ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಉಳೆನೂರು ಗ್ರಾಮದಲ್ಲಿ ಅತಿಯಾದ ಮಳೆ ಗಾಳಿಯಿಂದ ಭತ್ತದ ಪೈರು ನೆಲಕ್ಕುರುಳಿದ್ದು, ಬಂದ ಬೆಳೆ ನೆಲದ ಪಾಲಾಗಿರುವುದರಿಂದ ರೈತರು ಸಂಕಷ್ಟಕೊಳಗಾಗಿದ್ದಾರೆ. ಸರ್ಕಾರ ನಷ್ಟವಾದ ಬೆಳೆಗೆ ಶೀಘ್ರ ಪರಿಹಾರ ಘೋಷಿಸಬೇಕು ಎಂದು ಎಐಕೆಕೆಎಮ್‌ಎಸ್ ನೃತೃತ್ವದಲ್ಲಿ ಗ್ರಾಮದ ರೈತರು ಆಗ್ರಹಿಸಿದರು.
ಎಐಕೆಕೆಎಮ್‌ಎಸ್ ಸಮಿತಿಯ ಸದಸ್ಯರು ಹಾಗೂ ರೈತರು ಮಾತನಾಡಿ, “ಕಾರಟಗಿ ತಾಲೂಕಿನ ಉಳೇನೂರು ಗ್ರಾಮ ಸೇರಿದಂತೆ ಕೊಪ್ಪಳ ಜಿಲ್ಲೆ ಹಾಗೂ ರಾಜ್ಯಾದ್ಯಂತ ಇತ್ತೀಚೆಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಷ್ಟಕ್ಕೀಡಾಗಿದೆ. ಪ್ರತಿ ಎಕರೆಗೆ 8 ರಿಂದ 10 ಕ್ವಿಂಟಲ್ ಭತ್ತ ನಾಶವಾಗಿದೆ. ಹಿಂದಿನ ವರ್ಷವೂ ಇದೇ ರೀತಿಯಾದ ಅಕಾಲಿಕ ಮಳೆಗೆ ಸಾಕಷ್ಟು ಭತ್ತ ನಾಶವಾಗಿತ್ತು. ಅಂದು ನಾಶವಾಗಿದ್ದ ಭತ್ತಕ್ಕೆ ಸರ್ಕಾರ ನಷ್ಟ ಪರಿಹಾರ ನೀಡುವುದಾಗಿ ನೀಡಿದ್ದ ಭರವಸೆ, ಬೆರಳೆಣಿಕೆಯ ರೈತರಿಗೆ ತಲುಪಿ, ಸಾವಿರಾರು ಜನರಿಗೆ ಅದು ತಲುಪಲೇ ಇಲ್ಲ. ಇದರಿಂದ ರೈತರು ಸಾಕಷ್ಟು ನಷ್ಟಕ್ಕೀಡಾದರು. ಈ ವರ್ಷ ಸಹ ಆ ರೀತಿ ಆಗದೆ, ಬೆಳೆ ನಾಶದಿಂದ ಸಂಕಷ್ಟಕ್ಕೊಳಗಾದ ಎಲ್ಲಾ ರೈತರಿಗೆ ನಷ್ಟ ಪರಿಹಾರ ಕೂಡಲೇ ಘೋಷಿಸಬೇಕು ಹಾಗೂ ಅದು ಎಲ್ಲರಿಗೂ ತಲುಪುವಂತೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕೊಪ್ಪಳ | ಕುಡಿಯುವ ನೀರಿಗಾಗಿ ಪರದಾಟ; ಸಮಸ್ಯೆಯ ಶೀಘ್ರ ಪರಿಹಾರಕ್ಕೆ ಆಗ್ರಹ


“ಒಂದು ಎಕರೆ ಭತ್ತಕ್ಕೆ 20,000 ನಷ್ಟ ಪರಿಹಾರ ನೀಡಬೇಕು. ಒಂದು ಕ್ವಿಂಟಲ್ ಭತ್ತಕ್ಕೆ 3500 ಬೆಂಬಲ ಬೆಲೆ ನೀಡಬೇಕು. ಭತ್ತ ಕಟಾವು ಮಾಡುವ ಮಿಷನ್ ಗೆ ಒಂದು ಗಂಟೆಗೆ ಎರಡು ಸಾವಿರಕ್ಕಿಂತ ಹೆಚ್ಚಿಗೆ ಇರಬಾರದು. ಭತ್ತದ ಖರೀದಿ ಕೇಂದ್ರವನ್ನು ನವಂಬರ್ ತಿಂಗಳಲ್ಲಿ ಪ್ರಾರಂಭ ಮಾಡಬೇಕು” ಎಂದು ಹಕ್ಕೊತ್ತಾಯ ಮಂಡಿಸಿದರು.
ಈ ವೇಳೆ ಉಳೆನೂರಿನ ರೈತರಾದ ಯಮನೂರ, ಗಂಗಪ್ಪ, ವೀರೇಶ್ ಇಟಗಿ, ಕುಮಾರಪ್ಪ, ಎಮ್ ವೆಂಕಟಪ್ಪ ಉಳೇನೂರಿನ ಎಐಕೆಕೆಎಮ್‌ಎಸ್ ರೈತ ಸಂಘಟನೆಯ ಸದಸ್ಯರಾದ ಬಸವರಾಜಪ್ಪ, ಅಂಜಿನಪ್ಪ ಅಳ್ಳಳ್ಳಿ, ಮುಕ್ಕಣ್ಣ ಪಾಳ್ಯ ಹಾಗೂ ರೈತರು ಇದ್ದರು.





