ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಂತೆ ಶೇ. 1ರಷ್ಟು ಒಳಮೀಸಲಾತಿಯನ್ನು ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ, ಅತಿಸೂಕ್ಷ್ಮ ಬುಡಕಟ್ಟು ಆದಿವಾಸಿ ಸಮುದಾಯಗಳಿಗೆ ಒದಗಿಸಬೆಕು ಎಂದು ಕರ್ನಾಟಕ ರಾಜ್ಯ ಅಲೆಮಾರಿ ಜನಾಂಗಗಳು ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದವು.
ಕೊಪ್ಪಳ ನಗರ ಅಶೋಕ ವೃತ್ತದಿಂದ ಜಿಲ್ಲಾಡಳಿತದವರೆಗೂ 30ಕ್ಕೂ ಹೆಚ್ಚು ಅಲೆಮಾರಿ, ಅರೆಅಲೆಮಾರಿ ಹಾಗೂ ಬುಡಕಟ್ಟು ಸಮುದಾಯಗಳ ಜನರು ತಮ್ಮ ವಿವಿಧ ಸಾಂಸ್ಕೃತಿಕ ವೇಷ-ಭೂಷಣ ಧರಿಸಿ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ವರದಿಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿ ಸರಕಾರಕ್ಕೆ ಜಿಲ್ಲಾಧಿಕಾರಿ ಸುರೇಶ ಹಿಟ್ನಾಳ ಅವರ ಮೂಲಕ ಮನವಿ ಸಲ್ಲಿಸಿದರು.
ಅಲೆಮಾರಿಗಳ ಜೀವನ ಪದ್ಧತಿ, ಅವರ ಕಲೆ, ನಡೆಸುವ ಅತಂತ್ರ ಬದುಕಿನ ಚಿತ್ರಣವನ್ನು ಬೀದಿಗಳಲ್ಲಿ ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವ ಪ್ರಯತ್ನ ನಡೆಯಿತು. ಸುಡುಗಾಡು ಸಿದ್ಧರ ಕಲೆ, ಹಗಲು ವೇಷಗಾರರ ಕಲೆ, ಸಿಂಧೋಳ್ಳ ಸಮಾಜದವರ ಕಲೆ, ಹಕ್ಕಿಪಿಕ್ಕಿಗಳು, ಬುಡುಬುಡಿಕೆಯವರ ಜೀವನ ಸಹಿತ ಹಲವಾರು ಅಲೆಮಾರಿ ಸಮುದಾಯಗಳ ಜೀವನ ವೃತ್ತಾಂತ ಪ್ರತಿಭಟನೆಯ ಮೂಲಕವೇ ಪರಿಚಯವಾಯಿತು.

ಬುಡ್ಗ ಜಂಗಮ ಸಮುದಾಯದ ರಾಜ್ಯಾಧ್ಯಕ್ಷ ಸಣ್ಣ ಮಾರಪ್ಪ ಮಾತನಾಡಿ, “ರಾಜ್ಯ ಸರಕಾರ ಎಡಗೈ ಹಾಗೂ ಬಲಗೈ ಸಮುದಾಯಗಳಿಗೆ ಶೇ 6-6ರಂತೆ ಒಳಮೀಸಲಾತಿ ಜಾರಿ ಮಾಡಿತು. ಆದರೆ, ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿಯ ಪ್ರಕಾರ ಅಲೆಮಾರಿ ಸಮುದಾಯಗಳಿಗೆ ಶೇ.1 ಮೀಸಲಾತಿ ಕೊಡದೇ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಅನ್ಯಾಯ ಮಾಡುತ್ತಿದೆ. ನಮ್ಮ ಸಮುದಾಯಗಳಿಗೆ ಮರಣ ಶಾಸನ ಬರೆಯಿತು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಕಟ್ಟಕಡೆಯ ಸಮುದಾಯಗಳು ಇವೆಯೋ, ಅಂತ ಸಮುದಾಯಗಳಿಗೆ ನ್ಯಾಯ ಕೊಡುವ ಬದಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಲೆಮಾರಿ ಸಮುದಾಯಗಳಿಗೆ ಮೋಸ ಮಾಡಿದರು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದಿಗ ಸಮುದಾಯದ ಯುವ ಮುಖಂಡ ಮಲ್ಲಿಕಾರ್ಜುನ ಪೂಜಾರ ಮಾತನಾಡಿ, “ಧ್ವನಿ ಇಲ್ಲದ ಅಲೆಮಾರಿ ಸಮುದಾಯಗಳಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಹಳ ದೊಡ್ಡ ಅನ್ಯಾವೆಸಗಿದೆ. ಎಲ್ಲಾ ಅಲೆಮಾರಿ ಸಮುದಾಯಗಳ ಜೊತೆ ಮಾದಿಗ ಸಮುದಾಯ ಜೊತೆಗಿರುತ್ತದೆ. ಶೇ.1 ಒಳಮೀಸಲಾತಿ ಅಲೆಮಾರಿಗಳಿಗೆ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆ” ಎಂದು ಭರವಸೆ ನೀಡಿದರು.
