ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೋನಸಾಗರದಲ್ಲಿ ದಲಿತ ಯುವಕನ ಮನೆಗೆ ಬೆಂಕಿ ಹಚ್ಚಿದವರ ವಿರುದ್ಧ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಾಮೂಹಿಕ ಸಂಘಟನೆ ಹೋರಾಟ ಸಮಿತಿ(ಎಸ್‌ಎಸ್‌ಎಚ್‌ಎಸ್) ಬೃಹತ್ ಪ್ರತಿಭಟನೆ ನಡೆಸಿತು.
ನಗರದ ಅಂಬೇಡ್ಕರ್ ವೃತ್ತದಿಂದ ಪಾದಯಾತ್ರೆ ಹೊರಟ ಮೆರವಣಿಗೆ ಅಶೋಕ ವೃತ್ತದ ಮೂಲಕ ಹಾದು ಹೋಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್ ಅರಸಿದ್ಧಿಯವರಿಗೆ ಮನವಿ ಸಲ್ಲಿಸಿ, “ಕೋನಸಾಗರದ ದಲಿತ ಯುವಕ ಮೌನೇಶ್ ಕುಟಂಬದ ಮನೆಗೆ ಸವರ್ಣೀಯರು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಬಗ್ಗೆ ಅನುಮಾನವಿದ್ದು, ಪೋಲೀಸ್‌ರು ತನಿಖೆ ಮಾಡಿ ಕಾನೂನು ಕ್ರಮ ಜರುಗಿಸಬೇಕು” ಎಂದು ಸಾಮೂಹಿಕ ಸಂಘಟನೆ ಹೋರಾಟ ಸಮಿತಿ ಒತ್ತಾಯಿಸಿತು.
ಮಾದಿಗ ಸಮಾಜದ ಮುಖಂಡ ಕರಿಯಪ್ಪ ಗುಡಿಮನಿ ಮಾತನಾಡಿ, “ಇತ್ತಿಚೆಗೆ ಕೋನಸಾಗರದಲ್ಲಿ ದಲಿತ ಯುವಕ ಮೌನೇಶರವರ ಮನೆಗೆ ಬೆಂಕಿ ಹಚ್ಚಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಆರೋಪಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸುಖಾಸುಮ್ಮನೆ ದಲಿತ ಯುವಕರ ಮೇಲೆ ರೌಡಿಶೀಟರ್ ಪ್ರಕರಣ ದಾಖಲಿಸಿ ಮಾನಸಿಕ ಕಿರುಕುಳ ನೀಡುತ್ತಿರುವ ಯಲಬುರ್ಗಾ ಪೊಲೀಸ್ ಠಾಣೆಯ ಪಿಎಸ್‌ಐ ವಿಜಯ ಪ್ರತಾಪ, ಮುಖ್ಯಪೇದೆ ಹನಮಂತಪ್ಪ ಭಂಗಿ ಹಾಗೂ ವಿತ್ತಲಗೌಡ ಗೌಡರ ಎಂಬುವ ದಲಿತ ವಿರೋಧಿಗಳನ್ನು ಅಮಾನತುಗೊಳಿಸಿ ಜಿಲ್ಲೆಯಿಂದ ವರ್ಗಾಯಿಸಬೇಕು” ಎಂದು ಆಗ್ರಹಿಸಿದರು.
