ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂಬುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿನ ನೂತನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
“ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿವೆ. ರಾಜ್ಯ ಸರ್ಕಾರ ಹಾಗೂ ಅಜೀಮ್ ಪ್ರೇಮಜಿ ಫೌಂಡೇಶನ್ ಸಹಯೋಗದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ಮತ್ತು ಬಾಳೆ ಹಣ್ಣುಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರ ಜತೆಗೆ ಮಕ್ಕಳಿಗೆ ಬಿಸಿಯೂಟ, ಹಾಲು, ಪಠ್ಯ ಪುಸ್ತಕ, ಸಮವಸ್ತ್ರದೊಂದಿಗೆ ಶೂಗಳು ಮತ್ತು ಸಾಕ್ಸ್ ಹಾಗೂ ವಿಶೇಷವಾಗಿ ಮಕ್ಕಳ ಪೌಷ್ಠಿಕ ಬೆಳವಣಿಗೆಗೆ ರಾಗಿ ಮಾಲ್ಟ್ ಕೊಡಲಾಗುತ್ತಿದೆ” ಎಂದು ಹೇಳಿದರು.
“ಒಂದು ಸಮೀಕ್ಷಾ ವರದಿ ಪ್ರಕಾರ ರಾಜ್ಯದಲ್ಲಿ ಕಳೆದ ಎರಡ್ಮೂರು ವರ್ಷಗಳಲ್ಲಿ ಮಕ್ಕಳ ಪೌಷ್ಠಿಕತೆ ಉನ್ನತ ಸ್ಥಾನವನ್ನು ಪಡೆದಿದೆ. ಉತ್ತಮ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದು, ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟವೂ ಹೆಚ್ಚಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಓದಿದವರೆಲ್ಲ ಉನ್ನತ ಸ್ಥಾನಗಳಲ್ಲಿದ್ದಾರೆ. ಇಂದಿನ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೂ ಕೂಡಾ ಓದಿರುವುದು ಒಂದು ಸರ್ಕಾರಿ ಶಾಲೆಯಲ್ಲಿಯೇ. ಸರ್ಕಾರಿ ಶಾಲೆಗಳ ಮಕ್ಕಳು ಚೆನ್ನಾಗಿ ಓದಿ ಓದಿ ಸಾಧಿಸಲಿ” ಎಂದು ಸಲಹೆ ನೀಡಿದರು.
“ರಾಜ್ಯದಲ್ಲಿ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲಿದ್ದೇವೆ ಹಾಗೂ ಅವಶ್ಯವಿರುವಲ್ಲಿ ಪ್ರೌಢ ಹಾಗೂ ಪಿಯುಸಿ ಕಾಲೇಜುಗಳನ್ನು ಮಾಡಿಕೊಡಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುಧಾನದಲ್ಲಿ ಶೇ.25ರಷ್ಟನ್ನು ಶಿಕ್ಷಣಕ್ಕಾಗಿಯೇ ಮೀಸಲಿಡಲಾಗಿದೆ. ಪರೀಕ್ಷೆಯಲ್ಲಿ ಕಾಪಿ ಮಾಡುವುದನ್ನು ತಡೆಯಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದರಿಂದ ಕೆಲ ಮಕ್ಕಳುಾನುತ್ತೀರ್ಣ ಆಗುತ್ತಿರಬಹುದು. ಆದರೆ, ಭವಿಷ್ಯದಲ್ಲಿ ಮಕ್ಕಳು ಯಾವುದೇ ರೀತಿಯಲ್ಲಿ ಸೋಲುವುದಿಲ್ಲ” ಎಂದರು.
