ಕೃಷಿ ಕೆಲಸ ಎಂದರೆ ಮೂಗು ಮುರಿಯುವ ಸುಶಿಕ್ಷಿತರು ಒಂದು ಕಡೆಯಾದರೆ, ಮತ್ತೊಂದೆಡೆ ಎಂಜನಿಯರಿಂಗ್, ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಗಳಾಗಿ ಲಕ್ಷಾಂತರ ಸಂಬಳ ಕೊಡುವ ಉದ್ಯೋಗ ಬಿಟ್ಟು ನಗರ, ಪಟ್ಟಣ ತೊರೆದು ಹಳ್ಳಿ ಕಡೆ ಮುಖ ಮಾಡಿ ಕೃಷಿ, ತೋಟಗಾರಿಕೆಯಂತಹ ಸ್ವಂತ ಉದ್ಯೋಗ ಕಟ್ಟಿಕೊಳ್ಳುವವರೂ ಸಾಕಷ್ಟು ಮಂದಿ ಇದ್ದಾರೆ. ಮನೆಯ ಆರ್ಥಿಕ ಸಮಸ್ಯೆಗಳ ಕಾರಣದಿಂದ ಶಿಕ್ಷಣವನ್ನು ಮೊಟಕುಗೊಳಿಸಿ ನಿರಾಸಕ್ತರಾದವರಿಗೆ ಪ್ರೇರಣೆಯಾದಂತವರೂ ಕೊಪ್ಪಳ ಜಿಲ್ಲೆಯಲ್ಲಿ ಬಹಳಷ್ಟು ಜನ ಸಿಗುತ್ತಾರೆ.
ಅದರಲ್ಲಿ ಮುಖ್ಯವಾಗಿ ಗಂಗಾವತಿ ಸಾಫ್ಟವೇರ್ ಉದ್ಯೋಗಿಯಾಗಿದ್ದ ಹಾಗೂ ಸ್ವಂತ ಕಂಪನಿಯನ್ನೇ ತೆರೆದಿದ್ದ ಬಸಯ್ಯ ಹಿರೇಮಠರವರು ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದಲ್ಲಿ 60 ಎಕ್ಕರೆ ಭೂಮಿ ಖರೀದಿಸಿ ಅದರಲ್ಲಿ ನುಗ್ಗೆ ಸೊಪ್ಪನ್ನು ಬೆಳೆದು ಅದರ ಪುಡಿ ತಯಾರಿಸಿ ವಿದೇಶಗಳಿಗೆ ರಫ್ತು ಮಾಡಿರುವುದು, ಕೃಷಿಯಲ್ಲಿ ಯಶಸ್ಸು ಕಂಡಿರುವ ಉದಾಹರಣೆ ಕಣ್ಮುಂದಿದೆ.
‘ಈ ಬೆಳೆ ಬೆಳೆಯುವುದರಿಂದ ನಮಗೆ ಯಾವ ಲಾಭವೂ ಇಲ್ಲ, ಇದು ಬೇಡವೇ ಬೇಡ’ ಎಂದು ಬೇರು ಭೂಮಿಯ ಆಳವನ್ನು ಪಸರಿಸುವ ಮೊದಲೆ ನೆಟ್ಟ ಸಸಿಗಳನ್ನು ಕಿತ್ತು ಹಾಕಲು ಪ್ರಯತ್ನಿಸುತ್ತಿದ್ದ ಅಪ್ಪನ ಬಗ್ಗೆ ಬೇಸರವಿದ್ದರೂ; ಆತನನ್ನು ಒಪ್ಪಿಸಿ ನಿಂಬೆ ಗಿಡಗಳನ್ನು ಬೆಳಸಿ ಅದರಲ್ಲಿಯೇ ಪ್ರತಿ ತಿಂಗಳಿಗೆ 75-80 ಸಾವಿರವರೆಗೆ ಲಾಭ ಪಡೆಯುತ್ತಿರುವ ಪ್ರಗತಿಪರ ರೈತ ಗವಿಸಿದ್ದಪ್ಪ ಹಾಗೂ ಸಹೋದರರ ಯಶೋಗಥೆ ಇದು.

