ಕೊಪ್ಪಳದ ಗಂಗಾವತಿ ನಗರದ ಹಲವು ಓಣಿಗಳಲ್ಲಿ ಕಳೆದ 3-4 ದಿನದಿಂದ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ತೆರೆದ ಚರಂಡಿಯಿಂದ ತ್ಯಾಜ್ಯ ವಿಲೇವಾರಿಯಾಗದಿರುವುದು ನಿತ್ಯ ತೀವ್ರ ಸಂಕಷ್ಟಕ್ಕೀಡುಮಾಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ಶೀಘ್ರವೇ ಈ ಸಮಸ್ಯೆಗಳನ್ನು ಪರಿಹರಿಸಬೇಕೆಂದು ನಗರ ನಿವಾಸಿಗಳು ಆಗ್ರಹಿಸಿದರು.
ಗಂಗಾವತಿ ನಗರದ ಮುರಾರಿ ಕ್ಯಾಂಪ್, ಲಕ್ಷ್ಮಿ ಕ್ಯಾಂಪ್, ಗುಂಡಮ್ಮ ಕ್ಯಾಂಪ್ ಬೈಪಾಸ್, ಗೌಳಿ ಮಹಾದೇವಪ್ಪ ರಸ್ತೆ ವಿವಿಧ ಬಡಾವಣೆಯಲ್ಲಿ ರಸ್ತೆ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಕಳೆದ 3 ದಿನಗಳಿಂದ ಕುಡಿಯುವ ನೀರು ಬಾರದೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಚರಂಡಿಯಿಂದ ತೆಗೆದ ಕಸವನ್ನು ವಿಲೇವಾರಿ ಮಾಡದೆ ಅಲ್ಲಿಯೇ ಪಕ್ಕದಲ್ಲಿ ಬಿಟ್ಟಿರುವುದರಿಂದ ಬಡಾವಣೆಯ ನಿವಾಸಿಗಳಿಗೆ ಸಂಚರಿಸಲು ಹಾಗೂ ಮನೆಗಳ ಮುಂದೆ ಕೆಸರಿನಿಂದ ಕಲುಷಿತದಿಂದ ನೈರ್ಮಲ್ಯವಾಗಿರುತ್ತದೆ. ಚರಂಡಿಯಿಂದ ತೆಗೆದ ತ್ಯಾಜ್ಯದಿಂದ ದುರ್ವಾಸನೆ ಹೆಚ್ಚಾಗಿದ್ದು ಸೊಳ್ಳೆಗಳ ಕಾಟ ಹೆಚ್ಚಾಗಿ ರೋಗಗಳು ಹರಡುತ್ತಿವೆ ಎಂದು ಸ್ಥಳೀಯರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ | ತಿರಸ್ಕೃತ ಸಸಿಯಿಂದಲೇ ಲಾಭದ ಬದುಕು! ನಿಂಬೆ ಬೆಳೆದು ಯಶಸ್ಸು ಕಂಡ ರೈತ ಗವಿಸಿದ್ದಪ್ಪ
ಬಳಕೆಗೆ ಹಾಗೂ ಕುಡಿಯಲು ನೀರಿನ ಅಭಾವ ಹೆಚ್ಚಾಗಿದ್ದು ನಗರಸಭೆಯವರು ನೀರು ಪೂರೈಕೆ ಮಾಡಬೇಕು ಮತ್ತು ಚರಂಡಿಯ ಕಸವನ್ನು ಬೇಗ ವಿಲೇವಾರಿ ಮಾಡಿ ಸಾರ್ವಜನಿಕರಗೆ ಅನುಕೂಲ ಮಾಡಿಕೊಡಬೇಕು. ಪ್ರತಿ ಬಾರಿಯೂ ಹಬ್ಬದ ಸಂದರ್ಭದಲ್ಲಿಯೇ ನಗರಸಭೆಯವರು ನಗರದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರನ್ನು ತಾಂತ್ರಿಕ ತೊಂದರೆಯ ನೆಪದಲ್ಲಿ ಬಿಡುತ್ತಿಲ್ಲ. ಆದ್ದರಿಂದ, ನಗರಸಭೆಯವರು ಹಬ್ಬದ ಸಂದರ್ಭದಲ್ಲಿ ನಿರಂತರವಾಗಿ ನೀರನ್ನು ಬಿಡುವ ಮೂಲಕ ಕುಡಿಯಲು ಮತ್ತು ಇತರೆ ಕೆಲಸ ಕಾರ್ಯಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಹಿಳೆಯರು ಒತ್ತಾಯಿಸಿದರು.