“ಮನೆ ಸುಟ್ಟ ಆರೋಪಿಗಳ ಪತ್ತೆಗೆ, ಈಗಿರುವ ಡಿವೈಎಸ್‌ಪಿ ಬಿಟ್ಟು ಬೇರೊಬ್ಬರ ನೇತೃತ್ವದಲ್ಲಿ ವಿಶೇಷ ತನಿಖೆ ತಂಡವನ್ನು ನೇಮಿಸಬೇಕು. ಜಿಲ್ಲಾದ್ಯಂತ ಇನ್ನೂ ದಲಿತರ ಮೇಲಿನ ದೌರ್ಜನ್ಯಗಳು ನಿಂತಿಲ್ಲ. ದಲಿತರಾರಿಗೂ ನ್ಯಾಯ ಸಿಗುತ್ತಿಲ್ಲ. ಎಲ್ಲಿವರೆಗೂ ನಮ್ಮ ಸಮುದಾಯಗಳಿಗೆ ಈ ಸಾಮಾಜಿಕವಾಗಿ ಕ್ರೂರ ಶಿಕ್ಷೆ? ಜಾತಿ ದೌರ್ಜನ್ಯ ಎಸಗುವವರಿಗೆ ಜೈಲು ಶಿಕ್ಷೆಯಾಗಬೇಕು. ಅಂಥವರಿಗೆ ಗ್ರಾಮ ವಾಸ ಸಾಕು ಮಾಡಬೇಕು. ಜಿಲ್ಲಾಡಳಿತ ಇಂತಹ ಅಣಕು ಪ್ರದರ್ಶನ ಮಾಡುವುದನ್ನು ಬಿಟ್ಟು ದಲಿತರಿಗೆ ವಿಷ ಕೊಟ್ಟುಬಿಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದಲಿತರ ಮನೆಗೆ ಬೆಂಕಿ ಹಚ್ಚಲು, ಇದಕ್ಕೆ ಜಿಲ್ಲೆಯ ಪೊಲೀಸ್ ರಕ್ಷಣಾ ನಿರ್ಲಕ್ಷ್ಯವೇ ಸಾಕ್ಷಿ. ಈವರೆಗೂ ಜಿಲ್ಲೆಯಲ್ಲಿ ನಡೆದಿರುವ ಪ್ರಕರಣಗಳೇ ಇದಕ್ಕೆ ಸಾಕ್ಷಿಯಾಗಿ ಕಣ್ಣಿಗೆ ರಾಚುತ್ತಿವೆ. ಇಂತಹ ಪ್ರಕರಣಗಳ ಸಾಲಿಗೆ ಕೋನಸಾಗರ ಗ್ರಾಮದ ದಲಿತ ಹೋರಾಟಗಾರ ಮೌನೇಶ್ ಮೇಲೆ ದುರುದ್ಧೇಶದಿಂದ ಪಿಎಸ್‌ಐ ಮೂಲಕ ದೂರುಗಳ ಮೇಲೆ ದೂರು ಕೊಟ್ಟು ರೌಡಿ ಶೀಟ್ ಪ್ರಕರಣ ದಾಖಲಿಸಿ ಅವರನ್ನು ಮಾನಸಿಕವಾಗಿ ಕುಗ್ಗಿಸುತ್ತಿದ್ದಾರೆ. ಅಲ್ಲದೆ ಮೇಲ್ವರ್ಗದವರು ಮನೆ ಸುಟ್ಟು ಹಾಕುವ ಮೂಲಕ ಆ ಕುಟುಂಬಕ್ಕೆ ಆರ್ಥಿಕ ಪೆಟ್ಟು, ಮಾನಸಿಕ ಒತ್ತಡ ಹೇರಿ ಬದುಕನ್ನೇ ಮೂರಾಬಟ್ಟೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸದ್ದಿ ಓದಿದ್ದೀರಾ? ಸಿಂದಗಿ | ದೀಪಾವಳಿ ಧರ್ಮಾಂತರದ ಗಡಿಗಳನ್ನು ಮೀರಿ ಮಾನವೀಯತೆ ಬೆಳಗಬೇಕು: ಶಾಂತಗಂಗಾಧರ ಶ್ರೀ
“ಮೌನೇಶ್ ಅವರ ಮನೆಯನ್ನು ಸುಟ್ಟು ಹಾಕಿರುವ ಸವರ್ಣೀಯ ಹನಮಂತಪ್ಪ, ಭೀಮಪ್ಪ, ನಿಂಗಪ್ಪ ಸೇರಿದಂತೆ ಇತರರ ಮೇಲೆ ಅನುಮಾನವಿದ್ದು, ಕೂಡಲೇ ಇವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಬಳಿಕ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ನೊಂದ ಕುಟುಂಬಕ್ಕೆ ಮನೆ ಸುಟ್ಟ ಪ್ರಕರಣದಡಿ ವಸತಿ, ಭೂಮಿ, ಆರ್ಥಿಕ ಅಭಿವೃದ್ಧಿಗೆ ಪರಿಹಾರ ನೀಡಬೇಕು” ಎಂದು ವಿವಿಧ ಹಕ್ಕೊತ್ತಾಯ ಸಲ್ಲಿಸಿದರು.