ಛಲವಾದಿ ಸಮುದಾಯದ ಯುವ ನಾಯಕ ಕಾಶ್ಯಪ್ಪ ಛಲವಾದಿ ಮಾತನಾಡಿ, “ಬಡವರ ಅನ್ನ ಕಿತ್ತು ರಾಕ್ಷಸರ ಬಾಯಲ್ಲಿ ಇಟ್ಟಂತಾಗಿದೆ ಈ ರಾಜ್ಯ ಸರಕಾರದ ನೀತಿ. ಧ್ವನಿಯೇ ಇಲ್ಲದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸದೇ ಘೋರ ಅನ್ಯಾಯ ಮಾಡಿದೆ. ಡಿ.ದೇವರಾಜ ಅರಸು ಅವರ ಸಾಮಾಜಿಕ ನ್ಯಾಯವನ್ನು ಕಡೆಗಣೆಸಿದೆ ಹಾಗೂ ನ್ಯಾ.ನಾಗಮೋಹನ ದಾಸ್ ಅವರ ಸಾಮಾಜಿಕ ನ್ಯಾಯಯುತ ವರದಿಯನ್ನು ಗಾಳಿಗೆ ತೂರಿದೆ. 49 ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗುವವರೆಗೂ ಛಲವಾದಿ ಸಮುದಾಯ ನಿಮ್ಮ ಜೊತೆ ಇರುತ್ತದೆ” ಎಂದು ವಿಸ್ವಾಸ ತುಂಬಿದರು.


ಹಿರಿಯ ಪತ್ರಕರ್ತ ಬಸವಾರಾಜ ಶೀಲವಂತರ ಹಾಗೂ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, “ಒಳಮೀಸಲಾತಿಯನ್ನು ಜಾರಿ ಮಾಡುವ ಒತ್ತಡದಲ್ಲಿ ಸರ್ಕಾರ ಅಲೆಮಾರಿಗಳಂತಹ ಧ್ವನಿ ಇಲ್ಲದವರ ಧ್ವನಿ ಅಡಗಿಸಿದ್ದು ಅಕ್ಷಮ್ಯ. ಅಲೆಮಾರಿ ಸಮುದಾಯಗಳಿಗೆ ಮರಣ ಶಾಸನವನ್ನು ಸರ್ಕಾರ ಬರೆದುಬಿಟ್ಟಿದೆ, ಪ್ರತ್ಯೇಕ ಶೇ 1ರಷ್ಟು ಮೀಸಲಾತಿ ನೀಡುವ ಮೂಲಕ ನ್ಯಾಯ ನೀಡಲೇಬೇಕು” ಎಂದು ಒಕ್ಕೊರಲ ಒತ್ತಾಯ ಮಾಡಿದರು.
ಇದನ್ನೂ ಓದಿ: ಕೊಪ್ಪಳ | ಯುಕೆಇಎಂ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಎನ್‌ಒಸಿ ಕೊಡಲು ತಕರಾರು: ಗ್ರಾ.ಪಂ ಎದುರು ಗ್ರಾಮಸ್ಥರ ಪ್ರತಿಭಟನೆ
“ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಸರ್ಕಾರದ ಸಮೀಕ್ಷೆಯ ದತ್ತಾಂಶಗಳ ಹಿನ್ನೆಲೆಯಲ್ಲಿ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳ ಸಮೂಹಕ್ಕೆ ಪ್ರವರ್ಗ-ಎ ರಲ್ಲಿ ವರ್ಗೀಕರಿಸಿರುವುದು ನ್ಯಾಯಸಮ್ಮತವಾಗಿತ್ತು. ಹೀಗಾಗಿ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ-ಎ ರಲ್ಲಿಯೇ ಇರಿಸಿ ಶೇ 1ರಷ್ಟು ಒಳ ಮೀಸಲಾತಿ ನಿಗದಿಗೊಳಿಸಬೇಕು” ಎಂದು ಆಗ್ರಹಿಸಿದರು.
ವಿವಿಧ ಅಲೆಮಾರಿ ಸಮುದಾಯಗಳು ಸಾವಿರಾರು ಸಂಖ್ಯೆಯಲ್ಲಿ ಜಿಲ್ಲಾಡಳಿತ ಭವನದ ಮುಂದೆ ಜಮಾವಣೆಯಾಗಿದ್ದರು. ಜಿಲ್ಲಾಧಿಕಾರಿಗಳ ಬದಲಾಗಿ ಅಲೆಮಾರಿಗಳ ಮನವಿ ಪತ್ರ ಸ್ವೀಕರಿಸಲು ಎಡಿಸಿ ಅವರನ್ನು ಕಳಿಸಲಾಗಿತ್ತು; ಆದರೆ, ಪ್ರತಿಭಟನೆ ನಿರತ ಜನ ಜಿಲ್ಲಾಧಿಕಾರಿಗಳೇ ಬರಬೇಕೆಂದು ಪಟ್ಟು ಹಿಡಿದರು. ಪೊಲೀಸ್‌ರು ಮನವೊಲಿಸಲು ಯತ್ನಿಸಿದರೂ ಮಣಿಯದೇ ಪಟ್ಟು ಸಡಿಲಿಸಲಿಲ್ಲ. ಕೊನೆಗೂ ಜಿಲ್ಲಾಧಿಕಾರಿಗಳೇ ಬಂದು ಮನವಿ ಸ್ವೀಕರಿಸಿದ ನಂತರ ಪ್ರತಿಭಟನಾಕಾರರು ಸುಮ್ಮನಾದರು.