ಕೊಪ್ಪಳ ಜಿಲ್ಲೆ ಅತಿ ಹೆಚ್ಚು ಭತ್ತವನ್ನ ಬೆಳೆಯುವ ಪ್ರದೇಶ. ತೋಟಗಾರಿಕೆಯಲ್ಲಿ ಅತಿ ಹೆಚ್ಚು ಮಾವು, ಸೀತಾಫಲ, ರಾಮ ಫಲ, ದಾಳಿಂಬ್ರೆ ಹಾಗೂ ಪೇರಲದಂತಹ ವಿವಿಧ ಹಣ್ಣುಗಳನ್ನು ಬೆಳೆದು ಆರ್ಥಿಕವಾಗಿ ಸಬಲಗೊಂಡಿರುವ ರೈತರು ಇದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಪ್ರಗತಿಪರ ತೋಟಗಾರಿಕ ರೈತರಿಗೆ ಸರಕಾರದ ಯೋಜನೆ ಹಾಗೂ ಅದರ ಸದುಪಯೋಗ ಪಡೆದುಕೊಳ್ಳುವುದರ ಬಗ್ಗೆ ಮಾಹಿತಿ ನೀಡಿ ಅತಿ ಹೆಚ್ಚು ತೋಟಗಾರಿಕೆಯಲ್ಲಿ ತೊಡಗಿ ಆರ್ಥಿಕವಾಗಿ ಬಲಗೊಳ್ಳಲು ಉತ್ತೇಜಿಸುತ್ತಾರೆ.
ಕೊಪ್ಪಳ ತಾಲೂಕಿನ ಕಾಮನೂರ ಗ್ರಾಮ ಮಧ್ಯ, ಗುಟ್ಕಾ, ಸೀಗರೇಟ್, ಧೂಮಪಾನ ಹಾಗೂ ಹೋಟೆಲ್‌ನಂತ ಮಾರಾಟದ ಅಂಗಡಿಗಳನ್ನು 35 ವರ್ಷಗಳಿಂದ ನಿಷೇಧ ಮಾಡಿ ಜಿಲ್ಲೆಯಲ್ಲಿಯೇ ಮಾದರಿಯೆನಿಸಿಕೊಂಡಿದೆ. ಹಾಗೆಯೇ ಗ್ರಾಮದ ರೈತರು ಕೃಷಿ ಹಾಗೂ ತೋಟಗಾರಿಕೆಯಲ್ಲೂ ತಾಲೂಕಿನಲ್ಲಿ ಮಾದರಿಯಾಗಿದ್ದಾರೆ ಎಂದು ಹೇಳಬಹುದು.
