ಪಿಯುಸಿಯಲ್ಲಿ ಶೇ.98ರಷ್ಟು ಅಂಕ ಪಡೆದ ವಿದ್ಯಾರ್ಥಿನಿಗೆ ಬಿಎಸ್‌ಸಿ ಅಗ್ರಿ ಸೀಟ್ ಸಿಕ್ಕಿದೆ. ಆದರೂ ಓದು ಮುದುವರೆಸಲು ಬಡತನ ಅಡ್ಡಿಯಾಗಿದೆ ಎಂದು ವಿದ್ಯಾರ್ಥಿನಿ ತಾಯಿ ಸವಿತಾ ಮೇಟಿ ಕಣ್ಣೀರು ಹಾಕಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಭೂಮಿಕಾ ಅವರ ತಾಯಿ ಸವಿತಾ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, “ನನ್ನ ಬಡತನವೇ ಮಗಳ ಓದಿಗೆ ಅಡ್ಡಿಯಾಗಿದೆ. ಮುಂದೆ ಓದಿಸಲಾಗುತ್ತಿಲ್ಲ. ಆರ್ಥಿಕವಾಗಿ ತುಂಬಾ ಕಷ್ಟವಾಗುತ್ತಿದೆ” ಎಂದು ಗಳಗಳನೆ ಅಳತೊಡಗಿದರು.
“ನನ್ನ ಮಗಳು ಭೂಮಿಕಾ ಮೇಟಿ ತಂದೆ ಇಲ್ಲದ ತಬ್ಬಲಿ, ತಂದೆ ತೀರಿಕೊಂಡ ಬಳಿಕ ಗ್ರಾಮದ ಹಿರಿಯರು ಸೇರಿಕೊಂಡು ನನಗೆ ಸ್ಥಳೀಯ ಶಾಲೆಯಲ್ಲಿ ಬಿಸಿಯೂಟ ತಯಾರಕರ ಕೆಲಸ ಕೊಡಿಸಿದರು. ಅದರಿಂದ ಬರುವ ಚಿಕ್ಕ ಸಂಬಳದಲ್ಲಿ ಮನೆ ನಡೆಸುವುದೇ ದುಸ್ತರವಾಗಿದೆ. ಇಂತಹ ಕಡುಬಡತನದಲ್ಲೂ ಮಗಳು ಪಿಯುಸಿಯಲ್ಲಿ ಶೇ.98ರಷ್ಟು ಅಂಕ ಪಡೆದು, ಧಾರವಾಡ ವಿವಿಯಲ್ಲಿ ಬಿಎಸ್‌ಸಿ ಅಗ್ರಿ ಪದವಿ ಪ್ರವೇಶ ಪಡೆದಿದ್ದಾಳೆ. ಆದರೆ, ಮಗಳ ಓದಿಗೆ ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸುವಷ್ಟು ಶಕ್ತಿ ನನ್ನಲ್ಲಿಲ್ಲ” ಎಂದು ಸಂಕಟಪಟ್ಟರು.
“ಮಗಳ ಓದಿಗೆ ವರ್ಷಕ್ಕೆ ಕನಿಷ್ಠ ಒಂದು ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತದೆಂದು ಹೇಳಿದ್ದಾರೆ. ಅಷ್ಟು ಶುಲ್ಕ ಭರಿಸುವ ಶಕ್ತಿ ತಮಗಿಲ್ಲ. ಮಗಳ ಓದಿನ ಕನಸು ಕನಸಾಗಿಯೇ ಉಳಿದುಬಿಡುತ್ತದೆಂಬ ಆತಂಕವಿದ್ದರೂ ಎದೆಗುಂದದೆ ಮೈಕ್ರೋಫೈನಾನ್ಸ್ ಬ್ಯಾಂಕಿನಲ್ಲಿ 60 ಸಾವಿರ ಸಾಲ ಪಡೆದು ಮಗಳಿಗೆ ಧಾರವಾಡ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಕೊಡಿಸಿದೆ. ಆದರೆ, ಪ್ರತಿ ತಿಂಗಳು ಸಾಲದ ಬಡ್ಡಿ ತೀರಿಸಲಾಗದ ಸಂಕಷ್ಟದ ಪರಿಸ್ಥಿತಿ ಒದಗಿದೆಬಂದಿದೆ” ಎಂದರು.
