಾತಾ ದೇವಸ್ಥಾನದಿಂದ ಕೆಇಬಿ ಹಿಂದೆ ಇರುವ ಚೆಕ್ ಡ್ಯಾಂನವರೆಗೆ ಚರಂಡಿ ಕಾಲುವೆ ನಿರ್ಮಿಸಿ, ಪಟ್ಟಣದ ಚರಂಡಿ ನೀರನ್ನು ಹರಿಸಿದರೆ, ಹಳ್ಳಕ್ಕೆ ಹರಿವ ಕಲುಷಿತ ಚರಂಡಿ ನೀರನ್ನು ತಪ್ಪಿಸಿದಂತಾಗುತ್ತದೆ. ಅಲ್ಲದೇ ಹಳ್ಳದ & ಕೊಳವೆ ಬಾವಿಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸಿದಂತಾಗುತ್ತದೆ. ದನಕರುಗಳಿಗೂ ಇದರಿಂದ ಎಲ್ಲಾಕಾಲದಲ್ಲೂ ನೀರು ಸಿಗಲು ಅನುಕೂಲವಾಗುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ನಾನ ಮಾಡಲು ಅನುಕೂಲವಾಗುತ್ತದೆ. ಕಾರಣ ಈ ಕೂಡಲೇ ಹಳ್ಳವನ್ನು ಸ್ವಚ್ಚಗೊಳಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕೊಪ್ಪಳ | 62 ದಿನಗಳ ಕಾಲ 1,550 ಕಿ.ಮೀ. ಏಕಾಂಗಿ ಪಾದಯಾತ್ರೆ ನಡೆಸಿದ ಹನುಮೇಶ
ಈ ವೇಳೆ ಪಾಮಣ್ಣ ಅರಳಿಗನೂರು, ಲಿಂಗಪ್ಪ ಪೂಜಾರ್, ನಾಗೇಶ್ ಬಡಿಗೇರ್, ಖಾದರ್ ಭಾಷಾ ಗುಡಿಯಹಿದಲು, ಹೊನ್ನೂರಸಾಬ್ ಬಿಡಿ, ವೆಂಕೋಬ ಬೋವಿ, ಬಸವರಾಜ್ ಕಂಪ್ಲಿ, ಚಿದಾನಂದ ಭಜಂತ್ರಿ, ಸಣ್ಣದುರುಗಪ್ಪ ಗೋರಳಕೇರಿ ಹಾಗೂ ಇತರರು ಉಪಸ್ಥಿತರಿದ್ದರು.