ಕಾಮನೂರ ಗ್ರಾಮದ ಬಾಲಪ್ಪ ಹಳ್ಳಿರವರು ಒಟ್ಟು 7 ಎಕರೆ ಭೂಮಿಯಲ್ಲಿ ಸಾವಿರಾರು ಅಡಿ ಆಳದಲ್ಲಿ 3 ಕೊಳವೆ ಬಾವಿ ಕೊರೆಸಿದರೂ ನೀರಾವರಿಗೆ ಬೇಕಾದಷ್ಟು ಕನಿಷ್ಠ ಪ್ರಮಾಣದ ನೀರು ಬೀಳುವುದಿಲ್ಲ. ಆದರೂ, ಕುಗ್ಗದ ಬಾಲಪ್ಪರವರ ಮಕ್ಕಳು ಗವಿಸಿದ್ದಪ್ಪ ಹಾಗೂ ಸಹೋದರರು ಎರಡು ಎಕರೆ ಭೂಮಿಯಲ್ಲಿ ನಿಂಬೆ ಗಿಡ ಬೆಳಸೋಣ ಎಂದು ಚರ್ಚೆ ಮಾಡಿಕೊಳ್ಳುತ್ತಾರೆ. ಆದರೆ, ಇದಕ್ಕೆ ಅವರ ತಂದೆ ವಿರೋಧ ಮಾಡುತ್ತಾರೆ. “ಮುಳ್ಳ ತಂದು ಹೊಲದಾಗ ಏನ್ ಬೆಳೆಸ್ತಿರಿ, ಅದು ಬ್ಯಾಡ ಬ್ಯಾರೆ ಏನಾರ ಮಾಡಣ” ಅಂತ ಹೇಳ್ತಾರೆ. ಆದರೂ ಮಕ್ಕಳು ಕೇಳದೇ ಸಾವಿರಾಯ ನಿಂಬೆ ಗಿಡಗಳನ್ನು ತಂದು ನೆಡುತ್ತಾರೆ. ತಂದದ್ದರಲ್ಲಿ ಕೆಲವು ಗಿಡಗಳು ನೀರಿನ ಕೊರತೆಯಿಂದ ಒಣಗಿ ಹೋಗುತ್ತವೆ. ಆದರೂ, ಕುಗ್ಗುವುದಿಲ್ಲ ತಂದೆ ಬಾಲಪ್ಪರವರು “ಇವುಗಳನ್ನ ಕಿತ್ತು ಹೊಗ್ದು ಬಿಡ್ರಿ; ಬ್ಯಾಡಾಬ್ಯಾಡ” ಅಂತ ಸಿಟ್ಟಿನಿಂದ ಕೆಲವು ಗಿಡಗಳನ್ನ ಕಿತ್ತೂ ಬಿಸಾಕಿದರಂತೆ. ಕೊನೆಗೆ ಮಕ್ಕಳ ಒತ್ತಾಯಕ್ಕೆ ಮಣಿದು ಸುಮ್ಮನಾಗುತ್ತಾರೆಂದು ಗವಿಸಿದ್ದಪ್ಪ ಹೇಳುತ್ತಾರೆ.


ಗವಿಸಿದ್ಧಪ್ಪ ಹಾಗೂ ಸಹೋದರರು ನಿಂಬೆ ಗಿಡಗಳನ್ನು 5 ವರ್ಷ ಮಗುವಿನಂತೆ ಪೋಷಣೆ ಮಾಡುತ್ತಾರೆ. ಈ ಮಧ್ಯೆ ಸ್ನೇಹಿತರು, ಸಂಬಂಧಿಕರು, ಅಕ್ಕಪಕ್ಕದವರ ಕುಹಕದ ಮಾತುಗಳಿಗಂತೂ ಕೊರತೆ ಇರಲಿಲ್ಲ. “ನಿಂಬೆ ಬೆಳೆಯಲ್ಲಿಯೇ ನಾವು ಉತ್ತಮವಾಗಿ ಬೆಳೆದು ತೋರಿಸೋಣ; ಆಡಿಕೊಳ್ಳುವವರು ಬಾಯ ಮೇಲೆ ಬೆರಳಿಟ್ಟಕೊಳ್ಳುವಂತೆ ಮಾಡಿ ತೋರಿಸೋಣ ಎಂದು ಛಲಕ್ಕೆ ಬೀಳುತ್ತಾರೆ. ನಿಂಬೆ ಬೆಳೆಯ ಲಾಭ-ನಷ್ಟಗಳ ಬಗ್ಗೆಯೂ ಬೆಳೆದಿರುವ ಬೆಳೆಗಾರರ ಹಾಗೂ ತೋಟಗಾರಿಕೆ ಇಲಾಖೆಯವರ ಮಾಹಿತಿಯನ್ನು ಪಡೆಯುತ್ತಾರೆ. ಅದರ ಮಾರಾಟ, ಮಾರ್ಕೆಟ್ ಬೆಲೆಯ ಏರಿಳಿತದ ಬಗ್ಗೆಯೂ ತಿಳಿಯುತ್ತಾರೆ. 6ನೇ ವರ್ಷಕ್ಕೆ ನಿಂಬೆಯ ಬೆಳೆ ಫಲವತ್ತತೆ ಹಾಗೂ ಹಣ್ಣುಗಳ ಮಾರಾಟದಿಂದ ಬರುವ ಲಾಭ ಕಂಡು ಆಡಿಕೊಂಡು ನಿಂದಿಸಿದ್ದವರು ಬೆಳೆಯ ಕುರಿತು ಮಾಹಿತಿ ಕೇಳಲು ಬರುತ್ತಾರೆ. ತೋಟಗಾರಿಕೆ ಇಲಾಖೆ ಹಾಗೂ ಆಕಾಶವಾಣಿಯವರೂ ಕರೆದು ನಮ್ಮ ಸಂದರ್ಶನ ತೆಗೆದುಕೊಂಡರು ಎಂದು ಗವಿಸಿದ್ದಪ್ಪ ಹೆಮ್ಮೆಯಿಂದ ಹೇಳುತ್ತಾರೆ.