“ಬಡ್ಡಿ ಕಟ್ಟುವ ಜೊತೆಗೆ ಮಗಳ ಓದಿನ ಖರ್ಚನ್ನೂ ಭರಿಸಬೇಕಿದೆ. ಬಿಸಿಯೂಟದ ಕಾರ್ಯಕರ್ತೆಯಾಗಿ ಕೆಲಸದಿಂದ ತಿಂಗಳಿಗೆ ಕೇವಲ ₹4,700 ಮಾತ್ರ ಸಂಬಳ ಬರುತ್ತದೆ. ಇದರಿಂದ ಮನೆ ನಿಭಾಯಿಸಿಕೊಂಡು ಹೋಗುವುದೇ, ಮಗಳನ್ನು ಓದಿಸುವುದೇ ತಿಳಿಯದಾಗಿದೆ. ಈಗಾಗಲೇ ₹45,000 ಶುಲ್ಕ ಪಾವತಿಸಿದ್ದೇನೆ. ಆದರೆ, ಇನ್ಮುಂದೆ ಓದಿಸಲು ನನ್ನಿಂದಾಗದು. ಇದರಿಂದ ಮಗಳ ಓದು ಅರ್ಧಕ್ಕೆ ನಿಲ್ಲುತ್ತದೆ, ಮಗಳ ಭವಿಷ್ಯ ಹಾಳಾಗುತ್ತದೆಂದು ಹೆದರಿಕೆಯಾಗುತ್ತಿದೆ” ಎಂದು ತಾಯಿ ಸವಿತಾ ಅಳತೊಡಗಿದ್ದಾರೆ.
“ಮಗಳು ಪಿಯುಸಿಯಲ್ಲಿ ಶೇ.98ರಷ್ಟು ಪಡೆದಾಗ ಇಡೀ ಕುಟುಂಬ ಹಾಗೂ ಸಂಬಂಧಿಕರು ಸಂಭ್ರಮಪಟ್ಟಿದ್ದೆವು. ಆದರೆ, ಮಗಳ ಓದಿನ ಕನಸು ಹಾಗೂ ಅದಕ್ಕೆ ತಗಲುವ ಲಕ್ಷಾಂತರ ರೂಪಾಯಿ ಖರ್ಚಿನ ವೆಚ್ಚ ತಿಳಿದು ಕುಗ್ಗಿದೆವು. ಕೇವಲ ಬಿಸಿಯೂಟ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುವ ನನ್ನಿಂದ ಇದು ಸಾಧ್ಯವಿಲ್ಲ ಎನಿಸಿತು. ಹಾಗೆಂದು ತನ್ನ ಮಗಳನ್ನು ಶಿಕ್ಷಣದಿಂದ ವಂಚಿತಳನ್ನಾಗಿ ಮಾಡುವುದಿಲ್ಲ. ನನ್ನ ಜೀವ ಕೊಟ್ಟಾದರೂ ನನ್ನ ಮಗಳನ್ನು ಓದಿಸುತ್ತೇನೆ. ಮಗ ಪಿಯುಸಿ ಓದುತ್ತಿದ್ದು, ಆತನನ್ನೂ ಓದಿಸಬೇಕಿದೆ. ಮಗಳು ಹಿರೇಸಿಂದೋಗಿ ಮೊರಾರ್ಜಿ ಶಾಲೆಯಲ್ಲಿದ್ದುಕೊಂಡು ಓದಿಯೇ ಪಿಯುಸಿಯಲ್ಲಿ ಶೇ.98 ಅಂಕ ಪಡೆದಿದ್ದಾಳೆ. ಈಗ ಮುಂದಿನ ಶಿಕ್ಷಣಕ್ಕೆ ಕಷ್ಟವಾಗಿದೆ” ಎನ್ನುತ್ತಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಬಲ್ಡೋಟಾ ಕಾರ್ಖಾನೆಯ ಕಾರ್ಮಿಕ ಕೆಲಸದ ವೇಳೆ ಮೇಲಿನಿಂದ ಬಿದ್ದು ಸಾವು
ಬಡತನದ ಬೇಗೆಯಲ್ಲಿ ಇರುವ ಸವಿತಾ ಮೇಟಿಯವರು ಪ್ರತಿಭಾವಂತ ಮಕ್ಕಳ ಓದಿನ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಸಹಾಯ ಮಾಡುವವರು ಅವರ ಬ್ಯಾಂಕ್ ಖಾತೆ
ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾತರಕಿ.
ಹೆಸರು : ಭೂಮಿಕಾ ಮಂಜಪ್ಪ ಮೇಟಿ,
ಖಾತೆ ಸಂಖ್ಯೆ -10904100002246,
ಐಎಫ್‌ಎಸ್‌ಸಿ ಸಂಖ್ಯೆ : PKGB0010904 ಖಾತೆಗೆ ನೆರವು ನೀಡಬಹುದಾಗಿದೆ. ಅವರನ್ನು ಸಂಪರ್ಕಿಸಲು 9845057768ಕ್ಕೆ ಕರೆ ಮಾಡಬಹುದು.





