ಕೊಪ್ಪಳ ಜಿಲ್ಲೆಯ ಯಲಬುರ್ಗ ವ್ಯಾಪ್ತಿಯ ಮದ್ಲೂರು ಗ್ರಾಮದಲ್ಲಿ ನಡೆದ ಕೊಟ್ಟ ಸಾಲ ವಾಪಸ್ ಕೇಳಿದ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS) ತೀವ್ರವಾಗಿ ಖಂಡಿಸಿದೆ.
“ಮಹಿಳೆಯೊಬ್ಬರಿಗೆ ಆರು ತಿಂಗಳ ಹಿಂದೆ ಪರಿಚಿತನಾಗಿದ್ದ ವ್ಯಕ್ತಿ ಸಾಲ ಹಿಂದಿರುಗಿಸುವ ನೆಪದಲ್ಲಿ ಕರೆಸಿಕೊಂಡು ಆತನ ಮೂವರು ಸ್ನೇಹಿತರೊಂದಿಗೆ ಸೇರಿ ಬಲವಂತವಾಗಿ ಮದ್ಯ ಕುಡಿಸಿ ಅವಳ ಮೇಲೆ ಅತ್ಯಾಚಾರ ಎಸಗಿದ್ದಾರೆ. ಜಿಲ್ಲೆಯಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವೆಂಬುದು ಈ ಘಟನೆಯಿಂದ ತಿಳಿಯುತ್ತದೆ. ಮಹಿಳೆ ಎಲ್ಲಿ ಹೋದರೂ ಇಂತಹ ದುರುಳರು ಇದ್ದೇ ಇರುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದರು.
“ಇತ್ತೀಚೆಗೆ ಕೊಪ್ಪಳ ನಗರದ ಪಕ್ಕದ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅಣ್ಣನೇ ನಿರಂತರ ಅತ್ಯಾಚಾರ ಎಸಗಿ ಚಿಕ್ಕ ವಯಸ್ಸಿನಲ್ಲಿ ತಾಯಿಯಾಗಲು ಕಾರಣನಾದ ಘಟನೆ ಇನ್ನೂ ಮಾಸಿಲ್ಲ. ಅಷ್ಟರಲ್ಲೇ ಕೊಟ್ಟ ಹಣ ಕೇಳಲು ಬಂದವಳ ಮೇಲೆ ಪ್ರಾಣಿಗಳಂತೆ ಎರಗಿರುವುದು ಮನುಷ್ಯ ಸಮಾಜ ತಲೆತಗ್ಗಿಸುವಂತಾಗಿದೆ. ಆದರೆ ಇದು ಇಷ್ಟಕ್ಕೆ ಸೀಮಿತಗೊಳ್ಳದೆ ಶೀಘ್ರ ತನಿಖೆ ನಡೆಸಿ ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಬೇಕು” ಎಂದು ಸಂಘಟನೆಯ ಮುಖ್ಯಸ್ಥರು ಆಗ್ರಹಿಸಿದರು.
ಇದನ್ನೂ ಓದಿ: ಕೊಪ್ಪಳ | ಮಠಾಧೀಶರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು: ತೋಂಟದಾರ್ಯ ಶ್ರೀ
“ಮಹಿಳೆಯರ ಮೇಲೆ ದಿನನಿತ್ಯ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳ ವಿರುದ್ಧ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಗಳು ಇಚ್ಛಾಶಕ್ತಿ ಹೊಂದಿಲ್ಲದೆ ಇರುವುದು ಇಂತಹ ಘಟನೆಗಳು ಹೆಚ್ಚಾಗಲು ಕಾರಣವಾಗಿದೆ. ಸಮಾಜದಲ್ಲಿ ಮೌಲ್ಯಗಳ ಕುಸಿತದಿಂದಾಗುತ್ತಿರುವ ಸಾಂಸ್ಕೃತಿಕ ಅವನತಿಯ ಗುರುತುಗಳೇ ಇಂತಹ ಪ್ರಕರಣಗಳು. ಜೊತೆಗೆ ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಅಶ್ಲೀಲ ಸಿನಿಮಾ-ಸಾಹಿತ್ಯ, ಪೋರ್ನ್ ವೆಬ್ಸೈಟ್‌ಗಳು, ಮದ್ಯ, ಮಾದಕ ವಸ್ತುಗಳು ವಿದ್ಯಾರ್ಥಿ-ಯುವಕರನ್ನು ವಿಕೃತ ಕೃತ್ಯಗಳಲ್ಲಿ ತೊಡಗುವಂತೆ ಪ್ರೇರೆಪಿಸುತ್ತಿವೆ. ಸಮಾಜದ ನೈತಿಕ ಬೆನ್ನೆಲುಬು ಮುರಿಯುವ ಇಂತಹ ಹುನ್ನಾರದ ಹಿಂದಿರುವ ಸರ್ಕಾರಗಳು ಮತ್ತು ವ್ಯವಸ್ಥೆಯ ವಿರುದ್ಧ ಪ್ರಜ್ಞಾವಂತ ಜನತೆ ಒಗ್ಗಟ್ಟಾಗಿ ಹೋರಾಟ ಕಟ್ಟುವುದು ಘಳಿಗೆಯ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಜನತೆ ಮುಂದೆ ಬರಬೇಕು” ಎಂದು ಕರೆ ನೀಡಿದರು.