ನಿಂಬೆಗೆ ಕೊಟ್ಟಿಗೆ ಗೊಬ್ಬರ ಬಳಕೆ: 140ಕ್ಕೂ ಹೆಚ್ಚು ಕುರಿಗಳ ಸಾಕಾಣಿಕೆ ಇದೆ. 8 ಹಸು ಹಾಗೂ ಎತ್ತುಗಳಿವೆ. ಅದರಿಂದ ಬರುವ ಕೊಟ್ಟಿಗೆ ಗೊಬ್ಬರವನ್ನೇ ಗಿಡಗಳಿಗೆ ಬಳಸುತ್ತಾರೆ. ಎರಡು ಎಕರೆಯಲ್ಲಿ ಬೆಳೆದಿರುವ ನಿಂಬೆ ಗಿಡಕ್ಕೆ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರವನ್ನೇ ಹೆಚ್ಚು ಬಳಸುತ್ತಾರೆ. ನಿಂಬೆ ಹಣ್ಣಿನ ದರ ಕುಸಿತ ಕಂಡಾಗ ಗಿಡದಿಂದ ಉದುರಿದ ಹಣ್ಣುಗಳನ್ನು ನೆಲದಲ್ಲೇ ಕೊಳಯಲು ಬಿಡುತ್ತಾರಂತೆ. ‘ಅದರ ಗೊಬ್ಬರ ಅಲ್ಲಿಯೇ ತಯಾರಾಗುತ್ತದೆ’ ಎಂದು ಹೇಳುತ್ತಾರೆ. ಗಿಡಗಳಿಗೆ ರೋಗ ತಗುಲಿದರೆ 10 ಲೀಟರ್ ಕ್ಯಾನ್‌ಗೆ ಶಾಂಪು ಹಾಗೂ ಗಿಡದ ತಳಗೆ ಉದುರಿ ಬಿದ್ದ ನಿಂಬೆ ಹಣ್ಣನ್ನೇ ಔಷಧಿಯಾಗಿ ತಯಾರಿಸಿ ಮರಗಳಿಗೆ ಸಿಂಪಡಿಸುತ್ತೇವೆ” ಎಂದು ಗವಿಸಿದ್ದಪ್ಪ ಹೇಳುತ್ತಾರೆ.
