ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಸ್ವಂತ ಅಣ್ಣನೇ ಅಪ್ರಾಪ್ತೆ ತಂಗಿ ಮೇಲೆ ಅತ್ಯಾಚಾರ ಎಸಗಿ ಮಗುವಿಗೆ ಜನ್ಮ ನೀಡಿರುವ ಆಘಾತಕಾರಿ ಘಟನೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗರ್ಭಿಣಿಯಾಗಿದ್ದ ಬಾಲಕಿ ವಾರದ ಹಿಂದೆ ಮಗುವಿಗೆ ಜನ್ಮ ನೀಡಿದ್ದು, 21 ವರ್ಷದ ಆರೋಪಿ ಅಣ್ಣನ ವಿರುದ್ಧ ಬಾಲಕಿ ನೀಡಿದ ದೂರಿನನ್ವಯ ಪೋಕ್ಸೋ ಕೇಸ್ ದಾಖಲಾಗಿದೆ.
ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದ ದೂರನ್ನು ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿ ತನಿಖೆ ನಡೆಸಲಾಗುತ್ತಿದೆ.
ಏನಿದು ಘಟನೆ?
ಇದನ್ನೂ ಓದಿ: ಕೊಪ್ಪಳ | ಭಗತ್ ಸಿಂಗ್ ಆಶಯದಂತೆ ಜನಸಾಮಾನ್ಯರೂ ಹೋರಾಟದ ರಾಜಕೀಯ ಮಾಡಬೇಕು: ರಾಮಾಂಜನಪ್ಪ ಆಲ್ದಳ್ಳಿ
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆರೋಪಿ ಅಣ್ಣ ತನ್ನ ಅಪ್ರಾಪ್ತೆ ತಂಗಿ ಬಳಿ ತಾನು ಆಕೆಯನ್ನು ಮದುವೆ ಆಗುವುದಾಗಿ ಹೇಳಿದ್ದ. ʼನಿನ್ನನ್ನು ಯಾವತ್ತೂ ಕೈಬಿಡಲ್ಲ, ಚೆನ್ನಾಗಿ ನೋಡಿಕೊಳ್ಳುತ್ತೇನೆ. ಯಾರೂ ನಿನಗೆ ಏನು ಹೇಳದ ರೀತಿ ಕಾವಲಾಗಿ ಇರುತ್ತೇನೆʼ ಎಂದೆಲ್ಲ ಪುಸಲಾಯಿಸಿದ್ದ. ಈ ವೇಳೆ ಸಂತ್ರಸ್ತೆ ಇದನ್ನು ವಿರೋಧಿಸಿದ್ದು ಸಮಾಜ ಈ ರೀತಿಯ ಸಂಬಂಧವನ್ನು ಒಪ್ಪಲ್ಲ ಎಂದಿದ್ದರೂ ಆಕೆಯ ಬೆನ್ನು ಬಿದ್ದಿದ್ದ ಆತ ತಂಗಿಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದ. ವಿಷಯವನ್ನು ಮನೆಯವರಿಗೆ ತಿಳಿಸಲು ಸಂತ್ರಸ್ತೆ ಯತ್ನಿಸಿದ್ದಳು. ಆದರೆ ಈ ವೇಳೆ ವಿಷಯ ಮನೆಯವರಿಗೆ ಹೇಳಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆರೋಪಿ ಬೆದರಿಸಿದ್ದ ಎಂದು ಸಂತ್ರಸ್ತೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.





