ಪ್ರೀತಿ ವಿಚಾರಕ್ಕೆ ಯುವಕನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ.
ಪ್ರೀತಿ ವಿಚಾರಕ್ಕೆ ನಾಲ್ವರು ಯುವಕರು ನಗರದ ನಿವಾಸಿಯಾದ ಗವಿಸಿದ್ಫಪ್ಪ ನಾಯ್ಕ್ ಎಂಬುವನನ್ನು ನಿರ್ಮಿತಿ ಕೇಂದ್ರ ನಗರದಲ್ಲಿನ ಬಹದ್ದೂರ್ ಬಂಡಿ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಲಾಗಿದೆ.
ನಾಲ್ವರು ಯುವಕರು ಈ ಕೃತ್ಯ ಮಾಡಿದ್ದು, ಒಬ್ಬನು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಉಳಿದವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಗೌರಿ ಅಂಗಳದ ಓಣಿಯ ಅಪ್ರಾಪ್ತ ಮುಸ್ಲಿಂ ಬಾಕಿಯನ್ನು ಕಳೆದ 2-3 ವರ್ಷಗಳಿಂದ ಗವಿಸಿದ್ದಪ್ಪ ನಾಯಕ್ ಪ್ರಿತಿಸುತ್ತಿದ್ದು, ಅದೇ ಬಾಲಕಿಯನ್ನು ಸಾದಿಕ್ ಕೂಡ ಪ್ರೀತಿಸುತ್ತಿದ್ದ ಆರೋಪಿ ಜೊತೆಗಿನ ಪ್ರೀತಿ ಸಂಬಂಧ ಮುರಿದು ಬಿದ್ದಿದ್ದೇ ಇಬ್ಬರ ವೈಮನಸ್ಸಿಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಗವಿಸಿದ್ದಪ್ಪ ಪ್ರೀತಿಸುತ್ತಿದ್ದ ಬಾಲಕಿಯ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದೂ ಇದೆ. ಈ ಕುರಿತು ಹಲವು ಬಾರಿ ಪಂಚಾಯತಿ ಮಾಡಲಾಗಿತ್ತು. ಅಷ್ಟಾದರೂ ಕೊಲೆಯಾದ ಗವಿಸಿದ್ದಪ್ಪ ನಾಯಕ್ ಹಾಗೂ ಬಾಲಕಿಯ ಮಧ್ಯ ಪ್ರೀತಿ ಮುಂದುವರೆದಿತ್ತು ಎಂದು ಹೇಳಲಾಗುತ್ತದೆ. ಹೀಗಾಗಿ ಗವಿಸಿದ್ದಪ್ಪನನ್ನು ಸಾದಿಕ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಗವಿಸಿದ್ದಪ್ಪ ನಿನ್ನೆ ಗಣಪತಿ ಪಟ್ಟಿ ಕೇಳಲು ಓಣಿಯಲ್ಲಿ ಸುತ್ತುತ್ತಿದ್ದ. ರಾತ್ರಿ 7-30 ಕ್ಕೆ ಅನಾಮಧೇಯ ಪೋನ್ ಕರೆಯೊಂದು ಬಂದಿದ್ದು, ಸ್ನೇಹಿತರಿಗೆ ‘ನೀವು ಪಟ್ಟಿ ಎತ್ತಿ ನಾನು ಇಲ್ಲೆ ಸ್ವಲ್ಪ ಹೋಗಿ ಬರ್ತೀನಿ’ ಎಂದು ಹೇಳಿ ಹೋದ ಎಂದು ಗೆಳೆಯರು ಹೇಳುತ್ತಾರೆ. ನಂತರ ಕೊಲೆ ಸುದ್ಧಿ ಬೆಳಕಿಗೆ ಬಂದಿದೆ.

ಯುವಕನ ಕುತ್ತಿಗೆ ಬಾಗಕ್ಕೆ ಮಚ್ವಿನಿಂದ ಹೊಡೆದು ಕೊಲ್ಲಲಾಗಿದೆ. ನಗರದಲ್ಲಿ ಇಷ್ಟೊಂದು ಬರ್ಬರವಾಗಿ ಹತ್ಯಯಾದ ಘಟನೆ ಹಿಂದೆ ಎಂದೂ ನಡೆದಿಲ್ಲ ಎಂದು ಹೇಳುತ್ತಾರೆ. ಇನ್ನು ಕೊಲೆಯಾದ ಯುವಕ ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಯಮನೂರಪ್ಪ ನಾಯಕ್ ಸಹೋದರನ ಮಗ.
ಎಸ್ಪಿ ಡಾ. ರಾಮ್ ಅರಸಿದ್ದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಬಳ್ಳಾರಿ ಐಜಿಪಿ ವರ್ತಿಕಾ ಕಟಿಯಾರ್ ಸಹ ಕೊಪ್ಪಳಕ್ಕೆ ಭೇಟಿ ನೀಡಿ ಸಿಟಿ ರೌಂಡ್ಸ್ ಹಾಕಿದರು. ಸದ್ಯ ಸಾದಿಕ್ ಪೊಲೀಸರಿಗೆ ಶರಣಾಗಿದ್ದಾನೆ. ಆದರೆ ಆತನಿಗೆ ಸಹಾಯ ಮಾಡಿದ 3 ಮಂದಿ ಪರಾರಿಯಾಗಿದ್ದಾರೆ. ಕೊಲೆ ಮಾಡಿ ಶರಣಾದ ಸಾದಿಕ್ ಪ್ರೀತಿ ವಿಚಾರವಾಗಿ ಕೊಲೆ ಮಾಡಿದ್ದೇನೆಂದು ಒಪ್ಪಿಕೊಂಡಿದ್ದಾನೆ. ಘಟನಾ ಸ್ಥಳದಲ್ಲಿ ಎರಡು ಮಚ್ಚುಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧರ್ಮಸ್ಥಳ ಪ್ರಕರಣ: ಇಂದು ಅನಾಮಿಕ ವ್ಯಕ್ತಿ ಗುರುತಿಸಿದ 11ನೇ ಸ್ಥಳ ಶೋಧ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಸ್ಥಳಕ್ಕೆ ಆಗಮಿಸಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.