ತಾವೇ ಮಾರಾಟಗಾರರು: ನಿಂಬೆ ನಿರಂತರವಾಗಿ ಫಲ ಕೊಡುವ ಬೆಳೆ ಆದುದರಿಂದ ನಷ್ಟ ಆಗಲಾರದು ಎಂಬ ಭರವಸೆ ರೈತರಿಗೆ. ಮರದಲ್ಲಿಯೇ ಕೆಲವು ಮಾಗಿ ಹಣ್ಣಾದಾಗ ಕಿತ್ತು ಚೀಲ ತುಂಬಿ ಅದನ್ನು ಮಾರುಕಟ್ಟೆಗೆ ತಂದು ಮಾರುವುದಿಲ್ಲ. ಮಧ್ಯವರ್ತಿಗಳಿಂದ ಮೋಸಕ್ಕೊಳಗಾಗದೇ ಮತ್ತು ವ್ಯಾಪಾರಸ್ಥರ ಜೊತೆಗೂ ವ್ಯವಹರಿಸದೆ, ನೇರವಾಗಿ ಗ್ರಾಹಕರಿಗೆ ಕೊಡುತ್ತಾರೆ. ಮಾರುಕಟ್ಟೆ, ವ್ಯಾಪಾರಗಾರರಿಗೆ ಕೊಡದೆ ಸಂತೆಯಲ್ಲಿ ತಾವೇ ನಿಂತು ಮಾರಾಟ ಮಾಡಿದರೆ, 2.5 ಸಾವಿರದವರೆಗೂ ಲಾಭವಾಗುತ್ತದೆ ಎಂದು ಹೇಳುತ್ತಾರವರು.



ತಿಂಗಳಿಗೆ 75-80 ಸಾವಿರ ರೂಪಾಯಿ ಲಾಭ: 5 ವರ್ಷ ಹೆಂಗೋ ನಿಂದಿಸುವವರ ಹಾಗೂ ಆಡಿಕೊಳ್ಳುವವರ ಮಾತಿಗೆ ಕಿವಿಗೊಡದೆ ಗಿಡ ಬೆಳೆಸಿ ಈಗ 15 ವರ್ಷದ ಗಿಡಗಳು ಇವೆ. ಸುಮಾರು 10 ವರ್ಷಗಳಿಂದ ನಿಂಬೆ ಹಣ್ಣಿನಿಂದ ನಷ್ಟವಾಗಿದೆ ಎಂಬ ಸಲ್ಲೂ ಇಲ್ಲ. ತಿಂಗಳಿಗೆ 75 ರಿಂದ 80 ಸಾವಿರದವರೆಗೂ ಹಾಗೂ ವರ್ಷಕ್ಕೆ 8.5 ರಿಂದ 9 ಸಾವಿರ ರೂಪಾಯಿಗೂ ಹೆಚ್ಚು ಸಂಪಾದನೆ ಆಗುತ್ತದೆ ಎಂದು ಗವಿಸಿದ್ಧಪ್ಪ ಹೆಮ್ಮೆಯಿಂದ ಹೇಳುತ್ತಾರೆ.
ರೈತ ಗವಿಸಿದ್ದಪ್ಪ ಹಳ್ಳಿ ಈದಿನ.ಕಾಮ್ನೊಂದಿಗೆ ಮಾತನಾಡಿ, “ವರ್ಷಕ್ಕೆ ನಿಂಬೆ ಗಿಡ ಸ್ವಚ್ಛ ಮಾಡಿಸುವುದು, ಔಷಧಿ ಸಿಂಪಡಿಸುವುದು, ಇತರೆಯಾಗಿ ಸುಮಾರು 20 ಸಾವಿರ ರೂಪಾಯಿ ಖರ್ಚು ಬರುತ್ತದೆ. ಖರ್ಚು ಹೆಚ್ಚಾಗಲ್ಲ. ಮಳೆಗಾಲದಲ್ಲಿ ಇಳುವರಿ ಹೆಚ್ಚು ಇರತೈತಿ; ಆದ್ರ ಬೆಲಿ ಕಡಿಮೆ ಇರತೈತಿ. ಬ್ಯಾಸಿಗಿಗ ಇಳವರಿ ಇರಲ್ಲ ರೇಟ್ ಜಾಸ್ತಿ ಇರತೈತಿ. ಆಗ ನಮಗ ಲಾಭ ಸಿಗ್ತೈತಿ. ಆದ್ರ, ನಮ್ಮಪ್ಪ ಬ್ಯಾಡ ತಗ್ದ ಬಿಡ್ರಿ ಅಂತಂದ ಹಟ ಹಿಡ್ದಿದ್ದ, ನಾಂವ ಹ್ಯಾಂಗ್ ಒಪ್ಪಿಸಿದ್ವಿ ಅಪ್ಪನ ಈಗ ಅವ್ರ ‘ಬಾಳ ತಪ್ಪ ಮಾಡ್ತಿದ್ದೆ ನಾ ಗಿಡ ಕಿತ್ತು ಈಗ ಚೊಲ ಆತು ನೀವು ಬಿಡ್ಸಿದ್ದು’ ಅಂತ ಹೇಳ್ತಾರ. ಲಾಭ ಐತ್ರಿ ಜನ ಏನ ಕೆಲ್ಸ ಮಾಡಿದ್ರೂ ಮನಸ್ಸಿನಿಂದ ಮತ್ತ ಬೆವರಳಿಸಿ ದುಡ್ದರ ಎಲ್ಲಾ ಬೆಳಿನೂ ಚೊಲ ಬರ್ತಾವು” ಎಂದರು.
