ಗ್ರಾಮ ಪಂಚಾಯತಿ ಸದಸ್ಯರ ಗೌರವಧನವನ್ನು ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಹಣವಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿಡಿಒ ಗೌಸ್ ಸಾಬ ಮುಲ್ಲಾ ಅವರನ್ನು ಅಮಾನತು ಮಾಡಲಾಗಿದೆ.
ಗೌಸ್ ಸಾಬ ಅವರನ್ನು ಅಮಾನತು ಮಾಡಿ ಕೊಪ್ಪಳ ಜಿಲ್ಲಾ ಪಂಚಾಯತಿ ಸಿಇಒ ವರ್ಣೀತ್ ನೇಗಿ ಅವರು ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡಿರುವ ಗೌಸ್ ಸಾಬ ಮುಲ್ಲಾ ಅವರು ಹಣವಾಳ ಗ್ರಾಮ ಪಂಚಾಯತಿ ಸದಸ್ಯರ 1.32 ಲಕ್ಷ ರೂ. ಗೌರವಧನವನ್ನು ಬೇರೆ ಕಾಮಗಾರಿಗೆ ಬಳಕೆ ಮಾಡಿದ್ದಾರೆ ಮತ್ತು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಅವರ ವಿರುದ್ಧ ಮಲ್ಲಪ್ಪ ದಾನಶೆಟ್ಟಿ ಎಂಬವರು ದೂರು ನೀಡಿದ್ದರು. ಅವರ ದೂರಿನ ಆಧಾರದ ತನಿಖೆ ನಡೆಸಲು ತಾಲೂಕು ಪಂಚಾಯತಿ ಇಒ ರಾಮರೆಡ್ಡಿ ಪಾಟೀಲ್ ಅವರನ್ನು ನಿಯೋಜಿಸಲಾಗಿತ್ತು. ಅವರ ತನಿಖಾ ವರದಿಯ ಆಧಾರದ ಮೇಲೆ ಅಮಾನತು ಮಾಡಲಾಗಿದೆ.