“ಮೂರು ಪರೀಕ್ಷಾ ಸೂತ್ರವನ್ನು ಜಾರಿಗೆ ತರಲಾಗಿದ್ದು, ಈ ವ್ಯವಸ್ಥೆಯ ಮಹತ್ವ ಮುಂಬರುವ ದಿನಗಳಲ್ಲಿ ತಿಳಿಯಲಿದೆ. ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗದ 84,400ಕ್ಕಿಂತಲೂ ಹೆಚ್ಚು ಮಕ್ಕಳು ಪರೀಕ್ಷೆ-2ರಲ್ಲಿ ಉತ್ತೀರ್ಣರಾಗಿ ಶಿಕ್ಷಣ ಇಲಾಖೆಯ ಗೌರವನ್ನು ಹೆಚ್ಚಿಸಿದ್ದಾರೆ. ಇದರಲ್ಲಿ ಸರ್ಕಾರಿ ಶಾಲೆಗಳು ಮೊದಲ ಸ್ಥಾನದಲ್ಲಿದ್ದು, ಅನುದಾನಿತ ಮತ್ತು ಖಾಸಗಿ ಶಾಲೆಗಳು 2 ಮತ್ತು 3ನೇ ಸ್ಥಾನದಲ್ಲಿವೆ. ಸದ್ಯ 3ನೇ ಪರೀಕ್ಷೆಯು ನಡೆಯುತ್ತಿದೆ” ಎಂದು ಹೇಳಿದರು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, “ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಎರಡು ವರ್ಷಗಳನ್ನು ಪೂರೈಸಿದ್ದು, ಹಲವಾರು ಜನಪರವಾದ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ವಿಶೇಷವಾಗಿ ನಮ್ಮ ಯಲಬುರ್ಗಾ ಕ್ಷೇತ್ರದಲ್ಲಿ 16 ಹೊಸ ಶಾಲೆಗಳು ಹಾಗೂ 7 ಹೊಸ ಜೂನಿಯರ್ ಕಾಲೇಜುಗಳು ಪ್ರಾರಂಭವಾಗಿದ್ದು, ಇನ್ನೊಂದು ವಾರದಲ್ಲಿ ತಲಾ ಒಂದು ಹೊಸ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜು ಪ್ರಾರಂಭವಾಗಲಿದೆ” ಎಂದು ಹೇಳಿದರು.
“ಇದರ ಜತೆಗೆ ವಿವಿಧ ಗ್ರಾಮಗಳಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೂ ಮಂಜೂರು ಮಾಡಿಸಲಾಗಿದೆ. ಬ್ರಿಜ್ ಕಂ ಬ್ಯಾರೆಜ್ ನಿರ್ಮಾಣ, ಕೆರೆ ತುಂಬಿಸಲು ಸಹ ಅನುದಾನವನ್ನು ನೀಡಲಾಗಿದೆ. ಒಂದು ಶಾಲೆ ಪ್ರಾರಂಭಿಸಿದ ಬಳಿಕ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ವೇತನ ಸೇರಿದಂತೆ ಒಂದು ವರ್ಷಕ್ಕೆ ಸುಮಾರು 70 ರಿಂದ 75 ಲಕ್ಷಗಳು ಖರ್ಚಾಗಲಿದ್ದು, ಈ ಅನುದಾನವನ್ನು ಸರ್ಕಾರವು ನೀಡಲಿದೆ”
ಎಂದರು.
ಇದನ್ನೂ ಓದಿದ್ದೀರಾ? ಟ್ರಂಪ್ ಗುಪ್ತಭೇಟಿಗೆ ಯತ್ನಿಸಿ ಮುಖಭಂಗಕ್ಕೊಳಗಾದ ಬಿಜೆಪಿಯ ‘ತುರ್ತು ನಿರ್ಗಮನ ತಜ್ಞ’!
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, “ಎಲ್ಲ ಅಭಿವೃದ್ಧಿಗಿಂತಲೂ ಶಿಕ್ಷಣದ ಅಭಿವೃದ್ಧಿ ಬಹಳ ಪ್ರಮುಖವಾದದ್ದು. ಯಾಕೆಂದರೆ, ಶಿಕ್ಷಣ ಎಂಬುದು ಒಂದು ದೊಡ್ಡ ಅಸ್ತ್ರವಾಗಿದ್ದು, ಪಾಲಕರು, ಪೋಷಕರು ಹಾಗೂ ಶಿಕ್ಷಕರು ಸರಿಯಾಗಿ ಮಕ್ಕಳಿಗೆ ಮಾಹಿತಿ ನೀಡಬೇಕು. ಇವತ್ತು ಮೊಬೈಲ್ ಬಂದು ಮಕ್ಕಳಲ್ಲಿ ಓದುವ ಇಚ್ಚಾಸಕ್ತಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪಾಲಕರು ಗಮನ ಹರಿಸಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಕೆಲಸ ಮಾಡಬೇಕು” ಎಂದು ಹೇಳಿದರು.
ಹಿರೇವಂಕಲಕುಂಟಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ಬಸವರಾಜ ತಳವಾರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಮಾಜಿ ಜಿ.ಪಂ ಸದಸ್ಯರಾದ ಹನುಮಂತಗೌಡ ಚಂಡೂರು, ಮಹೇಶ ಹಳ್ಳಿ, ಅಶೋಕ ತೋಟದ, ಶಾಲೆಯ ಮುಖ್ಯೋಪಾಧ್ಯಾಯ ಬಾಬುಸಾಬ ಲೈನ್ದಾರ್ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲೆಯ ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಇತರರು ಇದ್ದರು.