ಇದನ್ನೂ ಓದಿ: ಕೊಪ್ಪಳ | 17ರ ಬಾಲಕಿ ಮೇಲೆ ಗ್ರಾಪಂ ನೌಕರನಿಂದ ಅತ್ಯಾಚಾರ; ಪೋಕ್ಸೊ ದಾಖಲು
ಗವಿಸಿದ್ದಪ್ಪ ನಿಂಬೆಯ ಜೊತೆಗೆ ಉಪ ಬೆಳೆಯಾಗಿ ಚಂಡು ಹೂವು, ಸೇವಂತಿಗೆ ಹಾಗೂ ವಿವಿಧ ತರದ ಹಣ್ಣಿನ ಗಿಡಗಳನ್ನೂ ನೆಟ್ಟು ಅದರಿಂದ ಮನೆಗೆ ಹಾಗೂ ಸ್ವಲ್ಪಮಟ್ಟಿಗೆ ಸಂತೆಯಲ್ಲಿ ಇಟ್ಟೂ ಮಾರಾಟ ಮಾಡುತ್ತಾರೆ.
ಕೃಷಿ, ತೋಟಗಾರಿಕೆ ಮಾಡುವುದೆಂದರೆ ಮೈಮೇಲೆ ಆಕಾಶವೇ ಕಳಚಿ ಬಿದ್ದಂತೆ ವರ್ತಿಸುವ ಜನಗಳ ಮಧ್ಯೆ ಗವಿಸಿದ್ದಪ್ಪ ಹಾಗೂ ಸಹೋದರರು ಪ್ರೇರಣೆಯಾಗುತ್ತಾರೆ. ನಿಂಬೆಯಲ್ಲಿ ಹಲವಾರು ಔಷಧಿ ಗುಣಗಳಿವೆ. ನಿತ್ಯವೂ ಆಹಾರದಲ್ಲಿ ಬಳಸುತ್ತಾರೆ. ದೈಹಿಕ ನ್ಯೂನ್ಯತೆಗಳಿಗೂ ಬಳಸುತ್ತಾರೆ. ಒಟ್ಟಿನಲ್ಲಿ ಆರೋಗ್ಯಕರವಾದ ಫಲ ಎಂದು ಹೇಳಬಹುದು. ಕೇವಲ ಎರಡು ಎಕರೆಯಲ್ಲಿ ನಿಂಬೆ ಬೆಳೆದು ತಿಂಗಳಿಗೆ ಲಕ್ಷದ ಸಮೀಪದವರೆಗೂ ಸಂಪಾಧಿಸಬಹುದು ಎಂದು ಕಾಮನೂರಿನ ಗವಿಸಿದ್ಧಪ್ಪ ಮಾದರಿ ಹಾಗೂ ಪ್ರೇರಣೆಯಾಗಿದ್ದಾರೆ.





