ಕೊಟ್ಟ ಸಾಲ ವಾಪಸ್ ಕೇಳಲು ಬಂದ ಮಹಿಳೆಗೆ ಮದ್ಯ ಕುಡಿಸಿ, ನಾಲ್ವರು ದುರುಳರು ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಕೊಪ್ಪಳದ ಯಲಬುರ್ಗಾ ತಾಲೂಕಿನ ಮಾದ್ಧೂರ ಗ್ರಾಮದ ಬಳಿ ನಡೆದಿದೆ.
ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 39 ವರ್ಷದ ಹೊಸಪೇಟೆ ಮೂಲದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದ್ದು, ಅಸ್ವಸ್ಥಗೊಂಡ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷ್ಮಣ ಕೆಂಚಪ್ಪ ಕರಗುಳಿ ರೋನ್, ಬಸವರಾಜ ಸಕ್ರೆಪ್ಪ, ಭೀಮಪ್ಪ ಮಹದೇವಪ್ಪ ಮಸ್ಕಿ ಹನುಮಾಪುರ ಮತ್ತು ಶಾಹಿಕುಮಾರ ಮಹದೇವಪ್ಪ ಮಸ್ಕಿ ಹನುಮಾಪುರ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆಯು ಕುಷ್ಟಗಿ ಪಟ್ಟಣಕ್ಕೆ ತಮ್ಮ ಪರಿಚಯದವರಿಂದ ಹಣ ಪಡೆಯುವುದಕ್ಕಾಗಿ ಬಂದಿದ್ದರೆನ್ನಲಾಗಿದೆ. ಈ ವೇಳೆ ನಾಲ್ವರು ದುಷ್ಕರ್ಮಿಗಳು ಮಹಿಳೆಯನ್ನು ಬಲವಂತವಾಗಿ ಬೈಕಿನಲ್ಲಿ ಕರೆದೊಯ್ದು ಬಲವಂತದಿಂದ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ.
ಇದನ್ನೂ ಓದಿ: ಕೊಪ್ಪಳ | ಪಟ್ಟಣಕ್ಕೆ ಹೊಂದಿಕೊಂಡ ಹಳ್ಳದ ಸ್ವಚ್ಛತೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ
ಸಂತ್ರಸ್ತೆಯ ಪತಿ ಆಸ್ಪತ್ರೆಗೆ ಆಗಮಿಸಿದ್ದಾರೆ. ನನ್ನ ಪತ್ನಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾಳೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





